ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಲೋಪಗಳನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಎದ್ದೇಳು ಕರ್ನಾಟಕ ಸಮಿತಿ ವತಿಯಿಂದ ನಗರದ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಸೋಮವಾರ ಜಾಥಾ ನಡೆಸಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಲೋಪಗಳನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಎದ್ದೇಳು ಕರ್ನಾಟಕ ಸಮಿತಿ ವತಿಯಿಂದ ನಗರದ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ಸೋಮವಾರ ಜಾಥಾ ನಡೆಸಿತು.

ಈ ಸಂದರ್ಭ ಸಾಹಿತಿ ಜೆ.ಸೋಮಣ್ಣ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಅಗತ್ಯವಿದ್ದರೂ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ. ಪ್ರಮುಖವಾಗಿ ಆಧಾರ್ ಕಾರ್ಡ್‌ನ್ನು ದಾಖಲೆಯಾಗಿ ಪರಿಗಣಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಅಲ್ಲದೇ, ಜಿಲ್ಲೆಯ ಆದಿವಾಸಿಗಳಲ್ಲಿ ಚುನಾವಣಾ ಆಯೋಗ ದಾಖಲೆಯನ್ನು ಕೇಳುತ್ತಿದೆ. ಆದರೆ, ಅವರಲ್ಲಿ ದಾಖಲೆಗಳು ಇಲ್ಲದ ಪರಿಣಾಮ ಮತದಾನದಿಂದ ವಂಚಿತರಾಗುವ ಸಾಧ್ಯತೆಯಿದೆ ಎಂದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ಬಿಹಾರದಲ್ಲಿ 65 ಲಕ್ಷ ನುಸುಳುಕೋರರಿದ್ದಾರೆ ಎಂಬ ಆರೋಪಕ್ಕೆ ಪುರಾವೆ ಇಲ್ಲ. ಕೇವಲ 2 ಜನ ಮಾತ್ರ ಪತ್ತೆಯಾಗಿದ್ದಾರೆ. ಎಸ್‌ಐಆರ್‌ನಿಂದ ಅಲೆಮಾರಿಗಳು, ವಲಸಿಗರು, ಹಿಂದುಳಿದವರು ಅತಂತ್ರರಾಗಲಿದ್ದಾರೆ. ಈ ಪ್ರಕ್ರಿಯೆಯ ಹಿಂದೆ ಪ್ರಜಾಸತ್ತಾತ್ಮಕ ಮೌಲ್ಯವನ್ನು ಕಸಿಯುವ ಷಡ್ಯಂತ್ರ ಅಡಗಿದ್ದು, ಈ ಪ್ರಕ್ರಿಯೆಗೆ ಜಿಲ್ಲಾಧಿಕಾರಿಯನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.

ಸಂವಿಧಾನ ಸಂರಕ್ಷಣಾ ಪಡೆಯ ಸುರೇಶ್, ಎಸ್‌ಡಿಪಿಐ ಪ್ರಮುಖರಾದ ಮನ್ಸೂರ್, ಹನೀಫ್, ಪ್ರಗತಿಪರ ಚಿಂತಕ ಅಲ್ಲಾರಂಡ ವಿಠಲ ನಂಜಪ್ಪ, ವಿವಿಧ ಸಂಘಟನೆಗಳ ಪ್ರಮುಖರಾದ ಪ್ರಕಾಶ್, ವೈ.ಎಂ. ಸುರೇಶ್, ಆದಿವಾಸಿ ಕೃಷಿ ಕಾರ್ಮಿಕರ ಸಂಘಟನೆಯ ಅಣ್ಣಪ್ಪ, ಲಕ್ಷ್ಮಣ್, ಸಮಿತಿಯ ಉಸ್ತುವಾರಿ ಹೇಮಂತ್ ಸೇರಿದಂತೆ ಇತರರು ಹಾಜರಿದ್ದರು.