ಹಳಿಯಾಳ: ದ್ವೈತ ಸಿದ್ಧಾಂತದ ಮೂಲಕ ಭಾರತೀಯ ತತ್ವಶಾಸ್ತ್ರಕ್ಕೆ ಹೊಸ ದಿಕ್ಕು ತೋರಿದ ಮಧ್ವಾಚಾರ್ಯರು ಕೇವಲ ತತ್ವಜ್ಞಾನಿಯಲ್ಲ, ಸಮಾಜ ಸುಧಾರಕರೂ ಹೌದು. ಜೀವ ಮತ್ತು ಪರಮಾತ್ಮನ ನಡುವಿನ ಭೇದವನ್ನು ಸಾರುತ್ತಲೇ, ಭಕ್ತಿಯೇ ಮುಕ್ತಿಗೆ ಸೋಪಾನ ಎಂದು ಅವರು ಜಗತ್ತಿಗೆ ಸಾರಿದರು ಎಂದು ಪಟ್ಟಣದ ಕೆಎಲ್ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಹೇಳಿದರು.
ಬುಧವಾರ ತಾಲೂಕಾಡಳಿತ ಸೌಧದಲ್ಲಿ ಆಯೋಜಿಸಿದ್ದ ದ್ವೈತ ಸಿದ್ಧಾಂತದ ಪ್ರತಿಪಾದಕ ಮಧ್ವಾಚಾರ್ಯರ 788ನೇ ಜಯಂತಿ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.ಸತ್ಯ, ಧರ್ಮ, ನ್ಯಾಯದ ಹಾದಿಯಲ್ಲಿ ನಡೆಯುತ್ತಾ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಪ್ರತಿಯೊಬ್ಬರ ಕರ್ತವ್ಯ ಎಂಬುದು ಅವರ ಜೀವನದ ಸಂದೇಶವಾಗಿದೆ ಎಂದರು.
ಶಿರಸ್ತೇದಾರ ಹನುಮಂತ ಪಡೋಲ್ಕರ ಅವರು ಮಧ್ವಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಜಯಂತಿ ಆಚರಣೆಗೆ ಚಾಲನೆ ನೀಡಿದರು.ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ, ನಿವೃತ್ತ ಎಂಜಿನಿಯರ್ ಜಿ.ಡಿ. ಗಂಗಾಧರ ಮಾತನಾಡಿ, 13ನೇ ಶತಮಾನದಲ್ಲಿಯೇ ದೇಶಾದ್ಯಂತ ಸಂಚರಿಸಿ, ವೇದ, ಉಪನಿಷತ್, ಭಗವದ್ಗೀತೆಯ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ಮಧ್ವಾಚಾರ್ಯರಿಗೆ ಸಲ್ಲುತ್ತದೆ. ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿ, ಕೃಷ್ಣಭಕ್ತಿ ಪಂಥಕ್ಕೆ ಭದ್ರ ಬುನಾದಿ ಹಾಕಿದರು. ಅವರ ದಾರ್ಶನಿಕ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವಪೀಳಿಗೆಗೆ ದಾರಿದೀಪವಾಗಿವೆ ಎಂದರು.
ಹಳಿಯಾಳ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಮೋಹನ ಭಟ್ ಮರಾಠೆ ಮಾತನಾಡಿ, ಮಧ್ವಾಚಾರ್ಯ ಜಯಂತಿ ಆಚರಣೆಯನ್ನು ಸರ್ಕಾರ ಅಧಿಕೃತವಾಗಿ ಘೋಷಿಸಿರುವುದಕ್ಕೆ ಸಾರ್ವಜನಿಕರ ಪರವಾಗಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.
ಜೆ.ಡಿ. ಜೋಶಿ ಅವರು ಮಧ್ವಾಚಾರ್ಯರ ತತ್ವ ಸಿದ್ಧಾಂತಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಭಾಸ್ಕರ್ ಕುಲಕರ್ಣಿ, ರವಿವರ್ಮ ಜೋಶಿ, ಶಶಿಕಲಾ ಜೋಶಿ, ಸುಬ್ರಮಣ್ಯ ಹೆಗಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.