ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲಿ ರೆಂಟಲ್ ಬೈಕ್ ಮಳಿಗೆ ಆರಂಭವಾಗುತ್ತಿದ್ದು, ಇದರ ಪರವಾನಗಿ ರದ್ದುಪಡಿಸುವಂತೆ ಮಡಿಕೇರಿ ಪ್ರವಾಸಿ ಕಾರು ಮಾಲೀಕರ ಮತ್ತು ಚಾಲಕರ ಸಂಘದಿಂದ ಆಗ್ರಹಿಸಲಾಯಿತು.ಕಾರು ನಿಲ್ದಾಣದ ಸಮೀಪದಲ್ಲೇ ರೆಂಟಲ್ ಬೈಕ್ ಮಳಿಗೆ ಮಾಡಲಾಗುತ್ತಿದೆ. ಇದನ್ನು ತೆರವುಗೊಳಿಸದಿದ್ದಲ್ಲಿ ಸೋಮವಾರದಿಂದ ಹಳದಿ ಬೋರ್ಡ್ ಟ್ಯಾಕ್ಸಿ ವಾಹನಗಳನ್ನು ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೆಲವು ಸ್ಥಳೀಯರು ಹಾಗೂ ಖಾಸಗಿ ಸಂಸ್ಥೆಗಳು ಸ್ವಯಂ ಚಾಲಿತ ದ್ವಿಚಕ್ರ ವಾಹನವನ್ನು ಕೊಡಗು ಜಿಲ್ಲೆಯಾದ್ಯಂತ ಕಚೇರಿ ತೆರೆದು ವಾಹನವನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡಲು ಮುಂದಾಗಿದ್ದಾರೆ. ಇದರಿಂದ ವಾಹನ ಮಾಲೀಕರು ಹಾಗೂ ಚಾಲಕರ ಜೀವನದ ಮೇಲೆ ಆರ್ಥಿಕ ತೊಂದರೆಯುಂಟಾಗಿದೆ ಎಂದು ಚಾಲಕರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.ಮಿತಿಗಿಂತ ಹೆಚ್ಚಿನ ವಾಹನಗಳನ್ನು ಇಟ್ಟುಕೊಂಡು ಪ್ರವಾಸಿಗರಿಗೆ ನೀಡುತ್ತಿದ್ದಾರೆ. ಅಲ್ಲಿ ಸೂಕ್ತವಾದ ಮೆಕಾನಿಕ್ ನ್ನು ಇಟ್ಟುಕೊಂಡಿಲ್ಲ. ಅಲ್ಲದೆ ದರದಲ್ಲೂ ಟ್ಯಾಕ್ಸಿಗಿಂತ ಕಡಿಮೆಯೇ ಎಂದು ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಟ್ಯಾಕ್ಸಿಯಷ್ಟೇ ದರ ಬೈಕ್ ಗಳಿಗೂ ಇದೆ ಎಂದು ಆರೋಪಿಸಿದ್ದಾರೆ.
ಆರ್ಥಿಕ ಸಂಕಷ್ಟ:ಕೊಡಗು ಜಿಲ್ಲೆಯಲ್ಲಿ 2018ರ ಪ್ರಕೃತಿ ವಿಕೋಪ ಹಾಗೂ ಕೊರೋನಾ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಬಾಡಿಗೆ ಇಲ್ಲದೆ ಟ್ಯಾಕ್ಸಿ ವಾಹನ ಮಾಲೀಕರು ಮತ್ತು ಚಾಲಕರು ವಾಹನ ವಿಮೆ, ಟ್ಯಾಕ್ಸ್, ಎಫ್ ಸಿ, ತಿಂಗಳ ಸಾಲದ ಕಂತು ಪಾವತಿಸಲಾಗದೆ ತೊಂದರೆ ಅನುಭವಿಸಿದ್ದೇವೆ. ಇದರ ನಡುವೆ ಬೆಲೆ ಏರಿಕೆಯೂ ನಮ್ಮ ಮೇಲಿದೆ. ಆದ್ದರಿಂದ ನಮಗೆ ಜೀವನ ನಡೆಸಲು ತೊಂದರೆಯುಂಟಾಗಿದ್ದು, ಈ ಸ್ವಯಂ ಚಾಲಿತ ಬೈಕ್ ಗಳಿಂದಾಗಿ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.
ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದ ಸಮೀಪ ಕಾರು ನಿಲ್ದಾಣವಿದ್ದು, ಅದರ ಸಮೀಪದಲ್ಲೇ ಎರಡು ಸ್ವಯಂ ಚಾಲಿತ ದ್ವಿಚಕ್ರ ಕಚೇರಿ ಆರಂಭವಾಗುತ್ತಿದೆ. ಆದ್ದರಿಂದ ಮೊದಲೇ ಆರ್ಥಿಕ ನಷ್ಟ ಅನುಭವಿಸುತ್ತಿರುವ ನಮಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಈ ಕಚೇರಿಯ ಪರವಾನಗಿ ರದ್ದುಗೊಳಿಸಬೇಕು ಅಥವಾ ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿದರು.ಮಡಿಕೇರಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ಸದಸ್ಯ ಅರುಣ್ ಶೆಟ್ಟಿ ರೆಂಟಲ್ ಬೈಕ್ ಮಳಿಗೆಯನ್ನು ಪರಿಶೀಲನೆ ನಡೆಸಿದರು.