ಮಧುಗಿರಿ: ಅಖಿಲ ಭಾರತ ಔಷಧ ವ್ಯಾಪಾರಸ್ಥರ ಸಂಘ , ರಾಜ್ಯ, ಜಿಲ್ಲಾ ವ್ಯಾಪಾರಿಗಳ ಸಂಘದಿಂದ ಒಂದು ದಿನದ ಮಟ್ಟಿಗೆ ರಾಷ್ಟ್ರಾದ್ಯಂತ ಇದೇ ಮೇ 20ರ ಬುಧವಾರ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಧುಗಿರಿ ತಾಲೂಕು ಔಷಧ ವ್ಯಾಪಾರಿಗಳು ಸಹ ಮೆಡಿಕಲ್ ಔಷಧ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಮುಷ್ಕರ ಬೆಂಬಲಿಸಿ ತಹಸೀಲ್ದಾರ್ ಎಚ್‌.ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಹಿಂದೆ ನಡೆದ ಸಭೆಯಲ್ಲಿ ಔಷಧ ವ್ಯಾಪಾರಿಗಳಿಗೆ ಬರುವ ಸಂಕಷ್ಟಗಳು ಹಾಗೂ ಅವಶ್ಯಕತೆಗಳನ್ನು ಕುರಿತು ತಹಸೀಲ್ದಾರ್ ಗೆ ಮನವಿ ನೀಡಿದ್ದು, ಆನ್‌ಲೈನ್ ಕಂಪನಿಗಳು ಔಷಧಿಗಳನ್ನು ಬಾರಿ ರಿಯಾಯಿತಿಯೊಂದಿಗೆ ಮಾರಾಟ ಮಾಡುವುದರಿಂದ ಚಿಲ್ಲರೆ ವ್ಯಾಪಾರಿಗಳು ತುಂಬಾ ತೊಂದರೆಗೆ ಒಳಗಾಗುತ್ತಿದ್ದಾರೆ. ಅಲ್ಲದೆ ನಕಲಿ ಮತ್ತು ಆರೋಗ್ಯಕ್ಕೆ ಹಾನಿಕಾರಕ ಔಷಧಿಗಳ ಮಾರಾಟವನ್ನು ತಡೆಯುವ ಅಗತ್ಯವಿದೆ. ವ್ಯಾಪಾರಿಗಳು ಜಿಎಸ್‌ಆರ್ 817 ಮತ್ತು ಜಿಎಸ್‌ಆರ್ 220 ಆದೇಶಗಳನ್ನು ವಾಪಸ್ ಪಡೆಯುವಂತೆ ಹಾಗೂ ಚಿಲ್ಲರೆ ವ್ಯಾಪಾರಸ್ಥರ ಹಿತಾಸಕ್ತಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಮಧುಗಿರಿ ವ್ಯಾಪಾರಿಗಳ ಈ ಬೆಂಬಲದೊಂದಿಗೆ ಮೂವರು ಒಕ್ಕೂಟದ ಆಗ್ರಹಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಸುರಕ್ಷತೆ ಔಷಧಿ ವಿತರಣೆ ಹಾಗೂ ನ್ಯಾಯಸಮ್ಮತ ವ್ಯಾಪಾರ ವ್ಯವಹಾರ ಮಾಡಲು ಅನುಕೂಲ ಮಾಡಿಕೊಡುವಂತೆ ಮನವಿಯಲ್ಲಿ ಕೋರಿದ್ದಾರೆ. ಈ ಸಂದರ್ಭದಲ್ಲಿ ಮಧುಗಿರಿ ಔಷಧ ವ್ಯಾಪಾರಗಳಾದ ಮಧುಗಿರಿ ಮೆಡಿಕಲ್ಸ್ ಮಾಲೀಕರಾದ ಎಂ..ಎನ್.ಆದಿಶೇಷ, ಗಿರೀಶ್, ಅಶ್ವತ್ಥ, ಕಮಲೇಶ್, ಆದಿರಮೇಶ್, ಮೊದಲಾದವರು ಇದ್ದರು.