ಸಾರಾಂಶ
-ಮೋಟಗಿ ರೆಸಿಡೆನ್ಸಿ ಹೋಟೆಲ್ ವಿರುದ್ಧ ಜಿಲ್ಲಾಧಿಕಾರಿಗೆ ಶಿವಕುಮಾರ್ ದೊಡ್ಮನಿ ದೂರು
-----ಕನ್ನಡಪ್ರಭ ವಾರ್ತೆ ಶಹಾಪುರನಗರಸಭೆಯ ಉದ್ಯಾನವನ ಜಾಗ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಂಡು, ಒತ್ತುವರಿದಾರರಿಂದ ತೆರವುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಮಾದಿಗರ ಸಂಘ, ಮೋಟಗಿ ರೆಸಿಡೆನ್ಸಿ ಹೋಟೆಲ್ ವಿರುದ್ಧ ಜಿಲ್ಲಾಧಿಕಾರಿಯವರಿಗೆ ದೂರಿದೆ.
ಶಹಾಪುರದ ಸರ್ವೆ ನಂಬರ್ 526/1 ಕಮಲಾಬಾಯಿ ಲೇಔಟಿನಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಮೀಸಲಿಟ್ಟ ಉದ್ಯಾನವನ ಅತಿಕ್ರಮಿಸಲಾಗಿದೆ. ಆ ಜಾಗದಲ್ಲಿ ಅನಧಿಕೃತ ಬಾರ್ ಮತ್ತು ರೆಸ್ಟೋರೆಂಟ್ ನಡೆಸಲಾಗುತ್ತಿದೆ. ಅಕ್ರಮ ತೆರವಿಗೆ 5-6 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ನಗರಸಭೆ ಅಧಿಕಾರಿಗಳು ಕೇವಲ ನೋಟಿಸ್, ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದು ಒತ್ತುವರಿದಾರರನ್ನುಅಧಿಕಾರಿಗಳೇ ಸಂರಕ್ಷಿಸಿದಂತಾಗಿದೆ ಎಂದು ಸಂಘ ಆರೋಪಿಸಿದೆ.ಸೂರಿಲ್ಲದ ಕಡು ಬಡವರು ಸರ್ಕಾರಿ ಜಾಗದಲ್ಲಿ ಟಿನ್ ಶೆಡ್ ಹಾಕಿಕೊಂಡಿದ್ದರೆ ಜೆಸಿಬಿ ಮೂಲಕ ತೆರವುಗೊಳಿಸುತ್ತಾರೆ. ಆದರೆ, ಶ್ರೀಮಂತರ ಕಟ್ಟಡಗಳನ್ನು ಅಧಿಕಾರಿಗಳೇ ರಕ್ಷಿಸುವಂತಿದೆ. ಹೀಗಾಗಿ, ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ದಸಂಸ ತಾಲೂಕು ಸಂಚಾಲಕ ಚಂದ್ರಕಾಂತ್ ಭಜೇರಿ ಒತ್ತಾಯಿಸಿದ್ದಾರೆ.
ಉದ್ಯಾನವನ ಜಾಗ ಅತಿಕ್ರಮಿಸಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸುತ್ತಿದ್ದು, ಅದನ್ನು ತೆರವುಗೊಳಿಸುವಂತೆ ಕಳೆದ ವರ್ಷ ಜೂ.29ರಂದು ಶಹಾಪುರದಲ್ಲಿ ನಡೆದಿದ್ದ ಜನಸ್ಪಂದನದಲ್ಲಿ ದೂರು ಸಲ್ಲಿಸಲಾಗಿತ್ತು. ಆದರೆ, ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ದಲಿತ ಸಂಘಟನೆ ಮುಖಂಡ ಮರಳಿಸಿದ್ದಪ್ಪ ನಾಯ್ಕಲ್ ಬೇಸರ ವ್ಯಕ್ತಪಡಿಸಿದ್ದಾರೆ.ಪ್ರತಿಷ್ಠಿತ ವ್ಯಕ್ತಿಗಳಿಂದ ಕೋಟ್ಯಂತರ ರುಪಾಯಿಗಳ ಬೆಲೆ ಬಾಳುವ ಉದ್ಯಾನವನ ಜಾಗ ಒತ್ತುವರಿ ಮಾಡಿಕೊಂಡಿದ್ದು, ತೆರವುಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೂ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರು ಪ್ರಶ್ನಿಸಿದರೆ, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದು ಹೇಳುತ್ತಾರೆ. ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾದಿಗರ ಸಂಘದ ಶಿವಕುಮಾರ್ ದೊಡ್ಮನಿ ಆರೋಪಿಸಿದ್ದಾರೆ.
---ಕೋಟ್-1
ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ ಎನ್ನುವ ಮಾಹಿತಿ ಇದೆ, ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.-ರಮೇಶ್ ಬಡಿಗೇರ್, ಪೌರಾಯುಕ್ತ, ನಗರಸಭೆ ಶಹಾಪುರ.
------ಕೋಟ್-2
ಪ್ರತಿಷ್ಠಿತ ವ್ಯಕ್ತಿಗಳ ಕೈಗೊಂಬೆಯಾಗಿರುವ ನಗರಸಭೆ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು.-ನಿಂಗಣ್ಣ ನಾಟೇಕಾರ್, ದಲಿತ ಮುಖಂಡ.
-----ಪಾರ್ಕ್ ಜಾಗವನ್ನು ತೆರವುಗೊಳಿಸವಂತೆ ನಗರಸಭೆಯಿಂದ ನೀಡಿದ ನೋಟಿಸ್.