ಮಡಿಕೇರಿ: ಗೀತ ನಮನ ಮೂಲಕ ಗಾಂಧೀಜಿ ವಿಭಿನ್ನ ಸ್ಮರಣೆ

| Published : Feb 01 2025, 12:01 AM IST

ಸಾರಾಂಶ

ಎರಡೂವರೆ ಗಂಟೆ ಕಾಲ ಕಲಾಪ್ರೇಮಿಗಳ ಮನಸೂರೆಗೊಂಡ ಈ ಕಾರ್ಯಕ್ರಮದ ಮೂಲಕ ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಮಡಿಕೇರಿ ಗಾಂಧಿ ಭವನದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಗೆ ಗೀತನಮನ ಸಮರ್ಪಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಲ್ಲಿ ಭಾಷಣ ಇರಲಿಲ್ಲ. ವೇದಿಕೆಯೂ ಇರಲಿಲ್ಲ, ಅಲ್ಲಿ ಕೇಳಿ ಬಂದದ್ದು ಸುಮಧುರ ಭಜನೆ, ಕೀರ್ತನೆಗಳು ಮಾತ್ರ. ಎರಡೂವರೆ ಗಂಟೆ ಕಾಲ ಕಲಾಪ್ರೇಮಿಗಳ ಮನಸೂರೆಗೊಂಡ ಈ ಕಾರ್ಯಕ್ರಮದ ಮೂಲಕ ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಗೆ ಗೀತನಮನ ಸಮರ್ಪಿಸಲಾಯಿತು.

ಇಂಥದ್ದೊಂದು ವಿಶಿಷ್ಟ ಕಾರ್ಯಕ್ರಮಕ್ಕೆ ಮಡಿಕೇರಿಯ ಗಾಂಧಿ ಭವನ ಸಾಕ್ಷಿಯಾಯಿತು. ಗಾಂಧೀಜಿ ಅವರಿಗೆ ಹಾಡುಗಳ ಮೂಲಕ ಗೌರವ ನಮನ ಸಲ್ಲಿಸುವ ನಿಟ್ಟಿನಲ್ಲಿ ಮಡಿಕೇರಿ ತಾಲೂಕು ಜಾನಪದ ಪರಿಷತ್, ಸಂಸ್ಥೆಯು ಕೊಡಗು ಜಾನಪದ ಪರಿಷತ್, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2 ನೇ ವರ್ಷದ ‘ಗಾಂಧೀಜಿ ಗೀತ ನಮನ ಸತ್ಯಂ ಶಿವಂ ಸುಂದರಂ’ ಕಾರ್ಯಕ್ರಮ ಅನೇಕ ಕಲಾವಿದರ ಪ್ರತಿಭೆ ಬೆಳಕಿಗೆ ತರಲು ಸಹಕಾರಿಯಾಯಿತು.

ಹಿರಿಯ ಲೇಖಕಿ ರಾಜಲಕ್ಷ್ಮಿ ಗೋಪಾಲಕೃಷ್ಣ, ಅಂಬೆಕಲ್ ಸುಶೀಲಾ ಕುಶಾಲಪ್ಪ, ಅಲೆಮಾಡ ಚಿತ್ರಾ ನಂಜಪ್ಪ ಉದ್ಘಾಟಿಸಿದರು.

ಎರಡೂವರೆ ಗಂಟೆ ಕಾಲ ಅನೇಕ ಗಾಯಕ, ಗಾಯಕಿಯರು ದೇಶಭಕ್ತಿಗೀತೆ, ಭಜನೆ, ಕೀರ್ತನೆ ಪ್ರಸ್ತುತಪಡಿಸಿದರು.

ಶೃತಿ ಲಯ ತಂಡದ ವೀಣಾ ಹೊಳ್ಳ, ಮಮತಾ ಶಾಸ್ತ್ರೀ, ಗೀತಾ ಸಂಪತ್ ಕುಮಾರ್, ಸುಧಾ ಎಸ್ ಪ್ರಸಾದ್, ತನುಶ್ರೀ, ಆರತಿ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಹಿರಿಯ ಕಲಾವಿದ ಜಿ. ಚಿದ್ವಿಲಾಸ್, ಪ್ರತಿಭಾ ಮಧುಕರ್, ಸ್ಕಂದ, ಸಪ್ನಾ ಮಧುಕರ್, ಕೆ.ಜಯಲಕ್ಷ್ಮಿ, ಕಾವ್ಯಶ್ರೀ ಕಪಿಲ್, ಸಂಧ್ಯಾ ಚಿದ್ವಿಲಾಸ್, ಚಿತ್ರಾ ನಂಜಪ್ಪ, ವಂದನಾ ಪೊನ್ನಪ್ಪ, ಜಾನಪದ ಯುವಬಳಗದ ಸಂಚಾಲಕಿ ಗಾಯತ್ರಿ ಚೆರಿಯಮನೆ, ಪ್ರತಿಮಾ ರೈ, ಚಿತ್ರಾ ಆರ್ಯನ್, ಪ್ರಜ್ಞ ಕಲಾಕೇಂದ್ರದ ಜೀವಿಕ, ಮಿನುಗು, ಲಷಿತ, ರೈ, ಪೂರ್ವಿ, ಸಂಜನಾ, ವರ್ಷ ಬಿ.ಡಿ., ಇಂತರ, ಸಾಂಚಿ, ಮೀನಾಕ್ಷಿ, ರೇಷ್ಮಾ ಸೇರಿದಂತೆ ಅನೇಕರು ಹಾಡುಗಳಿಗೆ ಧ್ವನಿಯಾದರು.

ಕಾರ್ಯಕ್ರಮ ಸಂಘಟಕ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರನ್ನು ಗಾಂಧಿ ಭವನದಲ್ಲಿಯೇ ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ಅವರಿಗೆ ಇಷ್ಟವಾಗಿದ್ದ ಹಾಡುಗಳ ಮೂಲಕ ವಿಭಿನ್ನ ರೀತಿಯಲ್ಲಿ ಗೀತ ನಮನ ಸಲ್ಲಿಸಲಾಗುತ್ತಿದೆ. ಜತೆಗೇ ಮಡಿಕೇರಿಯಲ್ಲಿರುವ ಹಾಡುಗಾರರ ಸಮ್ಮಿಲನವೂ ಈ ಕಾರ್ಯಕ್ರಮ ಮೂಲಕ ಆಗಿದೆ ಎಂದರು.

ಜಿಲ್ಲಾ ವಾರ್ತಾ ಮತ್ತು ಸಾರ್ವನಿಜಕ ಸಂಪರ್ಕ ಇಲಾಖಾಧಿಕಾರಿ ಚಿನ್ನಸ್ವಾಮಿ, ಮಡಿಕೇರಿ ತಾಲೂಕು ಜಾನಪದ ಪರಿಷತ್ ಖಜಾಂಚಿ ಎ.ಕೆ. ನವೀನ್, ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮ್ಮದ್, ಖಜಾಂಚಿ ಎಸ್.ಎಸ್.ಸಂಪತ್ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ. ಪಿ. ರಮೇಶ್, ಸೇರಿದಂತೆ ಅನೇಕರು ಹಾಜರಿದ್ದರು.