ವಾಯುದೇವರ ಸಾಕ್ಷಾತ್ ಅವತಾರ ಮಧ್ವಾಚಾರ್ಯರು: ಜೋಷಿ

| Published : Feb 22 2024, 01:52 AM IST

ಸಾರಾಂಶ

ಮಧ್ವನವಮಿ ಉತ್ಸವದಲ್ಲಿ ಪಂ.ಶ್ರೀನಿವಾಸಾಚಾರ್ಯ ಜೋಷಿ ಮಳ್ಳಿವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಸುರಪುರ

ವಾಯುದೇವರ ಸಾಕ್ಷಾತ್ ಅವತಾರ ಎನಿಸಿರುವ ಮಧ್ವಾಚಾರ್ಯರು ಬದರಿಕಾಶ್ರಮ ಪ್ರವೇಶ ಮಾಡಿದ ಪುಣ್ಯದ ದಿನವೆ ಈ ಮಧ್ವನವಮಿ ಎಂದು ಪಂ.ಶ್ರೀನಿವಾಸಾಚಾರ್ಯ ಜೋಷಿ ಮಳ್ಳಿ ಹೇಳಿದರು.

ತಾಲೂಕಿನ ಕೆಂಭಾವಿ ಪಟ್ಟಣ ಸಮೀಪದ ಜೇವರ್ಗಿ ತಾಲೂಕಿನ ಕ್ಷೇತ್ರ ದುಮ್ಮದ್ರಿ ವರಹಳ್ಳೇರಾಯನ ದೇವಸ್ಥಾನದಲ್ಲಿ ನಡೆದ ಮಧ್ವನವಮಿ ಉತ್ಸವದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ತಮ್ಮ ವಿಶಿಷ್ಠ ಜ್ಞಾನದ ಮೂಲಕ ಶ್ರೀಮದಾನಂದ ತೀರ್ಥರೆಂಬುದಾಗಿ ಪ್ರಸಿದ್ಧಿ ಪಡೆದವರು ಮಧ್ವಾಚಾರ್ಯರು. ಸಮಗ್ರ ಭಾರತದ ಇತಿಹಾಸ, ವೇದ, ಉಪನಿಷತ್‌ಗಳಲ್ಲಿ ಪಾಂಡಿತ್ಯ ಪಡೆದ ಮಹನ್ ಯತಿವರೇಣ್ಯರಾಗಿ ವಾಯು ದೇವರ ಮೂರನೇ ಅವತಾರವೆತ್ತಿ ಹಲವಾರು ಜ್ಞಾನಾಮೃತ ನಮಗೆ ನೀಡಿದ್ದಾರೆ ಎಂದರು.

ಮಧ್ವನವಮಿ ಅಂಗವಾಗಿ ದೇವಸ್ಥಾನದ ಪ್ರಾಂಗಣದಲ್ಲಿ ನಾರಾಯಣಾಚಾರ್ಯ ಮಳ್ಳಿ ನೇತೃತ್ವದಲ್ಲಿ ಹಲವರು ಋತ್ವಿಜರ ಮಂತ್ರ ಘೋಷದೊಂದಿಗೆ ಹಣಮಂತಾಚಾರ್ಯ ಮಳ್ಳಿ ದಂಪತಿಗಳು ಪವಮಾನ ಹೋಮದ ಪೂರ್ಣಾಹುತಿ ನೆರವೇರಿಸಿದರು. ನಂತರ ಪಲ್ಲಕ್ಕಿ ಉತ್ಸವ, ರಥೋತ್ಸವ, ಕೆಂಭಾವಿ ರಘೂತ್ತಮ ಭಜನಾ ಮಂಡಳಿಯಿಂದ ಹರಿನಾಮಸ್ಮರಣೆ, ಭಜನೆ, ಅರ್ಚಕ ಗುರುರಾಜಾಚಾರ್ಯ ಜೋಷಿ ನೇತೃತವಲ್ಲಿ ವರಹಳ್ಳೇರಾಯನಿಗೆ ವಿಶೇಷ ಪೂಜೆ ಅಲಂಕಾರ ನೆರೆದಿದ್ದ ನೂರಾರು ಭಕ್ತರಿಗೆ ಅನ್ನ ಸಂತರ್ಪಣೆ ಜರುಗಿತು.

ತಿರುಮಲಾಚಾರ್ಯ ಮಳ್ಳಿ, ರಾಮರಾವ ಕಣಮೇಶ್ವರ, ಜಯಾಚಾರ್ಯ ಜೋಷಿ, ರಾಘವೇಂದ್ರಾಚಾರ್ಯ ಜೋಷಿ, ಶ್ರೀನಿವಾಸ ಕುಲಕರ್ಣಿ, ಗುರುರಾಜಾಚಾರ್ಯ ಯಡ್ರಾಮಿ, ಡಾ. ರಾಮರಾವ ದೇಶಪಾಂಡೆ, ಪ್ರಾಣೇಶ ಕುಲಕರ್ಣಿ, ಬಾಳಕೃಷ್ಣರಾವ ಕುಲಕರ್ಣಿ, ವಾಮನರಾವ ದೇಶಪಾಂಡೆ, ನಾಗೇಶ ಕುಲಕರ್ಣಿ, ಪವನ ಚಾಮನಾಳ ಸೇರಿ ಹಲವರಿದ್ದರು.