ಮಡಿಕೇರಿ: ಅಕ್ಟೋಬರ್ 6,7ರಂದು ವಿನೂತನ ‘ಕಾಫಿ ದಸರಾ’

| Published : Oct 04 2024, 01:01 AM IST / Updated: Oct 04 2024, 01:02 AM IST

ಸಾರಾಂಶ

ಮಡಿಕೇರಿ ದಸರಾದಲ್ಲಿ ಈ ವರ್ಷದಿಂದ ಕಾಫಿ ದಸರಾ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದ್ದು, ಅ.6 ಮತ್ತು 7ರಂದು ನಡೆಯುವ ಕಾಫಿ ದಸರಾದಲ್ಲಿ ಕಾಫಿ ಮತ್ತು ಇತರ ಕೃಷಿಗೆ ಸಂಬಂಧಿಸಿದಂತೆ ಅನೇಕ ಮಾಹಿತಿ ಕೃಷಿಕರಿಗೆ ದೊರಕಲಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ದಸರಾದಲ್ಲಿ ಈ ವರ್ಷದಿಂದ ಕಾಫಿ ದಸರಾ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದ್ದು, ಅ.6 ಮತ್ತು 7ರಂದು ನಡೆಯುವ ಕಾಫಿ ದಸರಾದಲ್ಲಿ ಕಾಫಿ ಮತ್ತು ಇತರ ಕೃಷಿಗೆ ಸಂಬಂಧಿಸಿದಂತೆ ಅನೇಕ ಮಾಹಿತಿ ಕೃಷಿಕರಿಗೆ ದೊರಕಲಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.

ನಗರದಲ್ಲಿ ಕಾಫಿ ದಸರಾ ಸಂಬಂಧಿತ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಡಾ. ಮಂತರ್ ಗೌಡ, ಇದೇ ಮೊದಲ ಬಾರಿಗೆ ಆಯೋಜಿತವಾಗಿರುವ ಕಾಫಿ ದಸರಾಕ್ಕೆ ಕಾಫಿ ಮಂಡಳಿ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಸೇರಿದಂತೆ ಕಾಫಿ ವಲಯದಿಂದ ಉತ್ತಮ ಸ್ಪಂದನ ದೊರಕಿದೆ. ಈಗಾಗಲೇ 32 ಮಳಿಗೆಗಳು ಭರ್ತಿಯಾಗಿದ್ದು, ಅನೇಕ ಇಲಾಖೆಗಳು ಕಾಫಿ ದಸರಾದಲ್ಲಿ ಮಳಿಗೆಗಳು 6 ಮತ್ತು 7ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆದಿರುತ್ತವೆ ಎಂದರು.

6ರಂದು ಬೆಳಗ್ಗೆ 10ಕ್ಕೆ ಕೃಷಿ ಸಚಿವ ಚೆಲುವರಾಯ ಸ್ವಾಮಿ ಗಾಂಧಿ ಮೈದಾನದಲ್ಲಿ ಕಾಫಿ ದಸರಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೖಂದ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ. ರಾಜೀವ್, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾಬೆಳ್ಯಪ್ಪ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ, ಅಂದು 11 ಗಂಟೆಯಿಂದ 12.30ರ ವರೆಗೆ ವಿಚಾರಸಂಕಿರಣದಲ್ಲಿ ಕೃಷಿ ರಂಗದ ಪರಿಣಿತರಾದ ಧರ್ಮರಾಜ್, ಡಾ ಕೆಂಚರೆಡ್ಡಿ, ಕೆ ಕೆ ವಿಶ್ವನಾಥ್ ಮಾಹಿತಿ ವಿನಿಮಯ ಮಾಡಲಿದ್ದಾರೆ ಎಂದೂ ಮಾಹಿತಿ ನೀಡಿದರು,

7ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಮಳಿಗೆಗಳು ತೆರೆದಿರುತ್ತವೆ. ಕಲಾಸಂಭ್ರಮ ವೇದಿಕೆಯಲ್ಲಿ ನಡೆಯುವ ವಿಚಾರಗೋಷ್ಠಿಯಲ್ಲಿ ನಡಿಕೇರಿಯಂಡ ಬೋಸ್ ಮಂದಣ್ಣ, ಖಲಿಸ್ತಾ ಡಿಸೋಜಾ, ಡಾ.ಶಿವಪ್ರಸಾದ್, ಮಿಲನಾ ಭರತ್ ಮಾಹಿತಿ ವಿನಿಮಯ ಮಾಡಲಿದ್ದಾರೆ.

ಅಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೊಡಗು ಜಿಲ್ಲೆಯ ಸಾಧಕ ಕೃಷಿಕರಿಗೆ ಸನ್ಮಾನ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮತ್ತು ಮಡಿಕೇರಿ ದಸರಾ ಸಮಿತಿ ಅಧ್ಯಕ್ಷ ವೆಂಕಟರಾಜಾ ಮಾತನಾಡಿ, ಗುಣಮಟ್ಟದ ಮಳಿಗೆಗಳನ್ನು ನಿರ್ಮಿಸಲಾಗುತ್ತದೆ. ಪ್ರತಿ ಮಳಿಗೆಯಲ್ಲಿಯೂ ಸೂಕ್ತ ಮಾಹಿತಿ ಹಾಕಲಾಗುತ್ತದೆ, ಕರಪತ್ರ ನೀಡುವದಕ್ಕೆ ಸೀಮಿತರಾಗದೆ ಪ್ರತೀ ಇಲಾಖೆಗಳೂ ಸರ್ಕಾರದಿಂದ ಕಷಿಕರಿಗೆ ದೊರಕುವ ಸೌಲಭ್ಯಗಳು, ಅದನ್ನು ಪಡೆಯುವ ರೀತಿಯನ್ನು ಪರಿಣಾಮಕಾರಿಯಾಗಿ ತಿಳಿಸುವಂತೆ ಸೂಚಿಸಿದರು.

ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ, ಕಾಫಿ ದಸರಾ ಸಂಚಾಲಕ ಅನಿಲ್ ಎಚ್ ಟಿ ಮಾತನಾಡಿ, 11 ವರ್ಷಗಳ ಹಿಂದೆ ದಸರಾಕ್ಕೆ ಮಕ್ಕಳ ದಸರಾ ಸೇರ್ಪಡೆಯಾಗಿತ್ತು, 7 ವರ್ಷಗಳ ಹಿಂದೆ ಮಹಿಳಾ ದಸರಾ ಸೇರ್ಪಡೆಯಾಯಿತು, 5 ವರ್ಷಗಳ ಮೊದಲು ಜಾನಪದ ದಸರಾ ಸೇರ್ಪಡೆಯಾಯಿತು, ಇದೀಗ ಕಾಫಿ ದಸರಾದ ಮೂಲಕ ನಾಡಹಬ್ಬದಲ್ಲಿ ಕೃಷಿಕರಿಗೂ ಪ್ರಯೋಜನಕಾರಿ ಮಾಹಿತಿ ಲಭಿಸುತ್ತಿರುವುದು ಶ್ಲಾಘನೀಯ ಎಂದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಬಿ.ವೈ., ಖಜಾಂಚಿ ಅರುಣ್ ಶೆಟ್ಟಿ, ಕಾಫಿ ಮಂಡಳಿ ಉಪನಿರ್ದೇಶಕರು ತೋಟಗಾರಿಕೆ, ಕಷಿ, ಕೈಗಾರಿಕೆ, ಪಶುಪಾಲನಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು, ಕೊಡಗು ಪ್ಲಾಂಟರ್ಸ್ ಅಸೋಯಿಯೇಷನ್ ಅಧ್ಯಕ್ಷ ನಂದಾಬೆಳ್ಯಪ್ಪ, ನಿರ್ದೇಶಕ ಕೆ.ಕೆ.ವಿಶ್ವನಾಥ್, ಕಾರ್ಯದರ್ಶಿ ಬೆಳ್ಯಪ್ಪ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ ರಾಜೀವ್ ಸೇರಿದಂತೆ ಅನೇಕ ಬೆಳೆಗಾರರು ಸಭೆಯಲ್ಲಿದ್ದರು.

ಕಾಫಿ ದಸರಾ ಲೋಗೋವನ್ನು ಶಾಸಕರು, ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು.ಕಾಫಿ ದಸರಾ ಸನ್ಮಾನಿತ ಸಾಧಕರು:

ನಡಿಕೇರಿಯಂಡ ಬೋಸ್ ಮಂದಣ್ಣ, ಸುಂಟಿಕೊಪ್ಪ, (ಕಾಫಿ ಕೃಷಿ ಸಾಧನೆ) ಬಿ ಪಿ ರವಿಶಂಕರ್, ಪೊನ್ನಂಪೇಟೆ ( ಸಮಗ್ರ ಕೃಷಿಕ) , ಜೆರ್ಮಿ ಡಿಸೋಜಾ ಕುಶಾಲನಗರ, (ಕಾಫಿ ಕೃಷಿ) ನಿಖಿಲ್ ರಾಮಮೂರ್ತಿ, ಕರಡ, (ಬಿದಿರು ಕೃಷಿ) ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘ, (ಸಂಘಕ್ಕಾಗಿನ ಪ್ರಶಸ್ತಿ) , ವಿ ಎ ತಾಹೀರ್ ಮಡಿಕೇರಿ, (ಯಂತ್ರೋಪಕರಣಗಳ ತಯಾರಿಕೆಗಾಗಿ) ಶಿರಗಜೆ ಮಾದಪ್ಪ, ಭಾಗಮಂಡಲ ( ಜೇನು ಕೃಷಿ)