ಕಂಪ್ಲಿ: ಒಳ ಮೀಸಲಾತಿ ನೀಡುವುದು ಆಯಾ ರಾಜ್ಯಗಳ ಹೊಣೆಗಾರಿಕೆಯಾಗಿದ್ದು, ಸುಪ್ರೀಂಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ತಕ್ಷಣ ಒಳ ಮೀಸಲಾತಿ ಕಾಯ್ದೆ ಅನುಷ್ಠಾನಗೊಳಿಸಬೇಕು ಎಂದು ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ತಾಲೂಕು ಘಟಕದ ಮುಖಂಡ ಜಿ. ಪ್ರಸಾದ್ ಆಗ್ರಹಿಸಿದರು.
ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಬುಧವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಾದಿಗ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರುಕಳೆದ 35 ವರ್ಷಗಳಿಂದಲೂ ಮಾದಿಗ ಸಮುದಾಯ ಒಳ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದೆ. ಆದರೆ, ಇಷ್ಟು ವರ್ಷಗಳಾದರೂ ನಮ್ಮ ಬೇಡಿಕೆ ಈಡೇರದಿರುವುದು ವಿಷಾದನೀಯ. ಸುಪ್ರೀಂಕೋರ್ಟ್ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಸ್ಪಷ್ಟ ತೀರ್ಪು ನೀಡಿದ್ದರೂ, ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸುವಲ್ಲಿ ವಿಳಂಬ ಮಾಡುತ್ತಿರುವುದು ನ್ಯಾಯಸಮ್ಮತವಲ್ಲ. ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಮಾದಿಗ ಹಾಗೂ ಸಂಬಂಧಿತ ಉಪವರ್ಗಗಳಿಗೆ ಶೇ. 6ರಷ್ಟು ಒಳ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕು. ಇದು ನಮ್ಮ ಹಕ್ಕು ಮತ್ತು ದೀರ್ಘಕಾಲದ ಬೇಡಿಕೆ. ಸರ್ಕಾರ ಇನ್ನಷ್ಟು ವಿಳಂಬ ಮಾಡಿದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯ ನಂತರ ಆರ್‌ಐ ವೈ.ಎಂ. ಜಗದೀಶ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸಲ್ಲಿಸುವ ವೇಳೆ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಮುಖಂಡರಾದ ಎಮ್ಮಿಗನೂರು ಎಚ್. ಜಡೆಪ್ಪ, ಬೆಳಗೋಡ್ ಬಸವರಾಜ, ಸಣಾಪುರ ಮರಿಸ್ವಾಮಿ, ಆರ್.ಎಂ. ರಾಮಯ್ಯ, ಸಣಾಪುರ ಹನುಮಂತಪ್ಪ, ಮೆಟ್ರಿ ಎಚ್. ಕುಮಾರಸ್ವಾಮಿ, ಎಮ್ಮಿಗನೂರು ಶಿಕ್ಷಕ ಎಚ್. ಪಂಪಾಪತಿ, ಎಚ್. ಶ್ರೀನಿವಾಸ, ವೀರಾಂಜನೇಯ, ಯಲ್ಲಪ್ಪ, ಎನ್. ಬುಜ್ಜಿಕುಮಾರ್, ದೇವಲಾಪುರ ರಾಮಯ್ಯ, ಎಚ್. ಜಗದೀಶ, ಗೋಪಿ, ಗಂಗಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.