ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ವಡಗೇರಾ ತಾಲೂಕಿನ ಶಿವಪುರ ಸಮೀಪದ ಕೃಷ್ಣಾ, ಭೀಮಾ ಪವಿತ್ರ ಸಂಗಮ ಸ್ಥಳವಾದ ಜಿತಾಮಿತ್ರರ ಗಡ್ಡೆಯಲ್ಲಿ ರುದ್ರಾಂಶ ಸಂಭೂತರಾದ ಶ್ರೀ ಜಿತಾಮಿತ್ರತೀರ್ಥರ 532ನೇ ಮಧ್ಯಾರಾಧನೆ ಮಹೋತ್ಸವವು ಸಾವಿರಾರು ಜನರ ಸಮ್ಮುಖದಲ್ಲಿ ಭಕ್ತಿ ಭಾವದೊಂದಿಗೆ ನಡೆಯಿತು.ಯಾದಗಿರಿ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳಿಂದ ಸೇರಿದಂತೆ ತೆಲಂಗಾಣ, ಆಂಧ್ರದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮಧ್ಯಾರಾಧನೆ ನಿಮಿತ್ತ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀಸುಭುದೇಂದ್ರ ತೀರ್ಥರಿಂದ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬೆಳಗ್ಗೆ ಅಷ್ಟೋತ್ತರ, ಪಂಚಾಮೃತ ಹಾಗೂ ಕನಕಾಭಿಷೇಕ ನಡೆಯಿತು. ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ನಂತರ ಶ್ರೀಗಳು ಭಕ್ತರಿಗೆ ಹಿತೋಪದೇಶ ನೀಡಿದರು.
ಜಿತಾಮಿತ್ರತೀರ್ಥರ ಹಿನ್ನೆಲೆ :ಶಿವಪುರದ ಶಾನುಭೋಗರ ಮನೆತನದಲ್ಲಿ ಜನಿಸಿದ ಜಿತಾಮಿತ್ರರ ಪೂರ್ವಾಶ್ರಮದ ಹೆಸರು ಅನಂತಪ್ಪ. ಗ್ರಾಮೀಣ ಪ್ರದೇಶದಲ್ಲಿ ಬೇಸಾಯ ಹಾಗೂ ದನ ಕರುಗಳನ್ನು ಮೇಯಿಸುತ್ತಾ ಕಾಲ ಕಳೆಯುತ್ತಿದ್ದರು. ಉಪನಯನವಾಗಿದ್ದರೂ ದೇವತಾ ಕಾರ್ಯಗಳತ್ತ ಗಮನವಿರಲಿಲ್ಲ. ಧಾರ್ಮಿಕ ಕಾರ್ಯಕ್ರಮಗಳ ಗೋಜಿಗೆ ಹೋಗುತ್ತಿರಲಿಲ್ಲ.
ಚಿಕ್ಕಂದಿನಲ್ಲಿಯೇ ತಂದೆ-ತಾಯಿಗಳನ್ನು ಕಳೆದುಕೊಂಡಿದ್ದ ಅನಂತಪ್ಪ, ಅಕ್ಕನ ಮನೆಯಲ್ಲಿ ಬೆಳೆದು ದೊಡ್ಡವನಾದ. ಒಮ್ಮೆ ವೈಷ್ಣವ ಪೀಠಾಧಿಪತಿಗಳಾದ ಶ್ರೀವಿಭುದೇಂದ್ರ ತೀರ್ಥರು ಆಗಮಿಸಿದಾಗ, ಅನಂತಪ್ಪ ಶ್ರದ್ಧಾ ಭಕ್ತಿಯಿಂದ ಮುದ್ರೆಗಳನ್ನು ಒತ್ತಿಕೊಂಡು ಶ್ರೀಗಳ ದರ್ಶನಕ್ಕೆ ನಿಂತ. ಈ ಸಂದರ್ಭದಲ್ಲಿ ಕೊರಳಲ್ಲಿನ ಜನಿವಾರ ಮಾಯವಾಗಿತ್ತು. ಇದನ್ನು ಗಮನಿಸಿದ ಗುರುಗಳು ಅನಂತಪ್ಪನಿಗೆ ಜನಿವಾರದ ಮಹತ್ವ ತಿಳಿಸಿ, ಮತ್ತೊಂದು ಜನಿವಾರ ನೀಡಿ, ಇದನ್ನು ಧರಿಸು, ಹಾಗೂ ನಿತ್ಯ ಸಂಧ್ಯಾವಂದನೆ ಮಾಡಿ ಸಾಲಿಗ್ರಾಮಕ್ಕೆ ಅಭಿಷೇಕ, ನೈವೇದ್ಯ ಮಾಡಿ ಉಣಿಸಬೇಕು ಎಂದು ಶ್ರೀಗಳು ತಿಳಿಸಿದರು.ಗುರುಗಳ ಮಾತನ್ನು ತಪ್ಪದೇ ಪಾಲಿಸಿದ ಅನಂತಪ್ಪನು, ಶ್ರದ್ಧಾ ಭಕ್ತಿಯಿಂದ ಪೂಜಾ ಕಾರ್ಯದಲ್ಲಿ ತೊಡಗಿ, ಸಾಲಿಗ್ರಾಮಕ್ಕೆ ನೈವೇದ್ಯ ಉಣ್ಣಲು ಹೇಳಿದ. ಇಲ್ಲದಿದ್ದರೆ ತಲೆ ಒಡೆದುಕೊಳ್ಳುತ್ತೇನೆ ಎಂದು ಉದ್ಗಾರ ತೆಗೆದ. ಆಗ ಸಾಲಿಗ್ರಾಮ ರೂಪಿ ಭಗವಂತ ಬಾಯಿ ತೆರೆದು ನಿತ್ಯ ಉಣ್ಣಲು ಪ್ರಾರಂಭಿಸಿದ. ಇದರಿಂದ ಅನಂತಪ್ಪನಲ್ಲಿಯ ಮೂಢಭಕ್ತಿಯು ಭಗವಂತನೆಡೆಗೆ ಅಚಲವಾಗಿ ಸಾಗಿತ್ತು. ಮತ್ತೊಮ್ಮೆ ಆಗಮಿಸಿದ ವಿಭುದೇಂದ್ರ ತೀರ್ಥರು, ಅನಂತಪ್ಪ ಸಾಲಿಗ್ರಾಮಕ್ಕೆ ಉಣಿಸುತ್ತಿರುವುದನ್ನು ಕಂಡು ಅಚ್ಚರಿಪಟ್ಟರು. ಶ್ರೀಗಳು ಪ್ರಸನ್ನ ಚಿತ್ತರಾಗಿ ಅನಂತಪ್ಪನಿಗೆ ಜಿತಾಮಿತ್ರ ತೀರ್ಥರು ಎಂದು ನಾಮಕರಣ ಮಾಡಿದರು.
ಗುರುಗಳ ಅನುಗ್ರಹ ಪಡೆದ ಜಿತಾಮಿತ್ರರು ಸಕಲ ಶಾಸ್ತ್ರ ಪ್ರವೀಣರಾಗಿ ಹಲವಾರು ಶಿಷ್ಯರಿಗೆ ನದಿಯ ದಡದ ಮೇಲೆ ಪಾಠ, ಪ್ರವಚನ ಮಾಡುತ್ತಿದ್ದರು. ಪರಮೇಶ್ವರನು ಜಂಗಮ ವೇಷಧಾರಿಯಾಗಿ ಬಂದು ಪಾಠ ಕೇಳುತ್ತಿದ್ದರು ಎಂಬ ಪ್ರತೀತಿ ಇದೆ.ಒಮ್ಮೆ ಧ್ಯಾನಾಸಕ್ತರಾಗಿ ಕುಳಿತ ಸಂದರ್ಭದಲ್ಲಿ ಪ್ರವಾಹ ಉಕ್ಕೇರಿ ಬಂತು. ಪ್ರವಾಹ ಇಳಿದರೂ ಅವರು ಮಾತ್ರ ಕಾಣಲಿಲ್ಲ. ಬದಲಿಗೆ ನದಿಯ ಮಧ್ಯದಲ್ಲಿ ಮಣ್ಣಿನ ಗುಡ್ಡೆಯೊಂದು ಹಾಗೂ ಆ ಸ್ಥಳದಲ್ಲಿ ಗೋನದ ವೃಕ್ಷ ಬೆಳೆದು ನಿಂತಿದೆ. ಸಮಸ್ತ ಭಕ್ತ ಸಮೂಹ ಜಿತಾಮಿತ್ರ ತೀರ್ಥರ ಸನ್ನಿಧಾನದಲ್ಲಿ ಇಂದಿಗೂ ಶ್ರದ್ಧೆಯಿಂದ ಪೂಜೆ ಮಾಡುತ್ತಾರೆ. ಆರಾಧನೆಗಾಗಿ ಮಂತ್ರಾಲಯ ಶ್ರೀಮಠದಿಂದ ಸಕಲ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.