ಮಧುಗಿರಿ, ರಾಯಚೂರಲ್ಲೂ ಗಣೇಶ ವಿಸರ್ಜನೆ ವೇಳೆ ಗಲಾಟೆ

| Published : Sep 13 2024, 01:31 AM IST

ಸಾರಾಂಶ

ಗಣೇಶ ಮೂರ್ತಿ ವಿಸರ್ಜನೆ ವೇಳೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಹಾಗೂ ರಾಯಚೂರಿನಲ್ಲಿ ಯುವಕರ ಗುಂಪುಗಳ ನಡುವೆ ಮಾರಮಾರಿ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಮಧುಗಿರಿ/ ರಾಯಚೂರುಗಣೇಶ ಮೂರ್ತಿ ವಿಸರ್ಜನೆ ವೇಳೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಹಾಗೂ ರಾಯಚೂರಿನಲ್ಲಿ ಯುವಕರ ಗುಂಪುಗಳ ನಡುವೆ ಮಾರಮಾರಿ ಘಟನೆ ನಡೆದಿದೆ.

ಮಧುಗಿರಿಯ ಮೇಕೆಬಂಡೆ ಸಮೀಪ ಗಣೇಶ ವಿಸರ್ಜನೆ ಮಾಡುವಾಗ ಎರಡು ಯುವಕರ ನಡುವೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದ್ದು, ಮಧು ಎಂಬಾತನ ಹೊಟ್ಟೆಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ಗಾಯಾಳು ಯುವಕನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸಿ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ರಾಯಚೂರಿನ ತಿಮ್ಮಾಪುರಪೇಟೆ ಹಾಗೂ ಹರಿಜನವಾಡ ಗಣೇಶ ಮೂರ್ತಿಗಳ ಮೆರವಣಿಗೆ ವೇಳೆ ಬೇಗ ಮೆರವಣಿಗೆ ಸಾಗುತ್ತಿಲ್ಲ ಎಂಬ ಕಾರಣಕ್ಕೆ 2 ಗುಂಪುಗಳ ನಡುವೆ ಗಲಾಟೆ ನಡೆದಿದೆ. ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಲಘು ಲಾಠಿ ಪ್ರಹಾರ ಮಾಡಿ ಯುವಕರ ಗುಂಪನ್ನು ಚದುರಿಸಿ ಯಾವುದೇ ಹಾನಿ ಆಗದಂತೆ ತಡೆದು ಗಣೇಶ ಮೂರ್ತಿಯ ಮೆರವಣಿಗೆ ಮುಂದೆ ಸಾಗಲು ಅನುವು ಮಾಡಿಕೊಟ್ಟರು.