ಸಾರಾಂಶ
ಇಂದಿನ ಬೆಲೆ ಏರಿಕೆಯಿಂದ ಕಾರ್ಮಿಕರ ಬದುಕು ಅತ್ಯಂತ ಕಷ್ಟಕರವಾಗಿರುವ ದಿನಗಳಲ್ಲಿ ಕಡಿಮೆ ವೇತನ ಪಡೆದುಕೊಂಡು ಅತಿ ಹೆಚ್ಚು ಕೆಲಸ ಮಾಡಿಸಿಕೊಂಡು ಅಕ್ಷರ ದಾಸೋಹ ನೌಕರರನ್ನು ವಂಚಿಸುತ್ತಿದೆ ಎಂದು ಅಕ್ಷರ ದಾಸೋಹ ನೌಕರರ ರಾಜ್ಯ ಖಜಾಂಚಿ ಮಹದೇವಮ್ಮ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಅಕ್ಷರ ದಾಸೋಹ ನೌಕರರನ್ನು ಅತ್ಯಂತ ಕಡಿಮೆ ವೇತನದಲ್ಲಿ ದುಡಿಸಲಾಗುತ್ತಿದೆ. ಇಂದಿನ ಬೆಲೆ ಏರಿಕೆಯಿಂದ ಕಾರ್ಮಿಕರ ಬದುಕು ಅತ್ಯಂತ ಕಷ್ಟಕರವಾಗಿರುವ ದಿನಗಳಲ್ಲಿ ಕಡಿಮೆ ವೇತನ ಪಡೆದುಕೊಂಡು ಅತಿ ಹೆಚ್ಚು ಕೆಲಸ ಮಾಡಿಸಿಕೊಂಡು ಅಕ್ಷರ ದಾಸೋಹ ನೌಕರರನ್ನು ವಂಚಿಸುತ್ತಿದೆ ಎಂದು ಅಕ್ಷರ ದಾಸೋಹ ನೌಕರರ ರಾಜ್ಯ ಖಜಾಂಚಿ ಮಹದೇವಮ್ಮ ಆರೋಪಿಸಿದ್ದಾರೆ.ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಡೆದ ಅಕ್ಷರ ದಾಸೋಹ ನೌಕರರ ಮಡಿಕೇರಿ ತಾಲೂಕು ಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.
ಸರ್ಕಾರದ ನೀತಿಗಳು, ಹೊಸ ಕಾರ್ಮಿಕ ನೀತಿಯಿಂದಾಗಿ ಇಂದು ಕಾರ್ಮಿಕರು ತತ್ತರಿಸುತ್ತಿದ್ದಾರೆ. ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮುಖಾಂತರ ಕಾರ್ಮಿಕರಿಗೆ ದೊಡ್ಡ ಮಟ್ಟದ ಅನ್ಯಾಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ ಅವರು, ರಾಜ್ಯ ಸರ್ಕಾರ ಕೂಡ ಅಸಂಘಟಿತ ರಂಗದ ಬಗ್ಗೆ ಯಾವುದೇ ರೀತಿಯ ಚಿಂತನೆಯಿಲ್ಲದೆ ಆಡಳಿತ ನಡೆಸುತ್ತಿರವುದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸಿಐಟಿ ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಮಡಿಕೇರಿ ತಾಲೂಕು ಕಾರ್ಯದರ್ಶಿ ಎಚ್.ಟಿ.ಇಂದಿರಾ, ಖಜಾಂಚಿ ಎಚ್.ಎಸ್.ಪ್ರವೀಣಾ ಹಾಜರಿದ್ದರು. ಅಕ್ಷರ ದಾಸೋಹ ಮಡಿಕೇರಿ ತಾಲೂಕು ಅಧ್ಯಕ್ಷೆ ಸಿ.ಕೆ.ಲಲಿತ ಅಧ್ಯಕ್ಷತೆ ವಹಿಸಿದ್ದರು.
ಸಮಿತಿ ರಚನೆ: ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ನೌಕರರ ನೂತನ ತಾಲೂಕು ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಸಿ.ಕೆ.ಲಲಿತಾ, ಕಾರ್ಯದರ್ಶಿಯಾಗಿ ಎಚ್.ಡಿ.ಇಂದಿರಾ, ಖಜಾಂಚಿಯಾಗಿ ಎಚ್.ಎಸ್.ಪ್ರಮಿಳಾ ಆಯ್ಕೆಯಾದರು.ಸಹಾ ಕಾರ್ಯದರ್ಶಿಯಾಗಿ ನಗೀನ, ಕವಿತಾ, ಉಪಾಧ್ಯಕ್ಷರಾಗಿ ಲೀಲಾವತಿ, ಭವಾನಿ ಸೇರಿದಂತೆ 21 ಮಂದಿಯ ಸಮಿತಿ ರಚನೆ ಮಾಡಲಾಯಿತು.
ಡಿ.3ರ ದೆಹಲಿ ಚಲೋ ಕಾರ್ಯಕ್ರಮಕ್ಕೆ ಮಡಿಕೇರಿ ತಾಲೂಕಿನಿಂದ ಭಾಗವಹಿಸುವ ತೀರ್ಮಾನ ಕೈಗೊಳ್ಳಲಾಯಿತು.ಮಾಜಿ ಅಧ್ಯಕ್ಷೆ ಅನಿತಾ ಅವರಿಗೆ ಬೀಳ್ಕೊಡುಗೆ ನೀಡುವ ಮೂಲಕ ಗೌರವ ಸಲ್ಲಿಸಲಾಯಿತು.