ನಿರಂತರ ಮಳೆಗೆ ಮಧುಗಿರಿ ಕೋಟೆ ಗೋಡೆ ಕುಸಿತ

| Published : Oct 24 2024, 12:38 AM IST / Updated: Oct 24 2024, 12:39 AM IST

ಸಾರಾಂಶ

ಎಡೆಬಿಡದೆ ಸುರಿದ ಮಳೆಗೆ ವಿಶ್ವದ ಜನ, ಮನ ಸೆಳೆದ ಏಕಶಿಲಾ ಗಿರಿಯ ಕಲ್ಲು ಕೋಟೆ ಗೋಡೆ ಕುಸಿದು ಬೀಳುತ್ತಿದೆ. ಹೆಚ್ಚು ಮಳೆ ಸುರಿದ ಪರಿಣಾಮ ತೇವಾಂಶದಿಂದಾಗಿ ಶಿಥಿಲಗೊಂಡಿದ್ದು ಇದು ಹೀಗೆ ಮುಂದುವರಿದರೆ ಅಪಾಯಗಳು ಸಂಭವಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಕನ್ನಡಪ್ರಭ ವಾರ್ತೆ ಮಧುಗಿರಿ

ಎಡೆಬಿಡದೆ ಸುರಿದ ಮಳೆಗೆ ವಿಶ್ವದ ಜನ, ಮನ ಸೆಳೆದ ಏಕಶಿಲಾ ಗಿರಿಯ ಕಲ್ಲು ಕೋಟೆ ಗೋಡೆ ಕುಸಿದು ಬೀಳುತ್ತಿದೆ. ಹೆಚ್ಚು ಮಳೆ ಸುರಿದ ಪರಿಣಾಮ ತೇವಾಂಶದಿಂದಾಗಿ ಶಿಥಿಲಗೊಂಡಿದ್ದು ಇದು ಹೀಗೆ ಮುಂದುವರಿದರೆ ಅಪಾಯಗಳು ಸಂಭವಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇದನ್ನು ಗಮನಿಸಿದ ನಗರದ ನಾಗರಿಕರು, ಪ್ರವಾಸಿಗರು ರಾಜ್ಯ ಪ್ರವಾಸೋಧ್ಯಮ ಮತ್ತು ಕೇಂದ್ರ ಪುರಾತತ್ವ ಇಲಾಖೆ ಕಾರ್ಯವೈಖರಿ ವಿರುದ್ಧ ಕಿಡಿಕಾರಿದ್ದಾರೆ.

ಈ ಮಹಾ ಮಳೆಗೆ ಕುಂಬಾರ ಗುಂಡಿ ಬಳಿ ಇರುವ ಕೋಟೆ ಕಲ್ಲುಗಳು ಕುಸಿದು ಬಿದ್ದಿವೆ. ಈ ಹಿಂದೆ ಸಂಭವಿಸಿದ ಏಕಶಿಲಾ ಬೆಟ್ಟದ ಬುಡದಲ್ಲಿರುವ ಪುರಾಣ ಪ್ರಸಿದ್ಧ ಕೋದಂಡರಾಮಸ್ವಾಮಿ ದೇಗುಲದ ಹಿಂದಿರುವ ಆಕರ್ಷಕ ಮಾದರಿ ಕೋಟೆ ಕಲ್ಲುಗಳು ಕುಸಿದು ಹಲವು ವರ್ಷ ಉರುಳಿದರೂ ಕೂಡ ಸಂಬಂಧಪಟ್ಟ ಇಲಾಖೆ ಪುನಶ್ಚೇತನಗೊಳಿಸದೇ ಕೈಚಲ್ಲಿದೆ. ಖಾಸಗಿ ಬಸ್‌ ನಿಲ್ದಾಣಕ್ಕೆ ಹೊಂದಿರುವ ಕೋಟೆ ಪ್ರದೇಶದ ಸುತ್ತಮುತ್ತ ಗಿಡಗೆಂಟೆಗಳು ಬೆಳೆದು ನಿಂತಿದ್ದು ಬೆಟ್ಟದ ಮೇಲೆ ಬೀಳುವ ಮಳೆ ನೀರು ಖಾಸಗಿ ಬಸ್ ನಿಲ್ದಾಣದ ಮೂಲಕ ಹರಿದು ಕಸ ಕಡ್ಡಿ ಕಟ್ಟಿಕೊಂಡರೆ ನೀರು ಸಾರಗವಾಗಿ ಹರಿಯುವುದಿಲ್ಲ. ಆದರೆ ಕೋಟೆ ಒಳಗೆ ಅಳೆತ್ತರಕ್ಕೆ ಬೆಳೆದಿರುವ ಕಾರಣ ನೀರು ಹರಿಯದೇ ಕೋಟೆ ಭೂನಾದಿಗೆ ನೀರು ಸೇರಿ ಕೋಟೆ ಕಲ್ಲುಗಳು ಸಡಿಲಗೊಳ್ಳುವ ಮೂಲಕ ಅಪಾಯದ ಅಂಚಿನಲ್ಲಿದೆ. ಹಾಗಾಗಿ ಕೇಂದ್ರ ಪುರಾತತ್ವ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆಗಳು ಇತ್ತ ಗಮನ ಹರಿಸಿ ಪ್ರವಾಸಿಗರಿಗೆ ಮತ್ತು ಕೋಟೆಯ ಸಮಗ್ರ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೋಟೆ ಒಳಗೆ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ ಮೂರು ತಿಂಗಳಿಂದ ವೇತನ ನೀಡಿಲ್ಲ. ಇತ್ತಿಚೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಎಂಎಲ್‌ಸಿ ಆರ್‌. ರಾಜೇಂದ್ರ ರಾಜಣ್ಣ ಕೋಟೆ ಒಳಗೆ ಕುಡಿವ ನೀರಿನ ವ್ಯವಸ್ಥೆ, ಶೌಚಾಲಯ ನಿರ್ಮಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ವಿಶ್ವದ್ಲಲೇ ಎರಡನೇ ಏಕಶಿಲಾ ಬೆಟ್ಟ ಎಂಬ ಖ್ಯಾತಿಗೆ ಪಡೆದಿರುವ ಗಿರಿ ಪ್ರವಾಸಿ ಕೇಂದ್ರವಾಗಿ ಮಾರ್ಪಟ್ಟರೆ ಮಧುಗಿರಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದೆ. ಆದರೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಆದ ಕಾರಣ ಕೋಟೆಯ ಸಮಗ್ರ ಅಬಿವೃದ್ಧಿಗೆ ಪುರಾತತ್ವ ಇಲಾಖೆ ಗಮನ ಹರಿಸಬೇಕಿದೆ ಎಂದು ಜನರು ಆಗ್ರಹಿಸಿದ್ದಾರೆ.