ಸಾರಾಂಶ
ವಿವಿಧ ಬೇಡಿಕೆಗಳ ಹಕ್ಕೋತ್ತಾಯವನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಡಿಸಿ ಕಚೇರಿ ಎದುರು ಶಾಂತಿಯುತವಾಗಿ ಮಂಡಿಸಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಆದಿಮಸಂಜಾತ ಕೊಡವರನ್ನು ಒಳಗೊಂಡ ಪರಿಪೂರ್ಣ ಮತ್ತು ಅರ್ಥಪೂರ್ಣ ಗಣರಾಜ್ಯಕ್ಕಾಗಿ ಒತ್ತಾಯಿಸಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯವನ್ನು 76ನೇ ಗಣರಾಜ್ಯೋತ್ಸವದ ದಿನವಾದ ಭಾನುವಾರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತವಾಗಿ ಮಂಡಿಸಿತು.ಸೂಕ್ಷ್ಮಾತಿಸೂಕ್ಷ್ಮ ನಗಣ್ಯ ಸಂಖ್ಯೆಯ ಕೊಡವರ ಗೌರವಾನ್ವಿತ ಗುರಿಗಳು ಮತ್ತು ಶಾಸನ ಬದ್ಧ ಹಕ್ಕೊತ್ತಾಯಗಳ ಅನುಷ್ಠಾನಕ್ಕಾಗಿ ಜಿಲ್ಲಾಡಳಿತ ಮೂಲಕ ಸರಕಾರಗಳಿಗೆ ಮನವಿ ಸಲ್ಲಿಸುತ್ತಿರುವುದಾಗಿ ಇದೇ ಸಂದರ್ಭ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದರು.
ದೇಶದ ಸಂವಿಧಾನದ ಆರ್ಟಿಕಲ್ 244 ಆರ್/ಡಬ್ಲ್ಯೂ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ವಿಶ್ವರಾಷ್ಟ್ರ ಸಂಸ್ಥೆಯ ಘೋಷಣೆ ಪ್ರಕಾರ ಅಂತರಾಷ್ಟ್ರೀಯ ಕಾನೂನಿನನ್ವಯ ಆದಿಮಸಂಜಾತ ಕೊಡವರಿಗೆ ಮಾನ್ಯತೆ ಮತ್ತು ಸೂಕ್ಷ್ಮಾತಿ ಸೂಕ್ಷ್ಮ ಕೊಡವ ಬುಡಕಟ್ಟು ಕುಲಕ್ಕೆ ಎಸ್‌ಟಿ ಟ್ಯಾಗ್ ಪರಿಗಣಿತೆಯೊಂದಿಗೆ ಸಿಎನ್‌ಸಿ ಪ್ರತಿಪಾದಿಸಿರುವ ಕೊಡವರ ಭೂಮಿ, ಭಾಷೆ, ಸಂಸ್ಕೃತಿ, ಜನಪದ ಇತ್ಯಾದಿ ಅಶೋತ್ತರಗಳಿಗೆ ರಾಜ್ಯಾಂಗ ಖಾತರಿಯ ಕಾನೂನುಬದ್ಧ ಹಕ್ಕುಗಳನ್ನು ನೀಡಬೇಕೆಂದು ಒತ್ತಾಯಿಸಿದರು.ಸಾಂವಿಧಾನಿಕ ಕಾರ್ಯವಿಧಾನದ ಮೂಲಕ ಕೊಡವರ ಪರಮೋಚ್ಚ ಆಕಾಂಕ್ಷೆಗಳು ಮತ್ತು ಗೌರವಾನ್ವಿತ ಗುರಿಗಳನ್ನು ಸಾಧಿಸಲು ಈ ಶಾಂತಿಯುತ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಬೇಡಿಕೆಗಳು: ಕೊಡವಲ್ಯಾಂಡ್ ನ ಸ್ವಾಯತ್ತ ಪ್ರದೇಶವನ್ನು ರೂಪಿಸಬೇಕು, ಕೊಡವರಿಗೆ ಸಂವಿಧಾನಿಕ ಶೆಡ್ಯೂಲ್ ಪಟ್ಟಿಯಲ್ಲಿ ಸ್ಥಾನಮಾನ ನೀಡಬೇಕು, ಪ್ರತ್ಯೇಕ ಜನಾಂಗವಾಗಿ ಕೊಡವರ ಹಕ್ಕುಗಳನ್ನು ರಕ್ಷಿಸಬೇಕು, ಅಂತಾರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಆದಿಮಸಂಜಾತ ಕೊಡವ ಬುಡಕಟ್ಟಿಗೆ ವಿಶ್ವರಾಷ್ಟ್ರ ಸಂಸ್ಥೆಯ ಮಾನ್ಯತೆ ದೊರಕಬೇಕು. ಕೊಡವ ಲ್ಯಾಂಡ್‌ನ ಆದಿವಾಸಿ ಮೂಲನಿವಾಸಿ ಕೊಡವ ಜನಾಂಗವನ್ನು ನಮ್ಮ ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಬೇಕು. ನಮ್ಮ ಭಾಷೆ ಕೊಡವ ತಕ್ಕ್ ಅನ್ನು ಸಂವಿಧಾನ 8ನೇ ಶೆಡ್ಯೂಲ್‌ಗೆ ಸೇರಿಸಬೇಕು. ನಮ್ಮ ಸಂವಿಧಾನದ 347, 350, 350ಂ ಮತ್ತು 350ಃ ವಿಧಿಗಳ ಅಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ಕ್ ಅನ್ನು ಪರಿಚಯಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.ಪುಲ್ಲೇರ ಸ್ವಾತಿ, ಪುಲ್ಲೇರ ಕಾಳಪ್ಪ, ಬಾಚಿನಾಡಂಡ ಗಿರೀಶ್, ಪಟ್ಟಮಾಡ ಲಲಿತಾ, ಕರ್ನಲ್ ಬಿ.ಎಂ. ಪಾರ್ವತಿ, ಬೊಟ್ಟಂಗಡ ಸವಿತಾ, ಅರೆಯಡ ಸವಿತಾ, ಚೋಳಪಂಡ ಜ್ಯೋತಿ ನಾಣಯ್ಯ, ಕಲಿಯಂಡ ಪ್ರಕಾಶ್, ಆಳಮಂಡ ಜೈ ಗಣಪತಿ, ಕಾಂಡೇರ ಸುರೇಶ್, ಬಾಚರಣಿಯಂಡ ಚಿಪ್ಪಣ್ಣ, ಚಂಬಂಡ ಜನತ್, ಅಜ್ಜಿಕುಟ್ಟೀರ ಲೋಕೇಶ್, ಮಂದಪಡ ಮನೋಜ್, ಅರೆಯಡ ಗಿರೀಶ್, ಬೇಪಡಿಯಂಡ ದಿನು ಮತ್ತಿತರರು ಪಾಲ್ಗೊಂಡಿದ್ದರು.