ಸಾರಾಂಶ
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಗುರುವಾರ ರಾತ್ರಿ ನಡೆದ ಮಡಿಕೇರಿ ಯುವ ದಸರಾ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಉದ್ಘಾಟಿಸಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಗುರುವಾರ ರಾತ್ರಿ ನಡೆದ ಮಡಿಕೇರಿ ಯುವ ದಸರಾ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಉದ್ಘಾಟಿಸಿ ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಅವರು, ಯುವಕರು ತಮ್ಮ ಕನಸುಗಳನ್ನು ನನಸು ಮಾಡಲು ಪರಿಶ್ರಮಪಡಬೇಕು. ಇಲ್ಲದಿದ್ದರೆ ಇನ್ನೊಬ್ಬರ ಕನಸುಗಳನ್ನು ನನಸು ಮಾಡಲು ತಮ್ಮನ್ನು ಕೆಲಸಕ್ಕೆ ಇಟ್ಟುಕೊಳ್ಳುತ್ತಾರೆ. ಅಲ್ಲಿಯಾದರೂ ಕೆಲಸಕ್ಕೆ ಸೇರಿಕೊಳ್ಳಿ. ಜೀವನದಲ್ಲಿ ಅಷ್ಟೇ ಆಗುವುದು ಎಂದರು.
ಈ ಪೀಳಿಗೆಯ ಯುವಕರಿಗೆ ಏನಾದರೂ ಸಾಧಿಸಬೇಕೆಂದು ಕನಸಿರುತ್ತದೆ. ದೊಡ್ಡದಾದ ಆಸೆಗಳಿರುತ್ತವೆ. ತೀರಾ ಆಲೋಚನೆ ಮಾಡಿಕೊಂಡರೂ ನಾವು ಜೀವನದಲ್ಲಿ ಸೋತು ಹೋಗುತ್ತೇವೆ. ಆದ್ದರಿಂದ ಶ್ರದ್ಧೆಯಿಂದ ಯುವಕರು ಗುರಿಯನ್ನುಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.ಶಾಸಕ ಡಾ. ಮಂತರ್ ಗೌಡ ಮಾತನಾಡಿ ನಮ್ಮ ಪರಿಶ್ರಮ ಇಲ್ಲದಿದ್ದರೆ ಏನನ್ನೂ ಕೂಡ ಸಾಧನೆ ಮಾಡಲು ಸಾಧ್ಯವಿಲ್ಲ. ಸೋತರೆ ಮಾತ್ರ ಮುಂದಿನ ಗೆಲವು ಸಾಧ್ಯ. ಅಭಿವೃದ್ಧಿ ಮೂಲಕ ನಾವು ಜನರ ಮನಸ್ಸನ್ನು ಗೆಲ್ಲಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಮುಖರಾದ ಟಿ.ಪಿ. ರಮಶ್, ಯುವ ದಸರಾ ಸಮಿತಿ ಅಧ್ಯಕ್ಷ ಸೋಮು, ನಗರಸಭಾ ಮಾಜಿ ಅಧ್ಯಕ್ಷ ಪಿ.ಡಿ. ಪೊನ್ನಪ್ಪ, ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ಮತ್ತಿತರರು ಇದ್ದರು.ಇಂದು, ನಾಳೆ ಮಡಿಕೇರಿ ದಸರಾ ವಿವಿಧ ಕಾರ್ಯಕ್ರಮ:
ನಗರ ದಸರಾ ಸಮಿತಿ ವತಿಯಿಂದ ಶುಕ್ರವಾರ ನಗರದ ಗಾಂಧಿ ಮೈದಾನದಲ್ಲಿ ಆಯುಧ ಪೂಜಾ ಸಮಾರಂಭ ನಡೆಯಲಿದೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಕನ್ನಡದ ಪ್ರಸಿದ್ಧ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಸಂಗೀತ ರಜಮಂಜರಿ, ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋ ಮಡಿಕೇರಿ ಇವರಿಂದ ಡ್ಯಾನ್ಸ್ ಸಂಗಮ, ಟೀಂ ಇಂಟೋಪೀಸ್ ಡ್ಯಾನ್ಸ್ ಸ್ಟುಡಿಯೋ ವಿರಾಜಪೇಟೆ ಇವರಿಂದ ನೃತ್ಯ ವೈವಿಧ್ಯ, ನಾದ ವಿದ್ಯಾಲಯ ಸಂಗೀತ ಮತ್ತು ನೃತ್ಯ ಅಕಾಡೆಮಿ ಮೈಸೂರು ಇವರಿಂದ ನೃತ್ಯ ವೈವಿಧ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶನಿವಾರ ವಿಜಯ ದಶಮಿಯಂದು ಜೀ ಕನ್ನಡ ಸರಿಗಮಪ ಲಿಟಲ್ ಚಾಂಪ್ 19 ರನ್ನರ್ ಅಪ್ ತನುಶ್ರೀ ಮಂಗಳೂರು ಮತ್ತು ಸರಿಗಮಪ ಗಾಯಕ ಅನ್ವಿತ್ ಕುಮಾರ್ ಬಾಳೆಲೆ ಅವರಿಂದ ಸಂಗೀತ ಸಂಜೆ, ಕನ್ನಡ ಸಿರಿ ಸ್ನೇಹ ಬಳಗ ಲೋಕೇಶ್ ಸಾಗರ್ ತಂಡದಿಂದ ಗಾನ ಸುಧೆ, ನೃತ್ಯ ವಿದ್ಯಾಪೀಠ ಮೈಸೂರು- ನೃತ್ಯ ವೈವಿದ್ಯ, ಸಂಗೀತ ಸಂಜೆ, ನಾಟ್ಯ ಸಂಕಲ್ಪ ಪೊನ್ನಂಪೇಟೆ ಸೇರಿದಂತೆ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗಿನ ಜಾವ 6 ಗಂಟೆಯವರೆಗೆ ನಾಡಿನ ಪ್ರಖ್ಯಾತ ಗಾಯಕ, ಗಾಯಕಿಯರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.