ಪಾಜಕ ಮಠದ ಗೋಡೆಗಳ ಮೇಲೆ ಕಾವಿಯಲ್ಲಿ ಮೂಡಿದೆ ಮಧ್ವರ ಜೀವನಚರಿತ್ರೆ !

| Published : Feb 01 2025, 12:01 AM IST

ಪಾಜಕ ಮಠದ ಗೋಡೆಗಳ ಮೇಲೆ ಕಾವಿಯಲ್ಲಿ ಮೂಡಿದೆ ಮಧ್ವರ ಜೀವನಚರಿತ್ರೆ !
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಮಧ್ವಾಚಾರ್ಯರ ಜನ್ಮಸ್ಥಳ ಪಾಜಕ ಕ್ಷೇತ್ರ ಮಠದ ಗೋಡೆಗಳಲ್ಲಿ ಇತ್ತೀಚೆಗೆ ರಚಿಸಿರುವ ಕಾವಿ ಚಿತ್ರಕಲೆಗಳನ್ನು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮಧ್ವನವಮಿಯ ಪ್ರಥಮ ದಿನದಂದು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕಾಪು

ಶ್ರೀ ಮಧ್ವಾಚಾರ್ಯರ ಜನ್ಮಸ್ಥಳ ಪಾಜಕ ಕ್ಷೇತ್ರ ಮಠದ ಗೋಡೆಗಳಲ್ಲಿ ಇತ್ತೀಚೆಗೆ ರಚಿಸಿರುವ ಕಾವಿ ಚಿತ್ರಕಲೆಗಳನ್ನು ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮಧ್ವನವಮಿಯ ಪ್ರಥಮ ದಿನದಂದು ಉದ್ಘಾಟಿಸಿದರು.

ಇಲ್ಲಿ ಮಧ್ವಾಚಾರ್ಯರ ಜೀವನ ಚರಿತ್ರೆಗೆ ಸಂಬಂಧಪಟ್ಟ ಪ್ರಮುಖ ಎಂಟು ಕಾವಿ ಚಿತ್ರಗಳನ್ನು ರಚಿಸಲಾಗಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರಕಲಾವಿದ ಉಪಾಧ್ಯಾಯ ಮೂಡುಬೆಳ್ಳೆ ಅವರು ಈ ಚಿತ್ರಗಳನ್ನು ರಚಿಸಿದ್ದಾರೆ.

ಉದ್ಘಾಟನೆಯ ಸಂದರ್ಭದಲ್ಲಿ ಶ್ರೀ ಮಠದ ಅರ್ಚಕ ಮಾಧವ ಉಪಾಧ್ಯಾಯ, ವಾದಿರಾಜ ಉಪಾಧ್ಯಾಯ, ನಂದಳಿಕೆ ವಿಠಲ ಭಟ್, ಕ್ಯಾಮಲಿನ್ ನ್ಯಾಷನಲ್ ಅವಾರ್ಡ್ ವಿಜೇತ ಡಾ. ಪ್ರಮೋದನ ಉಪಾಧ್ಯಾಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಚಿತ್ರಗಳು ದೊಡ್ಡ ಗಾತ್ರದಲ್ಲಿ ಅದ್ಭುತವಾಗಿ ಮೂಡಿಬಂದಿವೆ. ಈ ಬಾರಿಯ ಮಧ್ವನವಮಿಗೆ ಇದೊಂದು ವಿಶೇಷ ಕೊಡುಗೆಯಾಗಿದೆ. ಈ ಚಿತ್ರಗಳಲ್ಲಿ ಶ್ರೀ ಮಧ್ವಾಚಾರ್ಯರ ಹುಟ್ಟು, ತಂದೆಯಿಂದ ಅಕ್ಷರಾಭ್ಯಾಸ, ತಾಯಿಯ ಕರೆಗೆ ಓಗೊಟ್ಟು ಕುಂಜಾರುಗಿರಿ ದುರ್ಗಾ ಬೆಟ್ಟದಿಂದ ಪಾಜಕಕ್ಕೆ ನೆಗೆಯುತ್ತಿರುವ ಬಾಲಕ ವಾಸುದೇವ, ಮಧ್ವಾಚಾರ್ಯರ ಸನ್ಯಾಸ್ಯಾಶ್ರಮ ಸ್ವೀಕಾರ, ಶ್ರೀ ಕ್ಷೇತ್ರ ಬದರಿಯಲ್ಲಿ ಭಗವಾನ್ ವೇದವ್ಯಾಸರಿಂದ ವೇದ ವಿಚಾರಗಳ ವಿಮರ್ಶೆ, ಉಡುಪಿಯಲ್ಲಿ ಪ್ರತಿಷ್ಠಾಪಿಸಲು ಪಡುಗಡಲ ತೀರದಿಂದ ದ್ವಾರಕಾಧೀಶ ಶ್ರೀ ಕೃಷ್ಣನ ಪ್ರತಿಮೆಯನ್ನು ಹೊತ್ತು ತರುತ್ತಿರುವ ಶ್ರೀ ಮಧ್ವಾಚಾರ್ಯರು, ಶ್ರೀ ಮಧ್ವಾಚಾರ್ಯರ ಪ್ರತಿರೂಪವಾದ ವಾಯುದೇವರು, ಶ್ರೀ ಮಧ್ವಾಚಾರ್ಯರು ಪೂಜಿಸುತ್ತಿದ್ದ ಅನಂತಾಸನ ದೇವರು ಹಾಗೂ ಮಠದ ಹೊರ ಬದಿ ಗೋಡೆಯಲ್ಲಿ ಶೇಷಶಯನ ಶ್ರೀಮನ್ನಾರಾಯಣ, ಗರುಡವಾಹನ ವಿಷ್ಣು (ಶ್ರೀಕರ) ಇತ್ಯಾದಿ ಚಿತ್ರಗಳು ಭವ್ಯವಾಗಿ ಮೂಡಿಬಂದಿವೆ.