ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ವಿಧಾನ ಪರಿಷತ್ ಸದಸ್ಯ, ಬಿಇಟಿ ಟ್ರಸ್ಟ್ ಚೇರ್‍ಮನ್ ಮಧು ಜಿ.ಮಾದೇಗೌಡರ 60ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಬೃಹತ್ ರಕ್ತದಾನ ಶಿಬಿರದಲ್ಲಿ 197 ಯೂನಿಟ್ ರಕ್ತವನ್ನು ಸಂಗ್ರಹಿಸಿ ಮಿಮ್ಸ್ ಬ್ಲಡ್ ಬ್ಯಾಂಕಿಗೆ ಹಸ್ತಾಂತರಿಸಲಾಯಿತು.ಭಾರತೀ ವಿದ್ಯಾಸಂಸ್ಥೆ ಆವರಣದ ಡೈಮಂಡ್ ಜ್ಯುಬಿಲಿ ಬ್ಲಾಕ್‌ನಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್‌ನ ಟ್ರಸ್ಟಿಗಳು, ಅಂಗ ಸಂಸ್ಥೆಗಳ ಬೋಧಕ-ಬೋಧಕೇತರರು ಮತ್ತು ವಿದ್ಯಾರ್ಥಿ ವೃಂದ ಮತ್ತು ಮಧು ಜಿ.ಮಾದೇಗೌಡ ಅಭಿಮಾನಿ ಬಳಗ, ಆಶಯ್ ಜಿ. ಮಧು ಅಭಿಮಾನಿ ಬಳಗ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್), ಮಂಡ್ಯ ರೆಡ್ ಕ್ರಾಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು.
ಇದಕ್ಕೂ ಮುನ್ನ ಶಿಬಿರಕ್ಕೆ ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಚಾಲನೆ ನೀಡಿ ಮಾತನಾಡಿ, ದಿಟ್ಟ ಹೋರಾಟಗಾರ, ಹಿರಿಯ ಗಾಂಧಿವಾಧಿ, ಮಾಜಿ ಸಂಸದ ದಿ.ಜಿ. ಮಾದೇಗೌಡರ ಪುತ್ರರಾದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರ ಹುಟ್ಟುಹಬ್ಬದ ವೇಳೆ ರಕ್ತದಾನ ಶಿಬಿರ ಆಯೋಜಿರುವುದು ನಿಜಕ್ಕೂ ಶ್ಲಾಘನೀಯ ಎಂದರು.ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸಿ. ಇದರಿಂದ ನಿಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಎಂದರು.
ನಂತರ ಮಾತನಾಡಿದ ಕೆ.ಟಿ.ಹನುಮಂತು, ರಕ್ತದಾನಕ್ಕಿಂತ ಮಿಗಿಲಾದ ಸೇವೆ ಮತ್ತೊಂದಿಲ್ಲ. ಪ್ರತಿಯೊಬ್ಬ ರಕ್ತದಾನಿಯು ಜೀವ ರಕ್ಷಕ. ಒಬ್ಬ ವ್ಯಕ್ತಿಯಿಂದ ತೆಗೆದ ಒಂದು ಯೂನಿಟ್ ರಕ್ತವು ಮೂರು ಜನರ ಪ್ರಾಣವನ್ನು ಉಳಿಸುತ್ತದೆ. ರಕ್ತದಾನ ಮಾಡುವುದು ಮಾನವರ ಕರ್ತವ್ಯ ಎಂದು ಭಾವಿಸುವುದು ಬಹಳ ಮುಖ್ಯ ಎಂದರು.ರಕ್ತ ಕೊಟ್ಟರೆ ದೇಹ ದುರ್ಬಲವಾಗುತ್ತದೆ ಎಂಬ ತಪ್ಪು ಕಲ್ಪನೆ ಬೇಡ. ರಕ್ತದಾನ ಮಾಡುವ ಜನರು ಹೃದಯಘಾತ, ಕ್ಯಾನ್ಸರ್ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ. ನಿರಂತರವಾಗಿ ರಕ್ತದಾನ ಮಾಡುವ ಜನರು ಇತರರಿಗಿಂತ ನಾಲ್ಕು ವರ್ಷಗಳವರೆಗೆ ಹೆಚ್ಚು ಕಾಲ ಬದುಕುತ್ತಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ಆದ್ದರಿಂದ ಪ್ರತಿಯೊಬ್ಬರು ನಿರಂತರವಾಗಿ ರಕ್ತದಾನ ಮಾಡುವ ಪ್ರವೃತಿಯನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ವೇಳೆ ಭಾರತೀ ಹೆಲ್ತ್‌ಸೈನ್ಸ್‌ಸ್ ನಿರ್ದೇಶಕ ಡಾ. ತಮಿಜ್‌ಮಣಿ, ವಿವಿಧ ವಿಭಾಗದ ಪ್ರಾಂಶುಪಾಲರಾದ ಡಾ.ಬಾಲಸುಬ್ರಮಣ್ಯಂ, ಡಾ.ಜಗದೀಶ್, ಡಾ. ಶಾಂತಕುಮಾರ್, ಡಾ. ಮಹೇಶ್‌ಕುಮಾರ್ ಜಿ.ಲೋನಿ, ಮುರುಳೀಧರ್ ಭಟ್, ರಫೀಕ್ , ಡಾ. ಮಂಜು ಎಂ.ಜೆಕಪ್, ಡಾ. ಪ್ರಮೀಳ, ಡಾ ಸ್ವರೂಪ, ಡಾ. ವಿಘ್ನೇಶ್ವರಿ, ಡಾ. ಬಿ.ಎಸ್. ಸುರೇಶ್, ಡಾ. ಮನು, ರಶ್ಮಿ, ತಾಪಂ ಮಾಜಿ ಸದಸ್ಯರಾದ ಭರತೇಶ್, ಬಿ.ಗರೀಶ್, ಮುಖಂಡರಾದ ಅಣ್ಣೂರು ಸಿದ್ದಪ್ಪ, ಸ್ವರೂಪ್ ಸೇರಿದಂತೆ ಮತ್ತಿತರಿದ್ದರು.