ಸಾರಾಂಶ
ಮಾದಿಗ ಒಳಮೀಸಲಾತಿ ಜಾರಿಗೆ ಹೊರಾಟಗಳನ್ನು ಮಾಡುವ ಮೂಲಕ ಸದಾಶಿವ ಆಯೋಗ, ಬಿಜೆಪಿ ಸರ್ಕಾರ, ನಾಗಮೋಹನ್ ದಾಸ್ ಆಯೋಗದ ವರದಿ ಪ್ರಕಾರ ಶೇಕಡ 6 ರಷ್ಟು ಒಳಮೀಸಲಾತಿ ನೀಡಿದ್ದಾರೆ, ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರ, ನಮ್ಮ ಹೋರಾಟಗಳಿಗೆ ಮನ್ನಣೆ ನೀಡಿ ಸೂಕ್ತ ಕ್ರಮ ಕೈಗೊಂಡಿದ್ದಾರೆ ಇದರಿಂದ ಮುಂದಿನ ದಿನಗಳಲ್ಲಿ ನಮ್ಮ ಜನಾಂಗಕ್ಕೆ ಉದ್ಯೋಗದಲ್ಲಿ ಮೀಸಲಾತಿ ದೊರೆಯಲಿದೆ.
ಕನ್ನಡಪ್ರಭವಾರ್ತೆ ಹೊಸಕೋಟೆ
ಸರ್ಕಾರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ಮಾದಿಗ ಸಮುದಾಯ ಸೂಕ್ತ ಧರ್ಮ ಹಾಗೂ ಜಾತಿ ಮಾಹಿತಿ ನೀಡದಿದ್ದಲ್ಲಿ ಸಮುದಾಯ ಮುಂದಿನ ಪೀಳಿಗೆಗೆ ಸಂಕಷ್ಟ ತಪ್ಪಿದ್ದಲ್ಲ ಎಂದು ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಮಾದಾರ ಮಹಾಸಭಾ ಮತ್ತು ರಾಜ್ಯ ಎಡಗೈ ಜಾತಿಗಳ ಸಮನ್ವಯ ಸಮಿತಿಯಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಬಗ್ಗೆ ಜಾಗೃತಿ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತು ತಂತ್ರಜ್ಞಾನ ಹಾಗೂ ಎಐನೊಂದಿಗೆ ಮುನ್ನೆಡೆಯುತ್ತಿದೆ. ನಮ್ಮ ಜನಾಂಗ ಈ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಜಾಗೃತರಾಗಿ ಸೂಕ್ತ ಧರ್ಮ ಹಾಗೂ ಜಾತಿ ಮಾಹಿತಿ ನೀಡಿದಲ್ಲಿ ಮಾತ್ರ ನಮ್ಮ ಮಕ್ಕಳಿಗೆ ಸೂಕ್ತ ಮೀಸಲಾತಿ ದೊರೆಯಲಿದೆ. ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ರಾಜ್ಯದಲ್ಲಿ 50 ಲಕ್ಷ ಜನಸಂಖ್ಯೆ ಇರುವ ನಮ್ಮ ಮಾದಿಗ ಜನಾಂಗ ಎಂದೂ ಬೀಗಿಲ್ಲ. ಆದರೆ 101 ಜಾತಿಗಳ ಮೀಸಲಾತಿ ಪಡೆಯುವುದರಲ್ಲಿ ಬಾರಿ ಹಿನ್ನಡೆ ಅನುಭವಿಸಿದ ಪರಿಣಾಮ ನಮ್ಮ ಮಾದಿಗ ಸಮಾಜ ಹಿಂದೆ ಇದ್ದು ಕಳೆದ ಸುಮಾರು 40 ವರ್ಷಗಳಿಂದ ಒಳಮೀಸಲಾತಿ ನೀಡಬೇಕೆಂದು ಹೋರಾಟ ಮಾಡಿಕೊಂಡು ಬಂದಿದ್ದು ಈಗ ಒಳಮೀಸಲಾತಿ ಜಾರಿಯಾದ ಮೇಲೆ ಜಾತಿ ಜನಗಣತಿ ನಡೆಯುತಿದ್ದು ಸೂಕ್ತವಾಗಿ ಎಲ್ಲರು ಧರ್ಮ ಕಾಲಂನಲ್ಲಿ ಹಿಂದು ಮತ್ತು ಜಾತಿ ಕಾಲಂನಲ್ಲಿ ಮಾದಿಗ ಎಂದು ನಮೂದಿಸಿ, ಅದನ್ನು ಬಿಟ್ಟು ಕೆಲವರು ನಮ್ಮ ಸಮುದಾಯವನ್ನು ದಾರಿ ತಪ್ಪಿಸಿ ಆದಿ ದ್ರಾವಿಡ, ಆದಿ ಕರ್ನಾಟಕ ಎಂದು ನಮೂದಿಸಲು ಹೇಳುತ್ತಿದ್ದು ನಮ್ಮ ಜನಾಂಗವನ್ನು ತಪ್ಪುದಾರಿಗೆ ಕೊಂಡೊಯ್ಯುತ್ತಿದ್ದಾರೆ. ಎಕೆ ಮತ್ತು ಎಡಿ ಎಂಬ ಜಾತಿ ಪ್ರಮಾಣ ಪತ್ರ ಇದ್ದರೆ ಕೂಡಲೆ ಸರಂಡರ್ ಮಾಡಿ ಮಾದಿಗ ಎಂಬ ಜಾತಿ ಪ್ರಮಾಣ ಪತ್ರ ಪಡೆಯಿರಿ. ಇಲ್ಲದಿದ್ದರೆ ಮಾದಿಗ ಸಮುದಾಯಕ್ಕೆ ಮಾತ್ರ ಮೀಸಲಾತಿ ದೊರೆಯಲಿದ್ದು ಎಕೆ ಎಡಿ ಎಂಬ ಜಾತಿ ಪ್ರಮಾಣ ಪತ್ರಕ್ಕೆ ಸರ್ಕಾರ ಮಾನ್ಯತೆ ತೆಗೆದುಹಾಕಲಿದೆ ಎಂದರು.ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಮಾದಿಗ ಒಳಮೀಸಲಾತಿ ಜಾರಿಗೆ ಹೊರಾಟಗಳನ್ನು ಮಾಡುವ ಮೂಲಕ ಸದಾಶಿವ ಆಯೋಗ, ಬಿಜೆಪಿ ಸರ್ಕಾರ, ನಾಗಮೋಹನ್ ದಾಸ್ ಆಯೋಗದ ವರದಿ ಪ್ರಕಾರ ಶೇಕಡ 6 ರಷ್ಟು ಒಳಮೀಸಲಾತಿ ನೀಡಿದ್ದಾರೆ, ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಹರಿಕಾರ, ನಮ್ಮ ಹೋರಾಟಗಳಿಗೆ ಮನ್ನಣೆ ನೀಡಿ ಸೂಕ್ತ ಕ್ರಮ ಕೈಗೊಂಡಿದ್ದಾರೆ ಇದರಿಂದ ಮುಂದಿನ ದಿನಗಳಲ್ಲಿ ನಮ್ಮ ಜನಾಂಗಕ್ಕೆ ಉದ್ಯೋಗದಲ್ಲಿ ಮೀಸಲಾತಿ ದೊರೆಯಲಿದೆ ಎಂದ ಅವರು ನಮ್ಮ ಜನಾಂಗದಲ್ಲಿ ಆದಿ ದ್ರಾವಿಡ, ಆದಿ ಕರ್ನಾಟಕ ಎಂದು ಬರೆಸಲು ಮುಂದಾಗಿದ್ದಾರೆ, ಅದು ಸರಿಯಾದುದಲ್ಲ, ಅಂತಹವರನ್ನು ಹತ್ತಿರಕ್ಕೆ ಸೇರಿಸಬೇಡಿ ಎಂದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಮಾಜಿ ಸಂಸದ ಚಂದ್ರಣ್ಣ, ಪಾವಗಡ ಮಾಜಿ ಶಾಸಕ ತಿಮ್ಮರಾಯಪ್ಪ, ನಿವೃತ್ತ ಐಎಎಸ್ ಅಧಿಕಾರಿ ಶಿವಶಂಕರ್, ಯೋಜನಾ ಪ್ರಾಧಿಕಾರದ ನಿರ್ದೆಶಕ ಡಾ.ಎಚ್‌ಎಂ ಸುಬ್ಬರಾಜ್, ಜಿಲ್ಲಾ ಮುಖಂಡ ಬಿಕೆ ಶಿವಪ್ಪ, ತಾಲೂಕು ಮುಖಂಡರಾದ ಕೆಆರ್‌ಬಿ ಶಿವಾನಂದ್, ನರಸಿಂಹಯ್ಯ, ಎಚ್‌ಎಂ ಶಿವಾನಂದ್, ಎ.ನಾರಾಯಣಸ್ವಾಮಿ, ವಿಜಯ್ ಕುಮಾರ್, ಹರೀಶ್ ಚಕ್ರವರ್ತಿ, ಗುಬ್ಬಿ ಸತೀಶ್, ರವಿ, ಗುರಪ್ಪ, ಇಟ್ಟಸಂದ್ರ ಗ್ರಾಪಂ ಅಧ್ಯಕ್ಷ ಮೂರ್ತಿ, ಜಾಂಭವ ಯುವ ಸೇನೆ ಅಧಕ್ಷ ರಮೇಶ್ ಚಕ್ರವರ್ತಿ ಹಾಜರಿದ್ದರು.