ಮಡಿಕೇರಿ: 23ರಂದು ‘ಪ್ರಕೃತಿ-ಪರಿಸರ’ ಜಿಲ್ಲಾ ಮಟ್ಟದ ಕವಿಗೋಷ್ಠಿ

| Published : Jun 15 2024, 01:10 AM IST

ಸಾರಾಂಶ

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಕೊಡಗು ಜಿಲ್ಲಾ ಸಮಿತಿ ವತಿಯಿಂದ 23ರಂದು ಮಡಿಕೇರಿ ನಗರದಲ್ಲಿ ಸಾರ್ವಜನಿಕರಿಗಾಗಿ ‘ಪ್ರಕೃತಿ-ಪರಿಸರ’ ವಿಷಯದ ಕುರಿತ ಜಿಲ್ಲಾ ಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ. ಮೊದಲು ನೋಂದಾಯಿತ ೩೦ ಕವನಗಳಿಗೆ ಕಾರ್ಯಕ್ರಮದಲ್ಲಿ ವಾಚನ ಮಾಡಲು ಅವಕಾಶ ಕಲ್ಪಿಸಲಾಗುವುದು. ಆಸಕ್ತ ಕವಿಗಳು ಜೂ.೨೨ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಕೊಡಗು ಜಿಲ್ಲಾ ಸಮಿತಿ ವತಿಯಿಂದ 23ರಂದು ಮಡಿಕೇರಿ ನಗರದಲ್ಲಿ ಸಾರ್ವಜನಿಕರಿಗಾಗಿ ‘ಪ್ರಕೃತಿ-ಪರಿಸರ’ ವಿಷಯದ ಕುರಿತ ಜಿಲ್ಲಾ ಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದು ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಬ್ಬಿರ ಸರಸ್ವತಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ನಗರದ ಭಾರತೀಯ ವಿದ್ಯಾಭವನದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿ ಕಿಗ್ಗಾಲು ಗಿರೀಶ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಕವಿಗೋಷ್ಠಿಯಲ್ಲಿ ಆಯ್ಕೆಯಾದ ಮೊದಲ ಮೂರು ಅತ್ಯುತ್ತಮ ಕವನಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಮತ್ತು ಭಾಗವಹಿಸಿದ ಎಲ್ಲಾ ಕವಿ, ಕವಯತ್ರಿಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದು. ಮಕ್ಕಳ ಕವನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮೊದಲು ನೋಂದಾಯಿತ ೩೦ ಕವನಗಳಿಗೆ ಕಾರ್ಯಕ್ರಮದಲ್ಲಿ ವಾಚನ ಮಾಡಲು ಅವಕಾಶ ಕಲ್ಪಿಸಲಾಗುವುದು. ಆಸಕ್ತ ಕವಿಗಳು ಜೂ.೨೨ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಸಿ.ಎಸ್.ಸುರೇಶ್, ಜಿಲ್ಲಾ ಸಹಕಾರ್ಯದರ್ಶಿ ಚಂದನ್ ನಂದರಬೆಟ್ಟು, ಮಕ್ಕಳ ಪ್ರಕಾರ ಪ್ರಮುಖ್ ಹೇಮಂತ್ ಪಾರೇರ, ಗೌರವಾಧ್ಯಕ್ಷ ಕಸ್ತೂರಿ ಗೊವಿಂದಮ್ಮಯ್ಯ, ಮಾಧ್ಯಮ ಪ್ರಮುಖ್ ವಿನೋದ್ ಮೂಡಗದ್ದೆ ಸುದ್ದಿಗೋಷ್ಠಿಯಲ್ಲಿದ್ದರು.