ಮಾದಿಗ ಮುಖಂಡ ವೀರಭದ್ರಪ್ಪಗೆ ಎಂಎಲ್‌ಸಿ ಸ್ಥಾನ ನೀಡಿ

| Published : Apr 05 2025, 12:47 AM IST

ಸಾರಾಂಶ

ನಾಲ್ಕು ದಶಕದಿಂದಲೂ ಕಾಂಗ್ರೆಸ್ಸಿನಲ್ಲಿ ನಿಸ್ವಾರ್ಥ ಸೇವೆ ಮಾಡಿಕೊಂಡು ಬಂದ, ಸರ್ವ ಜಾತಿ-ಧರ್ಮೀಯರ ಸೇವೆ ಮಾಡಿರುವ ಹಿರಿಯ ನಾಯಕ ಬಿ.ಎಚ್. ವೀರಭದ್ರಪ್ಪ ಅವರಿಗೆ ವಿಧಾನ ಪರಿಷತ್ತು ಸದಸ್ಯರಾಗಿ ನೇಮಕ ಮಾಡುವಂತೆ ಪಕ್ಷದ ವರಿಷ್ಠರಿಗೆ ದಾವಣಗೆರೆ ಜಿಲ್ಲಾ ಮಾದಿಗರ ಸಮಾಜ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.

- ಬೇಡಿಕೆಗೆ ಸ್ಪಂದಿಸದಿದ್ದರೆ ಸಮುದಾಯವೇ ಕಾಂಗ್ರೆಸ್‌ ಧಿಕ್ಕರಿಸುತ್ತದೆ: ಎಲ್.ಎಂ.ಹನುಮಂತಪ್ಪ ಎಚ್ಚರಿಕೆ - 4 ಎಂಎಲ್‌ಸಿ ಸ್ಥಾನಗಳಲ್ಲಿ ಒಂದನ್ನು ಪರಿಶಿಷ್ಟ ಜಾತಿ, ಅದರಲ್ಲೂ ಎಡಗೈ ಸಮುದಾಯಕ್ಕೆ ನೀಡಿ: ವೀರಭದ್ರಪ್ಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಾಲ್ಕು ದಶಕದಿಂದಲೂ ಕಾಂಗ್ರೆಸ್ಸಿನಲ್ಲಿ ನಿಸ್ವಾರ್ಥ ಸೇವೆ ಮಾಡಿಕೊಂಡು ಬಂದ, ಸರ್ವ ಜಾತಿ-ಧರ್ಮೀಯರ ಸೇವೆ ಮಾಡಿರುವ ಹಿರಿಯ ನಾಯಕ ಬಿ.ಎಚ್. ವೀರಭದ್ರಪ್ಪ ಅವರಿಗೆ ವಿಧಾನ ಪರಿಷತ್ತು ಸದಸ್ಯರಾಗಿ ನೇಮಕ ಮಾಡುವಂತೆ ಪಕ್ಷದ ವರಿಷ್ಠರಿಗೆ ದಾವಣಗೆರೆ ಜಿಲ್ಲಾ ಮಾದಿಗರ ಸಮಾಜ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು.

ನಗರದ ಮಹಾತ್ಮ ಗಾಂಧಿ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಹಿರಿಯ ಮುಖಂಡ ಎಲ್.ಎಂ.ಹನುಮಂತಪ್ಪ, ಬಿ.ಎಚ್. ವೀರಭದ್ರಪ್ಪ ಅವರಿಗೆ ಎಂಎಲ್‌ಸಿ ಮಾಡದಿದ್ದರೆ ಇಡೀ ಮಾದಿಗ ಸಮಾಜವು ಪಕ್ಷವನ್ನೇ ಧಿಕ್ಕರಿಸಬೇಕಾದೀತು ಎಂದರು.

ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಈಗಾಗಲೇ ಬಿ.ಎಚ್.ವೀರಭದ್ರಪ್ಪ ಅವರಿಗೆ ಎಂಎಲ್‌ಸಿ ಮಾಡುವಂತೆ ಪಕ್ಷದ ರಾಜ್ಯ ನಾಯಕರು, ರಾಷ್ಟ್ರೀಯ ನಾಯಕರಿಗೆ ಶಿಫಾರಸು ಮಾಡಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಸಚಿವರಾದ ಡಾ. ಜಿ.ಪರಮೇಶ್ವರ, ಕೆ.ಎಚ್. ಮುನಿಯಪ್ಪ, ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಎಚ್.ಆಂಜನೇಯ ಹೀಗೆ ಎಲ್ಲ ನಾಯಕರು ಸಹ ವೀರಭದ್ರಪ್ಪ ಪರ ಒಲವು ತೋರಿದ್ದಾರೆ. ರಾಷ್ಟ್ರೀಯ ನಾಯಕರು ವೀರಭದ್ರಪ್ಪ ಅವರನ್ನು ಎಂಎಲ್‌ಸಿ ಮಾಡಲು ಕ್ರಮ ಕೈಗೊಳ್ಳಲಿ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ವೀರಭದ್ರಪ್ಪ ಸೇವೆ ಪರಿಗಣಿಸಿ, ಎಂಎಲ್‌ಸಿ ಮಾಡುವ ಭರವಸೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಮಾದಿಗ ಸಮುದಾಯಕ್ಕೆ ಈ ಸಲ ಎಂಎಲ್‌ಸಿ ಆಗುವ ಅವಕಾಶ ತಪ್ಪಬಾರದು ಎಂದರು.

ಜನತಾ ಪಕ್ಷ ಸರ್ಕಾರವು 1978ರಲ್ಲಿ ಇಂದಿರಾ ಗಾಂಧಿ ಅವರನ್ನು ಬಂಧಿಸಿದ್ದಾಗ ದಾವಣಗೆರೆ ಬಂದ್ ಮಾಡಿ, ರೈಲು ತಡೆ ಮಾಡಿ, ವೀರಭದ್ರಪ್ಪ ಹೋರಾಟ ನಡೆಸಿದ್ದರು. ಅಂದಿನ ಸರ್ಕಾರ ಅವರನ್ನು ಬಂಧಿಸಿ, 6 ತಿಂಗಳು ಜೈಲಿನಲ್ಲಿಟ್ಟಿತ್ತು. ರೈಲ್ವೆ ಇಲಾಖೆ ಮಾತ್ರವಲ್ಲದೇ ದಾವಣಗೆರೆಯಲ್ಲಿ 30 ಕೇಸ್‌ಗಳನ್ನು 40 ಜನರ ಮೇಲೆ ಹೂಡಲಾಗಿತ್ತು. ಎಂಥದ್ದೇ ಪರಿಸ್ಥಿತಿಯಲ್ಲಿ ವೀರಭದ್ರಪ್ಪ ಹೋರಾಟದಿಂದ ಹಿಂದೆ ಸರಿಯುವ ವ್ಯಕ್ತಿಯಲ್ಲ ಎಂದು ತಿಳಿಸಿದರು.

ಸ್ಮಶಾನ ಜಾಗಕ್ಕೆ ಕಾಂಪೌಂಡ್‌:

ದಾವಣಗೆರೆ ರುದ್ರಭೂಮಿಯಲ್ಲಿ ಕೆಲವರು ಗಲೀಜು ಮಾಡಿ, ಅಮಂಗಲ ಮಾಡುತ್ತಿದ್ದರು. ಅಂತ್ಯಕ್ರಿಯೆಗೆ ಪಾಥೀವ ಶರೀರಗಳನ್ನು ತಂದಾಗ ಕಲ್ಲು ತೂರಾಟ ಮಾಡಿ, ಕೋಮು ಗಲಭೆಗೂ ಕೆಲವರು ಕಾರಣರಾಗುತ್ತಿದ್ದರು. ಅದನ್ನೆಲ್ಲಾ ಮನಗಂಡ ವೀರಭದ್ರಪ್ಪ ದೂಡಾದಿಂದ ಆಗಿನ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಆದೇಶದಂತೆ 42 ಎಕರೆಗೂ ಅಧಿಕ ಸ್ಮಶಾನದ ಸುತ್ತಲೂ 12 ಅಡಿ ಎತ್ತರದ ಕಾಂಪೌಂಡ್ ನಿರ್ಮಿಸಿದ್ದರು. ಇದು ವೀರಭದ್ರಪ್ಪ ಸೇರಿದಂತೆ ನಮ್ಮೆಲ್ಲರ ಹೋರಾಟ ಫಲ ಎಂದು ವಿವರಿಸಿದರು.

35 ವರ್ಷದಿಂದ ಇದುವರೆಗೆ 1350 ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಿಸಿದ್ದಾರೆ. ಪಕ್ಷಕ್ಕಾಗಿ ದುಡಿಯುತ್ತಾ ಬಂದ ವೀರಭದ್ರಪ್ಪಗೆ ನಗರಸಭೆ, ನಗರ ಪಾಲಿಕೆ, ಜಿಪಂ, ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರದ ಟಿಕೆಟ್ ಸಹ ಕೊಡಲಿಲ್ಲ. 2008ರಲ್ಲಿ ಬಿಜೆಪಿಯಿಂದ ಆಹ್ವಾನ ಬಂದರೂ ವೀರಭದ್ರಪ್ಪ ಕಾಂಗ್ರೆಸ್‌ಗೆ ನಿಷ್ಟರಾಗಿದ್ದರು. ಇಂತಹವರಿಗೆ ಎಂಎಲ್‌ಸಿ ಮಾಡಿ, ಪಕ್ಷ ಸ್ಪಂದಿಸಬೇಕು ಎಂದು ಹೇಳಿದರು.

ಡಿಎಸ್‌ಎಸ್‌ ಮುಖಂಡ ಹೆಗ್ಗೆರೆ ರಂಗಪ್ಪ ಮಾತನಾಡಿ, ವಿಧಾನ ಪರಿಷತ್ತುಗೆ ನಾಲ್ವರನ್ನು ಆಯ್ಕೆ ಮಾಡಲು ಅವಕಾಶವಿದೆ. ದಾವಣಗೆರೆಯ ಮಾದಿಗ ಸಮುದಾಯದ ಹಿರಿಯ ಬಿ.ಎಚ್.ವೀರಭದ್ರಪ್ಪ ಅವರಿಗೆ ಎಂಎಲ್ಸಿ ಮಾಡಬೇಕು. ಸ್ಪಂದಿಸದಿದ್ದರೆ ತಾಪಂ, ಜಿಪಂ, ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾದೀತು ಎಂದು ಎಚ್ಚರಿಸಿದರು.

ಸಮಾಜದ ಹಿರಿಯ ಮುಖಂಡ, ಎಂಎಲ್‌ಸಿ ಸ್ಥಾನ ಆಕಾಂಕ್ಷಿ ಬಿ.ಎಚ್.ವೀರಭದ್ರಪ್ಪ, ಕೆ.ಚಂದ್ರಣ್ಣ ಪೇಪರ್, ಆದಾಪುರ ನಾಗರಾಜ, ಮಂಜಪ್ಪ ಹಲಗೇರಿ, ಮಹೇಶ, ಜಗಳೂರು ಜಿ.ಎಚ್.ಶಂಭುಲಿಂಗಪ್ಪ, ಎಸ್.ಆರ್‌.ನಾಗರಾಜ ಸಂತೇಬೆನ್ನೂರು, ಜಿ.ರಾಕೇಶ, ಡಿ.ಸುರೇಶ, ಬಿ.ಆರ್.ಶಿವಮೂರ್ತಿ, ಬಿ.ಆರ್‌. ನಿರಂಜನ, ಡಿ.ಅನಿಲ, ಪಿ.ಮಂಜುನಾಥ, ನಾಗರಾಜಪ್ಪ, ಡಿ.ಹನುಮಂತಪ್ಪ, ಕೆ.ಸಿ.ಗಿರೀಶ, ಬಿ.ಆರ್. ಮಂಜುನಾಥ, ಹರಿಹರ ರಘುಪತಿ, ಮಹೇ ಶಪ್ಪ ಪುಣಬಘಟ್ಟ, ಗುರುಮೂರ್ತಿ, ಹೊನ್ನಾಳಿ ರುದ್ರೇಶ, ಅಂಜಿನಪ್ಪ, ಎಂ.ಪರಶುರಾಮಪ್ಪ, ಶ್ರೀಧರ, ನಿಂಗಪ್ಪ ಇತರರು ಇದ್ದರು.

- - -

(ಕೋಟ್‌) * 12ರಂದು ಮೌನ ಮೆರವಣಿಗೆ: ವೀರಭದ್ರಪ್ಪ ದಾವಣಗೆರೆ: ದೀನ ದಲಿತರ ನಾಯಕ ಕೆ.ಎಚ್.ರಂಗನಾಥ, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ಶಿಷ್ಯನಾಗಿ 4 ದಶಕದಿಂದ ಕಾಂಗ್ರೆಸ್ ನಿಷ್ಠಾವಂತನಾಗಿ, ನಿಸ್ವಾರ್ಥ ಸೇವೆ ಮಾಡಿದ್ದೇನೆ. ಮಧ್ಯ ಕರ್ನಾಟಕದಿಂದ ಮಾದಿಗ ಸಮುದಾಯದ ಒಬ್ಬರಿಗೆ ಎಂಎಲ್‌ಸಿ ಮಾಡುವ ಅವಕಾಶ ಇದೆ. ಪಕ್ಷದ ರಾಜ್ಯ, ರಾಷ್ಟ್ರೀಯ ನಾಯಕರು ತಮಗೆ ಅವಕಾಶ ನೀಡಲಿ ಎಂದು ಎಂಎಲ್‌ಸಿ ಸ್ಥಾನದ ಆಕಾಂಕ್ಷಿ, ಮಾದಿಗ ಸಮುದಾಯದ ಹಿರಿಯ ಮುಖಂಡ ಬಿ.ಎಚ್. ವೀರಭದ್ರಪ್ಪ ಮನವಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಈ ಬಾರಿ ತಮಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ. ಮಾದಿಗ ಸಮುದಾಯಕ್ಕೆ ಎಂಎಲ್ಸಿ ಮಾಡದಿದ್ದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಜೊತೆಗೆ ಸಮಾಜವೂ ಇರುವುದಿಲ್ಲ. ಈ ಬಗ್ಗೆ ಪಕ್ಷದ ಹೈಕಮಾಂಡ್‌, ಎಐಸಿಸಿ ಅಧ್ಯಕ್ಷರಿಗೆ ತಿಳಿಸಿದ್ದೇವೆ ಎಂದರು.

ದಾವಣಗೆರೆ ಗಾಂಧಿ ನಗರವೆಂದರೆ ಕಾಂಗ್ರೆಸ್ ಎಂಬುದನ್ನೇ ಪಕ್ಷ, ನಾಯಕರು ಮರೆಯಬೇಕಾಗುತ್ತದೆ. ಹರಿಜನರ ಕಡೆಗಣನೆ ಸರಿಯಲ್ಲ. ನಿಷ್ಟಾವಂತರಿಗೆ ಅವಕಾಶ ಕೊಡದಿದ್ದರೆ ಮತ್ತೆ ಯಾರಿಗೆ ಪಕ್ಷ ಸ್ಥಾನಮಾನ ನೀಡುತ್ತದೆ? ನಾವೆಲ್ಲಾ ಒಂದಾಗಿದ್ದೇವೆ, ಸ್ವತಃ ಮಾಜಿ ಸಚಿವ ಎಚ್.ಆಂಜನೇಯ ನನ್ನ ಪರ ಧ್ವನಿ ಎತ್ತಿದ್ದಾರೆ. ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ, ನಮ್ಮ ಸ್ವಾಮೀಜಿ ಸಹ ದೆಹಲಿಗೆ ತೆರಳಿ, ವರಿಷ್ಠರಿಗೆ ಮನವಿ ಮಾಡಿದ್ದಾರೆ ಎಂದರು.

4 ಎಂಎಲ್‌ಸಿ ಸ್ಥಾನಗಳಲ್ಲಿ 1 ಅನ್ನು ಪರಿಶಿಷ್ಟ ಜಾತಿಗೆ, ಅದರಲ್ಲೂ ಎಡಗೈ ಸಮುದಾಯಕ್ಕೆ ನೀಡಬೇಕು. ಮಾದಿಗ ಸಮುದಾಯದ ನನ್ನ ಹೆಸರೇ ಕೇಂದ್ರಕ್ಕೆ ಹೋಗಿದೆ. ಪಕ್ಷಕ್ಕಾಗಿ ನನ್ನ ಸೇವೆ, ಹಿರಿತನ ಗುರುತಿಸಿ, ಎಂಎಲ್‌ಸಿ ಮಾಡಲಿ. ನಮ್ಮ ಬೇಡಿಕೆ ಮುಂದಿಟ್ಟುಕೊಂಡು ಏ.12ರಂದು ದಾವಣಗೆರೆ ಅಂಬೇಡ್ಕರ್ ವೃತ್ತದಿಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನರ ನಿವಾಸದವರೆಗೂ ಮಾದಿಗ ಸಮುದಾಯದವರು ಮೆರವಣಿಗೆ ತೆರಳಿ, ಮನವಿ ಅರ್ಪಿಸಲಿದ್ದೇವೆ ಎಂದು ಬಿ.ಎಚ್.ವೀರಭದ್ರಪ್ಪ ತಿಳಿಸಿದರು.

- - -

-4ಕೆಡಿವಿಜಿ1, 2:

ದಾವಣಗೆರೆಯಲ್ಲಿ ಶುಕ್ರವಾರ ಮಾದಿಗ ಸಮುದಾಯದ ಹಿರಿಯ ಮುಖಂಡರಾದ ಎಂಎಲ್‌ಸಿ ಸ್ಥಾನದ ಆಕಾಂಕ್ಷಿ ಬಿ.ಎಚ್.ವೀರಭದ್ರಪ್ಪ, ಎಲ್.ಎಂ.ಹನುಮಂತಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.