ಒಳಮೀಸಲಾತಿ ಜಾರಿಗೆ ಮಾದಿಗ ಹೋರಾಟ ಸಮಿತಿ ಆಗ್ರಹ

| Published : Oct 25 2024, 12:51 AM IST

ಸಾರಾಂಶ

ಅ.28ರ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟದ ರೂಪ-ರೇಷೆ ಬದಲಾಗುತ್ತದೆ

ಕನ್ನಡಪ್ರಭ ವಾರ್ತೆ ಬೀಳಗಿ

ರಾಜ್ಯ ಕಾಂಗ್ರೆಸ್ ಸರ್ಕಾರ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿ ಮಾಡಲಾಗುವುದು ಮತ್ತು ಇದು 6ನೇ ಗ್ಯಾರಂಟಿ ಆಗಿದೆ ಎಂದು ಹೇಳಲಾಗಿತ್ತು ಮತ್ತು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಒಳ ಮೀಸಲಾತಿ ಜಾರಿಗೆ ತರಬೇಕು. ಅಲ್ಲಿವರೆಗೂ ಎಲ್ಲ ಇಲಾಖೆಯ ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ಸ್ಥಗಿತಗೊಳಿಸಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಸೋಮು ಚೂರಿ ಮತ್ತು ದಲಿತ ಮುಖಂಡ ಪಡಿಯಪ್ಪ ಕಳ್ಳಿಮನಿ ಒತ್ತಾಯಿಸಿದರು.

ಇಲ್ಲಿಯ ಜಿಎಲ್‌ಬಿಸಿ ಪ್ರವಾಸಿ ಮಂದಿರದಲ್ಲಿ ಗುರುವಾರ ಮಾದಿಗ ಮೀಸಲಾತಿ ಹೋರಾಟ ಸಮಿತಿ ಬೆಂಬಲಿತ ಸಂಘಟನೆ ಏರ್ಪಡಿಸಿದ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಅ.28ರ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಗೊಳಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟದ ರೂಪ-ರೇಷೆ ಬದಲಾಗುತ್ತದೆ. ಅಲ್ಲದೆ ಬರುವಂತಹ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಖಂಡಿತವಾಗಿಯೂ ಸೋಲಿಸುತ್ತೇವೆ ಎಂದು ಎಚ್ಚರಿಸಿದರು.

ಒಳ ಮೀಸಲಾತಿಗೆ 30 ವರ್ಷದಿಂದ ವಿವಿಧ ಹಂತಗಳಲ್ಲಿ ಹೋರಾಡುತ್ತ ಬಂದಿದ್ದೇವೆ. ರಾಜ್ಯ ಸರ್ಕಾರ ತಾಯ್ತನ ಮತ್ತು ವಿವೇಕಯುಕ್ತ ಮನಸ್ಸಿನಿಂದ ಕಾರ್ಯಪ್ರವೃತ್ತರಾಗಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.

ದಲಿತ ಸಂಘರ್ಷ ಸಮಿತಿಯ ಮುಖಂಡ ಪಡಿಯಪ್ಪ ಕಳ್ಳಿಮನಿ ಮಾತನಾಡಿ, ಒಳ ಮೀಸಲಾತಿಗಾಗಿ ಸಮುದಾಯದ ಜನರು ಹಲವು ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ಸುಪ್ರೀಂ ಕೋರ್ಟ್ ಸಹ ಒಳ ಮೀಸಲಾತಿ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ, ಅದನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಹಿಂಜರಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಮುಖಂಡರುಗಳಾದ ಸಿದ್ದು ಮಾದರ, ಅಶೋಕ ಚಲವಾದಿ, ಶೇಖರ ನಡುವಿನಮನಿ ಇದ್ದರು.