ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಒಳಮೀಸಲಾತಿ ಜಾರಿಮಾಡಿ 56,432 ಹುದ್ದೆಗಳನ್ನು ಭರ್ತಿಮಾಡುವಂತೆ ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿ ಎಂ.ಆರ್.ಎಚ್.ಎಸ್ ರಾಜ್ಯ ಕಾರ್ಯದರ್ಶಿ ಬಿ.ಟಿ. ಚಂದ್ರಶೇಖರ್ ಉದ್ಯೋಗ ನೇಮಕಾತಿಗಳಲ್ಲಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಲು ನಿರ್ಧರಿಸಲಾಗಿದೆ. ಫೆ.27 ರಂದು ರಾಜ್ಯಸರ್ಕಾರ ಹೊರಡಿಸಿರುವ ಉದ್ಯೋಗ ನೇಮಕಾತಿ ಆದೇಶ ಹಿಂಪಡೆಯಬೇಕು. ಶೇ.15 ರಷ್ಟು ಮೀಸಲಾತಿಯಲ್ಲಿ ಮಾದಿಗ ಸಮಾಜಕ್ಕೆ ಉದ್ಯೋಗ ನೇಮಕಾತಿ ಮಾಡಬೇಕೆಂದು ಒತ್ತಾಯಿಸಿದರು.ವಿಶ್ವವಿದ್ಯಾಲಯಗಳನ್ನು ಒಂದು ಘಟಕವಾಗಿಸಿ ನೇಮಕಾತಿ ಮಾಡುವ ಪ್ರಯತ್ನ ಕೈಬಿಡಿ, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಿಗೆ ಶೇ.1 ರಷ್ಟು ಪ್ರತ್ಯೇಕ ಮೀಸಲಾತಿ ನೀಡಬೇಕು ಎಂದು ಹೇಳಿದರು.ಪರಿಶಿಷ್ಟ ಜಾತಿ ಶೇ.17 ರಷ್ಟು ಮತ್ತು ಪರಿಶಿಷ್ಟ ವರ್ಗಕ್ಕೆ ಶೇ.7 ಒಟ್ಟು ಶೇ.56 ಮೀಸಲಾತಿಯನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಿ ಮೀಸಲಾತಿ ಹೆಚ್ಚಿಸಬೇಕೆಂದು ಆಗ್ರಹಿಸಿದ ಅವರು, ಉದ್ಯೋಗ ನೇಮಕಾತಿ, ನೇರ ನೇಮಕಾತಿ, ಬ್ಯಾಕ್ಲಾಗ್, ಬಡ್ತಿ, ಮುಂಬಡ್ತಿ, ಒಳ ಗುತ್ತಿಗೆ, ಎಸ್ಸಿಎಸ್ಪಿ, ಟಿಎಸ್ಪಿ ಆರ್ಥಿಕ ಸೌಲಭ್ಯ ಎಲ್ಲಾ ಹಂತಗಳಲ್ಲೂ ಸಂಪೂರ್ಣ ಒಳಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿದರು.ರಾಜ್ಯಸರ್ಕಾರ ಹೊರಡಿಸಿದ ಉದ್ಯೋಗ ನೇಮಕಾತಿ ಆದೇಶ ಮಾದಿಗ ಮತ್ತು ಮಾದಿಗ ಸಂಬಂಧಿತ ಉಪಜಾತಿಗಳಿಗೆ ಮರಣ ಶಾಸನವಾಗಿದೆ. 101 ಪರಿಶಿಷ್ಟ ಜಾತಿಗಳ ಜನಸಂಖ್ಯೆಗನುಗುಣವಾಗಿ ಒಳಮೀಸಲಾತಿ ಕಲ್ಪಿಸಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಪೀಠ ಕಳೆದ 2 ವರ್ಷಗಳ ಹಿಂದೆ ನಿವೃತ್ತ ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಸಚಿವ ಸಂಪುಟ ಅನುಮೋದಿಸಿತ್ತು ಎಂದು ಮಾಹಿತಿ ನೀಡಿದರು.ನಂತರ ನಡೆದ ವಿಧಾನಸಭಾ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾಗಿ ರಾಜ್ಯಪಾಲರ ಅಂಕಿತ ಪಡೆದು ವಿಧೇಯಕ ಜಾರಿಯಲ್ಲಿದೆ. ಆದರೆ, ಎಲ್ಲವನ್ನೂ ತಳ್ಳಿಹಾಕಿ ಒಳಮೀಸಲಾತಿ ಅಳವಡಿಸದೇ ಉದ್ಯೋಗ ನೇಮಕಾತಿ ಸುತ್ತೋಲೆ ಹೊರಡಿ ಸಿರುವುದು ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ಮಹಾ ದ್ರೋಹ, ಘೋರ ಅನ್ಯಾಯ ಎಂದು ಆರೋಪಿಸಿದರು.ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮೊದಲ ಅಧಿವೇಶನದಲ್ಲೇ ಒಳಮೀಸಲಾತಿ ಜಾರಿ ಮಾಡುವುದಾಗಿ ಘೋಷಿಸಿದ್ದು, ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗುತ್ತ ಬಂದರೂ ಒಳಮೀಸಲಾತಿ ಜಾರಿಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದರು.ಸಂಘಟನೆಯ ಕಡೂರು ತಾಲೂಕು ಮಾದಿಗ ಸಮಾಜದ ಅಧ್ಯಕ್ಷ ಎಚ್.ಜಗದೀಶ್, ಮುಖಂಡರಾದ ತಿಮ್ಮಯ್ಯ, ರವಿ ಕುಮಾರ್, ಜಗದೀಶ್, ಈಶ್ವರಪ್ಪ, ಪ್ರಮೋದ್, ನಾಗೇಂದ್ರಪ್ಪ, ಗೋವಿಂದಪ್ಪ, ಬಿ.ಎಸ್. ಮೂರ್ತಿ, ಸಗನಪ್ಪ, ಬಸವರಾಜು, ವೈ.ಟಿ.ಗೋವಿಂದಪ್ಪ, ಬಳ್ಳೆಕೆರೆ ಸಂತೊಷ್, ದೋರನಾಳ್ ಸುನೀಲ್ , ಬೀರೂರು ಗಿರೀಶ್, ಬಾಸೂರು ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.
25 ಸಿಕೆ ಎಂ 6ಒಳಮೀಸಲಾತಿ ಜಾರಿಮಾಡಿ 56,432 ಹುದ್ದೆಗಳನ್ನು ಭರ್ತಿಮಾಡಲು ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.