ಮಡಿಕೇರಿ ನಗರಸಭೆ ವಿಶೇಷ ಸಭೆ ಕೊನೇ ಕ್ಷಣದಲ್ಲಿ ರದ್ದು!

| Published : Feb 13 2024, 12:49 AM IST

ಮಡಿಕೇರಿ ನಗರಸಭೆ ವಿಶೇಷ ಸಭೆ ಕೊನೇ ಕ್ಷಣದಲ್ಲಿ ರದ್ದು!
Share this Article
  • FB
  • TW
  • Linkdin
  • Email

ಸಾರಾಂಶ

ವಿಶೇಷ ಸಭೆ ಕೊನೆ ಕ್ಷಣದಲ್ಲಿ ರದ್ದು

ಕನ್ನಡಪ್ರಭ ವಾರ್ತೆ ಮಡಿಕೇರಿಮಡಿಕೇರಿ ನಗರಸಭೆಯ ವಿಶೇಷ ಸಭೆಯನ್ನು ಸೋಮವಾರ ಕರೆಯಲಾಗಿತ್ತು. ಆದರೆ ಆಡಳಿತ ಪಕ್ಷದ ಬಹುತೇಕ ಹಾಗೂ ವಿರೋಧ ಪಕ್ಷದ ಸದಸ್ಯರು ಸಭೆಗೆ ಪಾಲ್ಗೊಳ್ಳದೆ ಇದ್ದ ಹಿನ್ನೆಲೆಯಲ್ಲಿ ಸಭೆ ಕೊನೆ ಕ್ಷಣದಲ್ಲಿ ರದ್ದುಗೊಂಡಿತು.ಈ ಹಿಂದಿನ ಸಭೆಯಲ್ಲಿ ನಗರಸಭೆಯ ಪೌರಾಯುಕ್ತರನ್ನು ವರ್ಗಾವಣೆ ಮಾಡುವಂತೆ ಸಭೆಯಲ್ಲಿ ಸರ್ವ ಪಕ್ಷದ ಸದಸ್ಯರಿಂದ ಒಮ್ಮತದ ನಿರ್ಣಯ ಕೈಗೊಳ್ಳಲಾಗಿತ್ತು. ಆದರೂ ಪೌರಾಯುಕ್ತರು ವರ್ಗಾವಣೆಗೊಂಡಿಲ್ಲ ಎಂದು ಅಸಮಾಧಾನಗೊಂಡಿರುವ ಬಹುತೇಕ ಸದಸ್ಯರು ಸಭೆಗೆ ಗೈರು ಆಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದಸ್ಯರೇ ಇಲ್ಲದ ಕಾರಣ ಅಧ್ಯಕ್ಷರು ಸಭೆಯನ್ನು ರದ್ದುಗೊಳಿಸಿದ ಪ್ರಸಂಗವೂ ನಡೆಯಿತು.ಮಡಿಕೇರಿ ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ, ಸೋಮವಾರ ಮಧ್ಯಾಹ್ನ 3.30 ಗಂಟೆಗೆ ನಗರಸಭೆ ಸದಸ್ಯರ ವಿಶೇಷ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಭಾಗವಹಿಸದೇ ಇರಲು ಬಹುತೇಕ ಸದಸ್ಯರು ಮೊದಲೇ ನಿರ್ಧರಿಸಿದ್ದರು.ನಗರಸಭೆಯ ಬಿಜೆಪಿ ಸದಸ್ಯರಿಂದಲೂ ಸಭೆಯಿಂದ ದೂರವಿರಲು ತೀರ್ಮಾನಿಸಲಾಗಿತ್ತು. ಎಸ್‌ಡಿಪಿಐ, ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರಿಂದಲೂ ಸಭೆಗೆ ಹಾಜರಾಗದೆ ಬಹಿಷ್ಕಾರ ಮಾಡಲಾಗಿತ್ತು. ಮಧ್ಯಾಹ್ನ 3 ಗಂಟೆಯಾದರೂ ನಗರಸಭೆಯತ್ತ ಸದಸ್ಯರು ಕಾಣಿಸಿಕೊಳ್ಳಲಿಲ್ಲ. ಸದಸ್ಯರ ಕೋರಂ ಇಲ್ಲದ ಸುಳಿವು ದೊರಕಿದ ಕೂಡಲೇ ನೋಟಿಸ್ ಬೋರ್ಡ್‌ನಲ್ಲಿ ಸಭೆ ಮುಂದೂಡಲ್ಪಟ್ಟ ಮಾಹಿತಿ ಹಾಕಲಾಯಿತು.ಬಿಜೆಪಿಯ ಪ್ರಮುಖ ನಾಯಕರೀರ್ವರಿಂದ ನಗರಸಭೆಯ ಬಿಜೆಪಿ ಸದಸ್ಯರಿಗೆ ಪದೇಪದೆ ದೂರವಾಣಿ ಕರೆ ಮಾಡಲಾಯಿತು. ಸಭೆಗೆ ಹಾಜರಾಗಲೇಬೇಕೆಂದು ತಾಕೀತು ಮಾಡಲಾಯಿತು. ಪಕ್ಷದ ಪ್ರಮುಖರಿಂದ ಕರೆ ಮಾಡಿಸಿ ಸದಸ್ಯರನ್ನು ಸಭೆಗೆ ಬರುವಂತೆ ಮಾಡುವ ಪ್ರಯತ್ನವೂ ವಿಫಲವಾಯಿತು. ಮಧ್ಯಾಹ್ನದಿಂದಲೇ ಬಿಜೆಪಿಯ ಅನೇಕ ಸದಸ್ಯರು ಮೊಬೈಲ್ ಬಂದ್ ಮಾಡಿದ್ದರು ಎನ್ನಲಾಗಿದೆ.ಪೌರಾಯುಕ್ತರನ್ನು ವರ್ಗಾವಣೆ ಮಾಡುವಂತೆ ಹಿಂದಿನ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡ ಬಳಿಕವೂ ಪೌರಾಯುಕ್ತರ ಉಪಸ್ಥಿತಿಯಲ್ಲಿ ಸಭೆ ನಡೆಸಲು ಮುಂದಾದ ಅಧ್ಯಕ್ಷರ ತೀರ್ಮಾನಕ್ಕೆ ಬಿಜೆಪಿ ಸದಸ್ಯರೂ ಸೇರಿದಂತೆ ನಗರಸಭೆಯ ಬಹುತೇಕ ಸದಸ್ಯರ ಅಸಮಧಾನ ವ್ಯಕ್ತಪಡಿಸಿದ್ದಾರೆ.ಸಭಾಂಗಣದೊಳಕ್ಕೆ ತೆರಳದೆ ಅಧ್ಯಕ್ಷರ ಚೇಂಬರ್‌ನಲ್ಲಿಯೇ ಮೂವರು ಬಿಜೆಪಿ ಸದಸ್ಯರು ಕುಳಿತಿದ್ದರು. ಕೊನೆಗೂ ಅಧ್ಯಕ್ಷರು ಸಭೆಯನ್ನು ಮುಂದೂಡಿದರು.ವಿಪರ್ಯಾಸ ಎಂದರೆ ಮಾಧ್ಯಮ, ಪತ್ರಕರ್ತರಿಗೂ ವಿಶೇಷ ಸಭೆಯ ಮಾಹಿತಿ ನೀಡದೇ ನಗರಸಭೆ ಸಭೆಗೆ ಮುಂದಾಗಿತ್ತು. ಅಧಿಕಾರದ ಮೊದಲ ಅವಧಿ ಮುಕ್ತಾಯದ ಹಂತದಲ್ಲಿರುವ ಸಂದರ್ಭವೇ ಬಿಜೆಪಿ ಆಡಳಿತದ ನಗರಸಭೆ ಗೊಂದಲದ ಗೂಡಾಗುತ್ತಿದೆ.