ಸಾರಾಂಶ
ಸಹಕಾರಿ ಕ್ಷೇತ್ರದ ಅಳಿವು-ಉಳಿವು ಯುವ ಜನಾಂಗದ ಕೈಯಲ್ಲಿದೆ. ಆದರೆ, ಯುವಕರು ಸಹಕಾರಿ ಕ್ಷೇತ್ರದಿಂದ ವಿಮುಖರಾಗುತ್ತಿರುವುದು ಖೇದಕರ ಸಂಗತಿ. ಪ್ರಸ್ತತ ಕಾಲಘಟ್ಟದ ಹಿರಿಯರ ಬಳಿಕ ಈ ಕ್ಷೇತ್ರದ ಉಳಿವು ಹೇಗೆ ಎಂಬ ಜಿಜ್ಞಾಸೆ ಕಾಡುತ್ತಿದೆ.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ರೈತರ ಜೀವನಾಡಿಯಾಗಿರುವ ಸಹಕಾರಿ ಕ್ಷೇತ್ರವನ್ನು ರಾಜಕೀಯ ರಹಿತವಾಗಿ ಬೆಳೆಸುವ ಸವಾಲು ಮತ್ತು ಸಂಧಿಗ್ದ ಪರಿಸ್ಥಿತಿ ಎದುರಾಗಿದೆ ಎಂದು ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು. ತಾಲೂಕಿನ ಮದಿಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25 ರಿಂದ 2026-27ರ ಸಾಲಿನ ಪತ್ತು (ಸಾಲ) ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿಕರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಸಹಕಾರಿ ಕ್ಷೇತ್ರ ರೈತರ ಅವಿಭಾಜ್ಯ ಅಂಗ ಎಂದೇ ಪರಿಗಣಿಸಲ್ಪಡುತ್ತದೆ. ಸಹಕಾರಿ ಕ್ಷೇತ್ರದ ಅಳಿವು-ಉಳಿವು ಯುವ ಜನಾಂಗದ ಕೈಯಲ್ಲಿದೆ. ಆದರೆ, ಯುವಕರು ಸಹಕಾರಿ ಕ್ಷೇತ್ರದಿಂದ ವಿಮುಖರಾಗುತ್ತಿರುವುದು ಖೇದಕರ ಸಂಗತಿ. ಪ್ರಸ್ತತ ಕಾಲಘಟ್ಟದ ಹಿರಿಯರ ಬಳಿಕ ಈ ಕ್ಷೇತ್ರದ ಉಳಿವು ಹೇಗೆ ಎಂಬ ಜಿಜ್ಞಾಸೆ ಕಾಡುತ್ತಿದೆ. ಸ್ವಾರ್ಥ ರಾಜಕಾರಣಕ್ಕೆ ಬೇಸತ್ತ ಯುವಕರು ಸಹಕಾರಿ ಮತ್ತು ರಾಜಕಾರಣ ಕಂಡರೆ ಅಸಹ್ಯ ಪಟ್ಟುಕೊಳ್ಳುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಸಂಘದ ಅಧ್ಯಕ್ಷರೂ ಹಿರಿಯ ನ್ಯಾಯವಾದಿ ಕೆ.ಎಲ್.ಜಿನರಾಳಿ ಮಾತನಾಡಿ, ಈ ಸಂಸ್ಥೆಯ 580 ಸದಸ್ಯರಿಗೆ ₹4.76 ಕೋಟಿ ಸಾಲ ಮಂಜೂರಾಗಿದೆ. 2017 ಮತ್ತು 2018 ರಲ್ಲಿ ಈ ಸಂಘದ 335 ರೈತ ಸದಸ್ಯರಿಗೆ ₹1.35 ಕೋಟಿ ಸಾಲ ಮನ್ನಾ ಭಾಗ್ಯ ದೊರಕಿದೆ. ₹3.94 ಕೋಟಿ ದುಡಿಯುವ ಬಂಡವಾಳವಿದ್ದು 2023ರ ಮಾರ್ಚ ಅಂತ್ಯಕ್ಕೆ ₹4.68 ಲಕ್ಷ ನಿವ್ವಳ ಲಾಭ ಗಳಿಸಿದೆ. ಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಅವರ ದಕ್ಷ ಆಡಳಿತದಲ್ಲಿ ಡಿಸಿಸಿ ಬ್ಯಾಂಕಿನ ಆರ್ಥಿಕತೆ ರಾಜ್ಯದಲ್ಲಿ ಮೊದಲ ಹಾಗೂ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗಾಗಿ ರಮೇಶ ಕತ್ತಿ ಅವರನ್ನು ಸಹಕಾರಿ ಭೀಷ್ಮ ಎಂದು ಕರೆಯಲಾಗುತ್ತದೆ ಎಂದರು.ಹಿರಣ್ಯಕೇಶಿ ಕಾರ್ಖಾನೆ ನಿರ್ದೇಶಕ ಬಸವರಾಜ ಮರಡಿ, ಸುರೇಶ ದೊಡ್ಡಲಿಂಗನವರ, ನ್ಯಾಯವಾದಿ ಕೆ.ಬಿ.ಕುರಬೇಟ, ಬಿ.ಎಂ.ಜಿನರಾಳಿ, ಸಂಘದ ನಿರ್ದೇಶಕ ಶಿವಾಜಿ ಮುತಗಿ, ಸುಲ್ತಾನಸಾಬ ಸನದಿ, ಸದಾನಂದ ಬಾಗಿ, ಮಾರುತಿ ಸನದಿ, ವಿಠ್ಠಲ ಗಾಡಿವಡ್ಡರ, ಬ್ಯಾಂಕ್ ನಿರೀಕ್ಷಕ ನಾಗರಾಜ ಕರಗುಪ್ಪಿ ಮತ್ತಿತರರಿದ್ದರು. ನ್ಯಾಯವಾದಿ ಭೀಮಸೇನ ಬಾಗಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ಎಂ.ಬಿ.ಮಾನಗಾವಿ ನಿರೂಪಿಸಿದರು. ಸಚಿನ ನೆಳ್ಳಿ ವಂದಿಸಿದರು.