ಮಡಿಕೇರಿ: ಹಿಂದೂ ಧರ್ಮದಲ್ಲಿ ಅತಿ ಹೆಚ್ಚು ದೇವರುರನ್ನು ಪೂಜಿಸಲಾಗುತ್ತದೆ‌. ಪ್ರಸ್ತುತ ಕಾಲಘಟ್ಟದಲ್ಲಿ ಇದೇ ಹಿನ್ನೆಲೆಯಲ್ಲಿ ಧರ್ಮದೊಳಗೆಯೇ ಭೇದ ಭಾವಗಳಿವೆ. ಆದರೆ ಪರಮಶ್ರೇಷ್ಠ ಆದಿ ಶಂಕರಾಚಾರ್ಯರು ಗಣಪತಿ, ಶಿವ, ದೇವಿ, ವಿಷ್ಣು ಸೇರಿದಂತೆ ಇತರ ಎಲ್ಲಾ ದೇವರುಗಳನ್ನೂ ಸ್ತುತಿಸುತ್ತಾ ಸ್ತೋತ್ರಗಳನ್ನು ರಚಿಸಿ ಮಾದರಿಯಾದವರು ಎಂದು ಸುಳ್ಯದ ಸಂಸ್ಕೃತ ಅಧ್ಯಾಪಕ ವೆಂಕಟೇಶ್ ಕುಮಾರ್ ಹೇಳಿದರು.

ಶಂಕರ ಜಯಂತಿ ಪ್ರಯುಕ್ತ ಮಡಿಕೇರಿಯ ಲಕ್ಷ್ಮೀನರಸಿಂಹ ಕಲ್ಯಾಣ‌ ಮಂಟಪದಲ್ಲಿ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕೊಡಗು-ಮಡಿಕೇರಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.ಆಧ್ಯಾತ್ಮವನ್ನು ಪ್ರಪಂಚಕ್ಕೆ ತೆರೆದಿಟ್ಟ ಶಂಕರಾಚಾರ್ಯರು 4೦ ವಯಸ್ಸನ್ನೂ ಪೂರೈಸಿಲ್ಲ. ಕಿರಿಯ ವಯಸ್ಸಿನಲ್ಲಿಯೇ ಅದ್ಭುತ ಸಾಧನೆ ಗೈದ ಅವರು ವ್ಯಕ್ತಿ ಮಾತ್ರವಲ್ಲ, ಒಂದು ಶಕ್ತಿ. ಭಾರತವಿಡೀ ಪ್ರಯಾಣಿಸಿ 4 ದಿಕ್ಕುಗಳಲ್ಲಿ 4 ಮಠಗಳನ್ನು ಸ್ಥಾಪಿಸಿ ಹಿಂದೂ ಧರ್ಮದ ಸಿದ್ದಾಂತ ಸಾರಿದವರು ಶಂಕರರು. ಇದು ನಮ್ಮ‌ ಸೌಭಾಗ್ಯ ಎಂದು ಹೇಳಿದರು.ವಿದ್ಯಾಭಿವೃದ್ಧಿ ನಿಧಿ ಅಧ್ಯಕ್ಷ ರಾಮಚಂದ್ರ ಮೂಗೂರು ಅವರು ಮಾತನಾಡಿ, ಆಧುನಿಕ‌ ಯುಗದಲ್ಲಿ ಐಷಾರಾಮಿ ಜೀವನ ನಡೆಸುವ ಆಸೆಗಳು ಎಲ್ಲರಲ್ಲೂ ಇವೆ. ಈ ನಿಟ್ಟಿನಲ್ಲಿ ಉತ್ತಮ ಸಂಪಾದನೆಯೂ ಅಗತ್ಯ. ಇದಕ್ಕಾಗಿ ಒತ್ತಡದಿಂದ ದುಡಿಯುವುದು ಸಹಜ. ವಿದ್ಯಾಭಿವೃದ್ಧಿ ನಿಧಿಯ ಗೌರವ ಕಾರ್ಯದರ್ಶಿ ಬಿ.ಕೆ ಜಗದೀಶ್ ಕುಮಾರ್ ಸ್ವಾಗತಿಸಿ, ನಿರ್ದೇಶಕ ಬಿ.ಕೆ ಅರುಣ್ ಕುಮಾರ್ ವಂದಿಸಿದರು. ನಿರ್ದೇಶಕರಾದ ಮಂಜುಳಾ‌ ರಾಮಕೃಷ್ಣ ಭಟ್, ಲಲಿತಾ ರಾಘವನ್ ಹಾಗೂ ಸವಿತಾ‌ ಭಟ್ ನಿರೂಪಿಸಿದರು.

ವಿದ್ಯಾಭಿವೃದ್ಧಿ ನಿಧಿಯ ಉಪಾಧ್ಯಕ್ಷರಾದ ಭರತೇಶ್ ಖಂಡಿಗೆ, ಖಜಾಂಚಿ ರವಿಶಂಕರ್, ನಿರ್ದೇಶಕರಾದ ರಾಜಶೇಖರ್ ಕೆ.ಎಸ್, ಶಿವಶಂಕರ್, ಅಶೋಕ್ ಹಾಗೂ ಇತರ ಪ್ರಮುಖರು ಹಾಜರಿದ್ದರು

ಬೆಳಗ್ಗೆ ವೈಭವ ತಂಡದಿಂದ ರುದ್ರಾಭಿಷೇಕ ಪೂರ್ವಕ ಶಿವಪೂಜೆ, ರುದ್ರ ಪಠಣ ನೆರವೇರಿತು. ಶೃತಿಲಯ ತಂಡದಿಂದ ಭಜನಾ ಕಾರ್ಯಕ್ರಮ ನೆರವೇರಿತು. ಪೂಜಾ ವಿಧಿವಿಧಾನಗಳನ್ನು ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅರ್ಚಕರಾದ ಸಂತೋಷ್ ಭಟ್ ನೆರವೇರಿಸಿದರು.

ಕಾರ್ಯಕ್ರಮದ ಪ್ರಯುಕ್ತ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ಸಮುದಾಯದ ಪ್ರಮುಖರಿಗೆ ಸನ್ಮಾನ ಮಾಡಲಾಯಿತು.


‘ಶಕ್ತಿ’ ಸಂಪಾದಕ ಜಿ.ಚಿದ್ವಿಲಾಸ್, ಮಡಿಕೇರಿ ಗಣೇಶ್ ಮೆಡಿಕಲ್ಸ್ ಮಾಲೀಕ ಪುರುಷೋತ್ತಮ್ ಡಿ.ಐ, ಭಾಗಮಂಡಲ-ತಲಕಾವೇರಿ ಹಾಗೂ ಓಂಕಾರೇಶ್ವರ ದೇವಾಲಯಗಳ ಕಾರ್ಯನಿರ್ವಹಣಾಧಿಕಾರಿಯಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದ ಸಂಪತ್ ಸರಳಾಯ, ಕುಶಾಲನಗರದ ಮಹಾಲಕ್ಷ್ಮಿ ಭಂಡಾರದ ಮಾಲೀಕ ರಾಜಶೇಖರ್ ಕೆ.ಎಸ್ ಅವರನ್ನು ಸನ್ಮಾನಿಸಲಾಯಿತು.