- ಸಾಮಾಜಿಕ ನ್ಯಾಯದ ಒಳಮೀಸಲಾತಿ ನೀಡಿಯೇ 56432 ಹುದ್ದೆಗಳ ಭರ್ತಿಗೊಳಿಸಲು ತಾಕೀತು । ಹರಿಹರದಿಂದ ಪಾದಯಾತ್ರೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದಲ್ಲಿ 56432 ಹುದ್ದೆಗಳ ನೇಮಕಾತಿಯನ್ನು ಒಳಮೀಸಲಾತಿ ಆಧಾರದಲ್ಲೇ ನಡೆಸುವ ಮೂಲಕ ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಿ, ಸಾಮಾಜಿಕ ನ್ಯಾಯ ಒದಗಿಸಲು ಒತ್ತಾಯಿಸಿ ಹರಿಹರದ ಪ್ರೊ. ಬಿ.ಕೃಷ್ಣಪ್ಪ ಸಮಾಧಿ ಸ್ಥಳ ಮೈತ್ರಿವನದಿಂದ ಬೆಂಗಳೂರುವರೆಗೆ ಪಾದಯಾತ್ರೆ ಆರಂಭಿಸಿದ್ದೇವೆ ಎಂದು ಹಿರಿಯೂರಿನ ಆದಿಜಾಂಬವ ಪೀಠದ ಶ್ರೀ ಷಡಕ್ಷರಿಮುನಿ ಸ್ವಾಮೀಜಿ ನುಡಿದರು.ನಗರದ ಎಂಪೈರ್ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರೂವರೆ ದಶಕದಿಂದಲೂ ಒಳಮೀಸಲಾತಿಗಾಗಿ ಮಾದಿಗ ಸಮುದಾಯ, ಸಮಾಜದ ಸಂಘ, ಸಂಸ್ಥೆ, ಸಂಘಟನೆಗಳು ನಿರಂತರ ಹೋರಾಟ ನಡೆಯುತ್ತಿದೆ. ಇದೀಗ ಒಳಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ನೀಡುವಂತೆ ಬೆಂಗಳೂರುವರೆಗೆ ಪಾದಯಾತ್ರೆ ಕೈಗೊಂಡಿದ್ದೇವೆ ಎಂದರು.
ಪರಿಶಿಷ್ಟ ಜಾತಿಗಳ ಜನರಿಗೆ ಸಿಗಬೇಕಾದ ಸೌಲಭ್ಯ ಸಿಗಲೆಂಬ ಕಾರಣಕ್ಕೆ ಒಟ್ಟು ಮೀಸಲಾತಿಯೊಳಗೆ ಉಪ ವರ್ಗೀಕರಣ ಮಾಡಿ, ನಮ್ಮ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಯುತವಾಗಿ ಒಳ ಮೀಸಲಾತಿ ಹಂಚಿಕೆ ಮಾಡಬೇಕೆಂಬುದೇ ನಮ್ಮ ಹೋರಾಟ ಉದ್ದೇಶ. ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದರೆ ರಾಜ್ಯವ್ಯಾಪಿ ಮಾದಿಗ ಸಮುದಾಯಕ್ಕೆ ಘೋರ ಅನ್ಯಾಯ ಮಾಡಿದಂತಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರದ ನಡೆ ಗಮನಿಸಿದರೆ ತನ್ನ ಆಡಳಿತ ಅವಧಿಯಲ್ಲಿ ಮಾದಿಗ ಸಮುದಾಯವನ್ನು ಸಮಾಧಾನಪಡಿಸುವುದಕ್ಕಷ್ಟೇ ಸೀಮಿತವಾಗಿ ಅಧಿಕಾರ ಅವಧಿ ಮುಗಿಸಲು ಹೊರಟಂತಿದೆ. ಮಾದಿಗರಿಗೆ ಒಳಮೀಸಲಾತಿ ನೀಡುವ ಬಗ್ಗೆ ಈಗಾಗಲೇ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದಿದ್ದು, ರಾಜ್ಯಪಾಲರ ಅಂಕಿತವೂ ಸಿಕ್ಕಿದೆ. ರಾಜ್ಯ ಸರ್ಕಾರ ಮಾತ್ರ ಮೀನಾ-ಮೇಷ ಎಣಿಸುತ್ತ ಹಿಂದೇಟು ಹಾಕುತ್ತಿದೆ. ಇದು ಯಾಕೆ ಎಂಬುದೇ ಇಂದಿಗೂ ಅರ್ಥವಾಗುತ್ತಿಲ್ಲ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.
ಹಿರಿಯ ವಿಚಾರವಾದಿ, ಲೇಖಕ ಡಾ. ಎಚ್.ವಿಶ್ವನಾಥ ಮಾತನಾಡಿ, ಮಾದಿಗರ ಒಳ ಮೀಸಲಾತಿ ಹೋರಾಟ 35 ವರ್ಷದಿಂದಲೂ ಇದೆ. ನ್ಯಾ.ಸದಾಶಿವ ಆಯೋಗ, ನಾಗಮೋಹನ ದಾಸ್ ಆಯೋಗ ಸೇರಿದಂತೆ ಅನೇಕ ಆಯೋಗಗಳು ಸಮೀಕ್ಷೆ ಮಾಡಿ, ಸರ್ಕಾರಕ್ಕೆ ವರದಿ ನೀಡಿವೆ. ಅವುಗಳ ಆಧಾರದಲ್ಲಿ ಮಾದಿಗ ಸಮುದಾಯ ಮತ್ತು ಸಂಬಂಧಿತ ಜಾತಿಗಳಿಗೆ ಶೇ.6 ಮೀಸಲಾತಿಯನ್ನು ನ್ಯಾ.ನಾಗಮೋಹನ ದಾಸ್ ಆಯೋಗದ ಶಿಫಾರಸಿನ ಅನ್ವಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಿದೆ. ಸುಪ್ರೀಂ ಕೋರ್ಟ್ ಸಹ ಆಯಾ ರಾಜ್ಯ ಸರ್ಕಾರಕ್ಕೆ ಒಳ ವರ್ಗೀಕರಣದ ಅಧಿಕಾರವಿದೆ ಎಂಬ ತೀರ್ಪು ನೀಡಿದ ನಂತರವೂ ಸರ್ಕಾರ ವಿಳಂಬ ಸರಿಯಲ್ಲ ಎಂದರು.ಸುಪ್ರೀಂ ಕೋರ್ಟ್ ಆದೇಶದಿಂದ ಮಾದಿಗರಿಗೆ ನ್ಯಾಯ ಸಿಕ್ಕದೆ. ಆದರೆ, ನಮಗೆ ಸಿಗಬೇಕಾದ ಒಳ ಮೀಸಲಾತಿ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ರಾಜ್ಯ ಸರ್ಕಾರವು ಶೇ.17ರ ಬದಲು ಶೇ.15ರಲ್ಲಿ ನೇಮಕಾತಿಗೆ ಯೋಜಿಸಿದ್ದು, 56432 ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಿತ್ತು. ಹಳೆ ಮೀಸಲಾತಿ ಅನ್ವಯ ನೇಮಕಾತಿಗೆ ಮಾದಿಗ ಸಂಘಟನಗೆಳು ತೀವ್ರ ವಿರೋಧ ವ್ಯಕ್ತಪಡಿಸಿದೆ. ಈಗಾಗಲೇ ದಾವಣಗೆರೆ ಬಂದ್ ಆಗಿದ್ದು, ರಾಜ್ಯವ್ಯಾಪಿ ಹೋರಾಟ ನಡೆದಿದೆ. ಇದು ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು, ಒಳಮೀಸಲಾತಿ ಆದಾರದಲ್ಲೇ ಹುದ್ದೆಗಳ ಭರ್ತಿಗೆ ಮುಂದಾಗಲಿ ಎಂದು ಒತ್ತಾಯಿಸಿದರು.
ಸಮಾಜದ ಮುಖಂಡರಾದ ನಿರಂಜನ್, ಹೆಗ್ಗೆರೆ ರಂಗಪ್ಪ, ನಿಜಗುಣ, ಹಿರಿಯ ಪತ್ರಕರ್ತ ಸುರೇಶ ಕುಣಿಬೆಳಕೆರೆ ಇತರರು ಇದ್ದರು.ಪಾದಯಾತ್ರೆ:
ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿಗಾಗಿ ಹರಿಹರದಿಂದ ಬುಧವಾರ ಆರಂಭಗೊಂಡ ಶ್ರೀಗಳ ಪಾದಯಾತ್ರೆ ಗುರುವಾರ ಬೆಳಗ್ಗೆ ದಾವಣಗೆರೆ ತಲುಪಿ, ಸುದ್ದಿಗೋಷ್ಠಿ ನಡೆಸಿತು. ಅನಂತರ ಡಾ. ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ತೆರಳಿ ಮಾಲಾರ್ಪಣೆ ಬಳಿಕ ಚಿತ್ರದುರ್ಗದ ಕಡೆಗೆ ಪಾದಯಾತ್ರೆ ಸಾಗಿತು.- - -
(ಕೋಟ್) ರಾಜ್ಯ ಸರ್ಕಾರ ಜನರಿಗೆ ಹಲವಾರು ಗ್ಯಾರಂಟಿ ಸೌಲಭ್ಯಗಳನ್ನು ನೀಡಿದೆ. ಮಾದಿಗರಿಗೆ ಸಿಗಬೇಕಾದ ನಿಜವಾದ ಒಳಮೀಸಲಾತಿ ಗ್ಯಾರಂಟಿ ಮಾತ್ರ ನೀಡುತ್ತಿಲ್ಲ. ಗುಣಾತ್ಮಕವಲ್ಲದ ಗ್ಯಾರಂಟಿ ನೀಡುವ ಬದಲಿಗೆ, ಗುಣವಿರುವ ಗ್ಯಾರಂಟಿಗಳನ್ನು ನೀಡಲಿ.- ಷಡಕ್ಷರಿಮುನಿ ಸ್ವಾಮೀಜಿ, ಆದಿಜಾಂಬವ ಪೀಠ, ಹಿರಿಯೂರು.
- - --12ಕೆಡಿವಿಜಿ1:
ದಾವಣಗೆರೆ ಎಂಪೈರ್ ಹೋಟೆಲ್‌ನಲ್ಲಿ ಗುರುವಾರ ಹಿರಿಯೂರಿನ ಶ್ರೀ ಆದಿಜಾಂಬವ ಪೀಠದ ಶ್ರೀ ಷಡಕ್ಷರಿಮುನಿ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.