ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿ ದಸರಾಗೆ ತನ್ನದೇ ಆದ ಇತಿಹಾಸವಿದ್ದು, ಆ ನಿಟ್ಟಿನಲ್ಲಿ ದಸರಾ ಸಂಸ್ಕೃತಿ ಮತ್ತು ಜಾನಪದವನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ..ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ.ಕೊಡಗು ಜಾನಪದ ಪರಿಷತ್ ವತಿಯಿಂದ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಸಹಯೋಗದಲ್ಲಿ ನಗರದ ಗಾಂಧಿ ಮೈದಾನದಲ್ಲಿ ಸೋಮವಾರ ನಡೆದ ಜಾನಪದ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಳೆಯ ನಡುವೆಯೂ ದಸರಾಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದೇ ಸಾಕ್ಷಿಯಾಗಿದೆ ಎಂದು ನುಡಿದರು.ನಾಡಹಬ್ಬ ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ ದಸರಾಗೆ ಹೆಚ್ಚಿನ ಸ್ಪಂದನೆ ದೊರೆತಿರುವುದು ಮೆಚ್ಚುವಂತದ್ದು ಎಂದು ಎ.ಎಸ್.ಪೊನ್ನಣ್ಣ ಅವರು ಹೇಳಿದರು.
ಸಾಂಸ್ಕೃತಿಕ ಹಿನ್ನೆಲೆ ಇರುವ ತಮ್ಮದೇ ಆಚರಣೆ ಸಂಸ್ಕೃತಿ, ಕಲೆಗಳ ಪ್ರದರ್ಶನಕ್ಕೆ ಜಾನಪದ ದಸರಾ ಉತ್ತಮ ವೇದಿಕೆಯಾಗಿದೆ ಎಂದು ಎ.ಎಸ್.ಪೊನ್ನಣ್ಣ ಹೇಳಿದರು.ಕೃಷಿಕ ಮಹಿಳೆ ಭಾಗೀರಥಿ ಹುಲಿತಾಳ ಮಾತನಾಡಿ, ಜಾನಪದ ಹಾಡು, ಕತೆಗಳು ಎಂದೆಂದಿಗೂ ಸಾರ್ವಕಾಲೀಕವಾಗಿವೆ ಎಂದರು.
ಜಾನಪದ ಹಾಡು ಕತೆಗಳು ಪ್ರತಿಯೊಬ್ಬರ ಮನಸ್ಸಿಗೆ ಮುದ ನೀಡುತ್ತವೆ. ಜೊತೆಗೆ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ ಎಂದು ಹುಲಿತಾಳ ಅವರು ಹೇಳಿದರು.ಭಾವಪೂರ್ಣವಾಗಿ ಜಾನಪದ ಗೀತೆಗಳನ್ನು ಹಾಡುವುದು ಇಂದಿಗೂ ಸಹ ಇದೆ. ಜಾನಪದ ಸಾಹಿತ್ಯ ಹಾಡುವುದು ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಲಿದೆ ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ಮಾತನಾಡಿ, ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ನಡೆಯುತ್ತಿರುವುದು ವಿಶೇಷವಾಗಿದೆ. ಮಡಿಕೇರಿ ದಸರಾದಲ್ಲಿ ಜಾನಪದಕ್ಕೂ ಒತ್ತು ನೀಡಿರುವುದು ಶ್ಲಾಘನೀಯ ಎಂದರು.ಮಡಿಕೇರಿ ದಸರಾ ಕರಗ ಉತ್ಸವದೊಂದಿಗೆ ಆರಂಭವಾಗಿ ಮಹಿಳಾ, ಮಕ್ಕಳ, ಯುವ, ಕಾಫಿ ಹೀಗೆ ಹಲವು ದಸರಾವನ್ನು ಆಚರಿಸುತ್ತಿರುವುದು ಮೆಚ್ಚುವಂತದ್ದು ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಕಲೆ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅರೆಭಾಷೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಲಾಗಿದೆ ಎಂದರು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಮಹೇಶ್ ನಾಚಯ್ಯ ಅವರು ಮಾತನಾಡಿ, ದೇಶ ಬಹು ಸಂಸ್ಕೃತಿ, ಬಹು ಪರಂಪರೆ ವೈವಿಧ್ಯತೆಯನ್ನು ಒಳಗೊಂಡಿದ್ದು, ನಾಡಹಬ್ಬ ದಸರಾದಲ್ಲಿಯೂ ಸಹ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುತ್ತೇವೆ ಎಂದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷರಾದ ಬಿ.ಜಿ.ಅನಂತಶಯನ ಮಾತನಾಡಿ ಪಾರಂಪರಿಕ ಜಾನಪದ ದಸರಾವನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.ನಾಡಿನಲ್ಲಿ ಜಾನಪದ ಕಲೆ, ಸಂಸ್ಕೃತಿಗೆ ತನ್ನದೇ ಆದ ಇತಿಹಾಸವಿದ್ದು, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದರು.
ಜಾನಪದ ದಸರಾ ಸಂಚಾಲಕರಾದ ಎಚ್.ಟಿ.ಅನಿಲ್ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ‘ಜಾನಪದ ವಸ್ತು ಸಂಗ್ರಹಾಲಯಕ್ಕೆ’ ಜಾಗ ಒದಗಿಸುವಂತಾಗಬೇಕು. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮನವಿ ಮಾಡಿದರು.ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಉಪಾಧ್ಯಕ್ಷರಾದ ಮಹೇಶ್ ಜೈನಿ, ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ಬಿ.ಕೆ.ಅರುಣ್ ಕುಮಾರ್ ಅವರು ಮಾತನಾಡಿದರು. ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ಕುಡೆಕಲ್ ಸಂತೋಷ್, ಜಾನಪದ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ಚಂದ್ರಮೋಹನ್, ಪ್ರಕಾಶ್, ಟೋನಿ ಥಾಮಸ್, ಸುಜಲಾದೇವಿ, ಪ್ರಶಾಂತ್, ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ ಕುಶಾಲಪ್ಪ, ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಲೋಕೇಶ್ ಸಾಗರ್ ಇತರರು ಇದ್ದರು.
ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ಸ್ವಾಗತಿಸಿದರು. ಖಜಾಂಜಿ ಸಂಪತ್ ಕುಮಾರ್ ವಂದಿಸಿದರು.