ಮಡಿಕೇರಿ: 12ನೇ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮೇ 20ರಂದು ಕಡಂಗ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಮಾರ್ಗದರ್ಶನದಲ್ಲಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರು. ಮೇ 20ರಂದು ಬೆಳಗ್ಗೆ 8 ಗಂಟೆಗೆ ರಾಷ್ಟ್ರ ಧ್ವಜಾರೋಹಣವನ್ನು ಸಮ್ಮೇಳನದ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಕಸಾಪ ಧ್ವಜಾರೋಹಣವನ್ನು ಕೇಶವ್ ಕಾಮತ್ ಹಾಗೂ ಕನ್ನಡ ಧ್ವಜಾರೋಹಣವನ್ನು ಕಡ್ಲೆರ ತುಳಸಿ ಮೋಹನ್ ನೆರವೇರಿಸಲಿದ್ದಾರೆ. ಬಳಿಕ 11 ನೆನಪಿನ ಪ್ರವೇಶ ದ್ವಾರಗಳನ್ನು ಉದ್ಘಾಟಿಸಲಾಗುತ್ತದೆ ಎಂದು ತಿಳಿಸಿದರು.ಬೆಳಗ್ಗೆ 9 ಗಂಟೆಗೆ ವಿಜಯ ಪ್ರೌಢಶಾಲೆಯಿಂದ ಜಿಎಂಪಿ ಶಾಲಾ ಮೈದಾನದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಮಂಗಳ ವಾದ್ಯ, ಚೆಂಡೆವಾದ್ಯ, ಸ್ಥಬ್ದಚಿತ್ರಗಳು, ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ.

ಮುಖ್ಯ ದ್ವಾರ, ಪುಸ್ತಕ ಮಳಿಗೆ, ಸ್ತ್ರೀಶಕ್ತಿ ಮಳಿಗೆ ಉದ್ಘಾಟನೆಗೊಳ್ಳಲಿದೆ. ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ಎ.ಎಸ್. ಪೊನ್ನಣ್ಣ ಸಮಾರಂಭವನ್ನು ಉದ್ಘಾಟಿಸುವರು. ಸ್ಮರಣ ಸಂಚಿಕೆಯನ್ನು ಮಡಿಕೇರಿ ಶಾಸಕ ಮಂತರ್ ಗೌಡ ಹಾಗೂ ಪುಸ್ತಕವನ್ನು ಸಚಿವ ಭೋಸರಾಜ್ ಬಿಡುಗಡೆಗೊಳಿಸುವರು.

ಮುಖ್ಯ ಅತಿಥಿಗಳಾಗಿ ಸಂಸದ ಯದುವೀರ್ ಒಡೆಯರ್, ಎಂಎಲ್ಸಿ ಸುಜಾ ಕುಶಾಲಪ್ಪ, ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಕ್ರೀಡಾ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಅರುಣ್ ಮಾಚಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಡಂಗ ನೆನಪಿನಂಗಳದಲ್ಲಿ ಕೃತಿ ಬಿಡುಗಡೆಯೂ ನಡೆಯಲಿದೆ. ಮಧ್ಯಾಹ್ನ ಕನ್ನಡ ಗೀತ ಗಾಯನ, ಉದಯೋನ್ಮುಖ ಗಾಯಕರಿಂದ ಗೀತ ಗಾಯನ, ವಿಚಾರಗೋಷ್ಠಿ, ಕವಿಗೋಷ್ಠಿ, ಸಂಜೆ ಬಹಿರಂಗ ಅಧಿವೇಶನ, ಸಾಧಕರಿಗೆ ಸನ್ಮಾನ, ಸಮಾರೋಪ ಸಮಾರಂಭದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಟಿ.ಪಿ. ರಮೇಶ್ ವಿವರಿಸಿದರು.

ಕಸಾಪ ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷೆ ಕೌಶಿ ಕಾವೇರಮ್ಮ, ತಾಲೂಕು ಕಾರ್ಯದರ್ಶಿ ಲಕ್ಷು ಸೋಮಣ್ಣ, ಆಹಾರ ಮತ್ತು ವೇದಿಕೆ ಸಮಿತಿ ಸದಸ್ಯೆ ಅಚ್ಚಾಂಡಿರ ತಾರಾ ಉದಯ ಸುದ್ದಿಗೋಷ್ಠಿಯಲ್ಲಿದ್ದರು.