ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭವು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ಶನಿವಾರ ನಡೆಯಿತು.ಕಾಲೇಜಿನ ಪ್ರಾಂಶುಪಾಲ ಪಿ.ಆರ್. ವಿಜಯ್ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಾಪಕರು ಮತ್ತು ಪೋಷಕರ ಮಾತಿನಂತೆ ನಡೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಕೋರನ ಸರಸ್ವತಿ ಅವರು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಒಂದು ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿದ್ದು, ಪ್ರತೀ ವರ್ಷವೂ ಉತ್ತಮ ಫಲಿತಾಂಶ ದಾಖಲಾಗುತ್ತಿದೆ. ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಉನ್ನತ ಹುದ್ದೆಗೇರಿರುವ ಅನೇಕ ಹಿರಿಯ ವಿದ್ಯಾರ್ಥಿಗಳು ಇತಿಹಾಸವನ್ನೇ ನಿರ್ಮಾಣ ಮಾಡಿದ್ದಾರೆ. ವಿದ್ಯಾರ್ಥಿಗಳು ತಮ್ಮ ಹೆಜ್ಜೆ ಗುರುತುಗಳನ್ನು ವಿದ್ಯಾಸಂಸ್ಥೆಯಲ್ಲಿ ಬಿಟ್ಟು ಹೋದರೆ ಅದು ಮುಂಬರುವ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದೆ. ನಿರಂತರ ಅಧ್ಯಯನ ಮತ್ತು ಕಾರ್ಯ ತತ್ಪರತೆ ತಮ್ಮನ್ನು ಸಾಧಕರ ಸಾಲಿನಲ್ಲಿ ನಿಲ್ಲಿಸುತ್ತದೆ ಎಂದರು.ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜೆ. ದಿವಾಕರ ಅವರು 2019-20 ರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮಡಿಕೇರಿಯಲ್ಲಿ ನಿಯೋಜನೆ ಮೇರೆಗೆ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಮತ್ತು ಆ ವರ್ಷದ ವಿದ್ಯಾರ್ಥಿಗಳ ಸಾಧನೆ ಮೆಲುಕು ಹಾಕಿದರು. ಇಲ್ಲಿ ಅಧ್ಯಯನ ಮಾಡುತ್ತಿರುವ ಅನೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ಸದೃಢರಾಗಿ ಇರುವುದಿಲ್ಲ. ಆದರೆ ವಿದ್ಯಾರ್ಥಿಗಳು ಅವರ ತಂದೆ ತಾಯಿಗಳ ಕಷ್ಟವನ್ನು ಅರಿತು ತಾವು ಉತ್ತಮ ಅಂಕಗಳನ್ನು ಗಳಿಸಿ ಜೀವನ ನಿರ್ವಹಣೆಗೆ ಒಂದು ಉದ್ಯೋಗವನ್ನು ಪಡೆದಾಗ ಹೆತ್ತವರಿಗೆ ಕೊಡುವ ದೊಡ್ಡ ಬಹುಮಾನವಾಗಲಿದೆ ಎಂದರು.
ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕಾಲೇಜಿನ ನಿಜವಾದ ರಾಯಭಾರಿಗಳು. ಕಾಲೇಜಿನ ಭವಿಷ್ಯ ನಿಮ್ಮ ಮೇಲಿದೆ, ಮುಂಬರುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ನಾಡಿಗೆ ಉತ್ತಮ ಸಂದೇಶ ನೀಡಿದಂತಾಗುತ್ತದೆ ಎಂದು ಕೆ.ಜೆ. ದಿವಾಕರ ನುಡಿದರು.ವಿದ್ಯಾರ್ಥಿಗಳು ಸನ್ನಡತೆಯಿಂದ ಬಾಳಿದಾಗ ಹೆತ್ತವರಿಗೆ, ಗುರುಗಳಿಗೆ ಅದೇ ದೊಡ್ಡ ಗೌರವವಾಗುತ್ತದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಆರ್.ಪಿ. ಮಾತನಾಡಿದರು. ಉಪನ್ಯಾಸಕರು, ವಿದ್ಯಾರ್ಥಿಗಳು ಇತರರು ಇದ್ದರು.
;Resize=(128,128))
;Resize=(128,128))