ಸಾರಾಂಶ
ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಚಾಮರಾಜನಗರ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಪಾದಯಾತ್ರೆ ನಡೆಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಪಾದಯಾತ್ರೆ ನಡೆಯಿತು.ತಾಲೂಕಿನ ಮಾದಾಪುರದಿಂದ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಶಿವಮೂರ್ತಿ, ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಸವನಪುರ ರಾಜಶೇಖರ ಅವರ ನೇತೃತ್ವದಲ್ಲಿ ಆರಂಭವಾದ ಪಾದಯಾತ್ರೆ ಮಸಗಾಪುರ, ದೊಡ್ಡರಾಯಪೇಟೆ ಕ್ರಾಸ್, ಜಾಲಹಳ್ಳಿಹುಂಡಿ, ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತ, ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಜಿಲ್ಲಾಡಳಿತ ಮುಂಭಾಗದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪಾದಯಾತ್ರೆ ನೇತೃತ್ವ ವಹಿಸಿದ್ದ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಶಿವಮೂರ್ತಿ ಮಾತನಾಡಿ, ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಮಾಡಲು ಆಯಾಯ ರಾಜ್ಯಗಳಿಗೆ ಪರಮಾಧಿಕಾರವಿದೆ ಎಂದು ಐತಿಹಾಸಿಕ ತೀರ್ಪು ನೀಡಿದ್ದು, ಅದರಂತೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಲು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಒಳ ಮೀಸಲಾತಿ ಜಾರಿಗಾಗಿ ಬೃಹತ್ ಪಾದಯಾತ್ರೆ ಅಯೋಜಿಸಲಾಗಿದೆ ಎಂದರು. ಸಮುದಾಯ 30 ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರಲಾಗಿದ್ದು, ಮುಖ್ಯಮಂತ್ರಿಗಳು ಮುಂದಿನ ಸಚಿವ ಸಂಪುಟದಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕರಿಸಿ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ಭಾರತ ದೇಶದಲ್ಲಿ ಮಾದಿಗ ಜನಾಂಗದ ಇತಿಹಾಸ ನೋಡಿದರೆ ಅತ್ಯಂತ ಶ್ರೇಷ್ಠ ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ. ಈ ಭೂಮಿಯಲ್ಲಿ ಮೊದಲು ಜನ್ಮ ತಾಳಿದವನು ಜಾಂಬವಂತ ಇವನ ಮಗಳು ಜಾಂಬವತಿಯನ್ನು ಶ್ರೀಕೃಷ್ಣ ಮದುವೆಯಾಗುತ್ತಾನೆ. ಇದೇ ಕುಲದಲ್ಲಿ ಹುಟ್ಟಿದ ಅರುಂಧತಿಯನ್ನು ವಸಿಷ್ಠ ಮಹಾಮುನಿ ಮದುವೆಯಾಗುತ್ತಾನೆ. ಇಂದಿಗೂ ಹಿಂದೂ ಧರ್ಮದಲ್ಲಿ ಹೊಸದಾಗಿ ಮದುವೆಯಾಗುವ ದಂಪತಿಗಳಿಗೆ ಅರುಧಂತಿ ನಕ್ಷತ್ರ ತೋರಿಸುತ್ತಾರೆ. ಇದು ಮಾದಿಗರ ಪರಂಪರೆ. ಆದರೆ ದೇಶದ ಹಲವು ರಾಜ್ಯಗಳಲ್ಲಿ ಮಾದಿಗರ ಪರಿಸ್ಥಿತಿ ಅತ್ಯಂತ ಶೋಚನಿಯವಾಗಿದೆ ಎಂದರು.ಜಿಲ್ಲಾ ಬಂದ್ ಎಚ್ಚರಿಕೆ: ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವನಪುರ ರಾಜಶೇಖರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಜಾರಿ ಸಮುದಾಯಕ್ಕೆ ನ್ಯಾಯ ಕೊಡಿಸಿಕೊಡಬೇಕು ಇಲ್ಲದಿದ್ದರೆ ಜಿಲ್ಲಾ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಾದಯಾತ್ರೆಯಲ್ಲಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಗೌರವಾಧ್ಯಕ್ಷ ಪಾಳ್ಯ ರಾಚಪ್ಪ, ಜಿಲ್ಲಾ ಮಾದಿಗ ಒಕ್ಕೂಟದ ಮುಖಂಡರಾದ ಕೆಸ್ತೂರು ಮರಪ್ಪ, ಸಂತೇಮರಹಳ್ಳಿ ರಾಜು, ಎಸ್.ಬಸವರಾಜು, ಗುರುಲಿಂಗಯ್ಯ, ಎಂ.ಶಿವಕುಮಾರ್, ಕೆ.ಜಗದೀಶ್, ಬಸವರಾಜು ಡ್ಯಾನ್ಸ್, ಕೃಷ್ಣ, ರಾಜೇಶ್, ಬಿಸಲವಾಡಿ ಸಿದ್ದರಾಜು, ಕುಮಾರ್, ಹಸಗೂಲಿ ಸಿದ್ದಯ್ಯ, ಚಾಮರಾಜು, ನಿಟ್ರೆ ಮಹದೇವ, ಮಳವಳ್ಳಿ ಮಹದೇವ, ನರಸಿಂಹ, ಮಾದಾಪುರ ಸಿದ್ದರಾಜು, ಬಿ.ಚಾಮರಾಜು, ಕೆ.ಹನುಮಂತ, ಮುಳ್ಳೂರು ಮಂಜು, ವಸಂತ, ಕಾಮಗೆರೆ ಮಹದೇವ, ಬೂದುಬಾಳು ಮಹದೇವ, ಸೂದೇಶ್, ಹನೂರು ಗುರುಸ್ವಾಮಿ, ಎಲ್ಲೆಮಾಳ ಗೋವಿಂದ, ಸಿದ್ದೇಶ್ ಹಂಗಳ ವಕೀಲ ರಾಜೇಶ್, ಟಿಎಪಿಸಿಎಸ್ ಮಾಜಿ ಅಧ್ಯಕ್ಷ ಸೋಮಶೇಖರ್, ಬಣ್ಣಾರಿ,ಗಣೇಶಪ್ಪ, ಮಾಧು, ನಾಗಯ್ಯ, ಪಿಎನ್ ಟಿ ರಾಚಪ್ಪ, ಆರ್ ಎಂಪಿ ರಾಚಪ್ಪ, ನಾಗರಾಜ ಭಾಗವಹಿಸಿದ್ದರು.15ಸಿಎಚ್ಎನ್19
ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಚಾಮರಾಜನಗರ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಪಾದಯಾತ್ರೆ ನಡೆಯಿತು.