ಸಾರಾಂಶ
ಮರಗೋಡು-ಕಟ್ಟೆಮಾಡು ರಸ್ತೆ ಕಳೆದ ಹಲವು ವರ್ಷಗಳಿಂದ ತೀರಾ ಹದಗೆಟ್ಟಿದ್ದು, ಮಳೆಗಾಲ ಜೋರಾಗಿರುವುದರಿಂದ ವಾಹನ ಸವಾರರು, ದಾರಿ ಹೋಕರು, ವಿದ್ಯಾರ್ಥಿಗಳು ಓಡಾಡುವುದೇ ಕಷ್ಟಕರವಾದ ಹಿನ್ನೆಲೆ ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಸದಸ್ಯರು ಹಾಗೂ ಸ್ಥಳೀಯರು ಸೇರಿ ತಾವೇ ಹಣಕಾಸು ಹೊಂದಿಸಿ ಕಲ್ಲು, ಜಲ್ಲಿ, ಮಣ್ಣು ತಂದು ಶ್ರಮದಾನ ಮಾಡಿ ಗುಂಡಿಗಳನ್ನ ಮುಚ್ಚಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಇಲ್ಲಿನ ಮರಗೋಡು-ಕಟ್ಟೆಮಾಡು ರಸ್ತೆ ಕಳೆದ ಹಲವು ವರ್ಷಗಳಿಂದ ತೀರಾ ಹದಗೆಟ್ಟಿದ್ದು, ವಾಹನಗಳು ಸಂಚಾರ ಮಾಡಲು ಹರಸಾಹಸ ಮಾಡಬೇಕಾಗಿದೆ. ಈ ರಸ್ತೆ ಡಾಂಬರು ಕಾಣದೆ 15ಕ್ಕೂ ಅಧಿಕ ವರ್ಷಗಳೇ ಕಳೆದಿವೆ.ರಸ್ತೆ ಡಾಂಬರೀಕರಣ ಮಾಡುವಂತೆ ಸರ್ಕಾರ, ಜನಪ್ರತಿನಿಧಿಗಳನ್ನು ಬಹಳಷ್ಟು ಬಾರಿ ಮನವಿ ಮಾಡಿಕೊಂಡರೂ ಯಾವ ಪ್ರಯೋಜನಗಳು ಕೂಡ ಇದುವರೆಗೂ ಆಗದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಗಾಲ ಜೋರಾಗಿರುವುದರಿಂದ ವಾಹನ ಸವಾರರು, ದಾರಿ ಹೋಕರು, ವಿದ್ಯಾರ್ಥಿಗಳು ಓಡಾಡುವುದೇ ಕಷ್ಟಕರವಾದ ಹಿನ್ನೆಲೆ ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ಸದಸ್ಯರು ಹಾಗೂ ಸ್ಥಳೀಯರು ಸೇರಿ ತಾವೇ ಹಣಕಾಸು ಹೊಂದಿಸಿ ಕಲ್ಲು, ಜಲ್ಲಿ, ಮಣ್ಣು ತಂದು ಶ್ರಮದಾನ ಮಾಡಿ ಗುಂಡಿಗಳನ್ನ ಮುಚ್ಚಿದ್ದಾರೆ. ಸುಮಾರು ನಾಲ್ಕು ಗಂಟೆ ನಡೆದ ಶ್ರಮದಾನದಲ್ಲಿ ಧಾರಾಕಾರ ಮಳೆಯ ಮಧ್ಯೆಯೂ ಸ್ಥಳೀಯರು ಮತ್ತು ಅಕಾಡೆಮಿ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡಿದರು. ಗುಂಡಿ ಮುಚ್ಚುವುದರ ಜೊತೆಗೆ ಅಲ್ಲಲ್ಲಿ ಮಳೆ ನೀರು ಹರಿದುಹೋಗಲು ಚರಂಡಿಗಳನ್ನು ಕೂಡ ತೆಗೆಯಲಾಯಿತು.ಊರಿನ ಸಮಸ್ಯೆಗಳನ್ನು ಮುಂದೆ ಬಂದು ಬಗೆ ಹರಿಸಬೇಕಾಗಿದ್ದ ಸರ್ಕಾರಿ ಇಲಾಖೆಗಳು ಗಾಢ ನಿದ್ದೆಗೆ ಜಾರಿವೆ. ಹಾಗಾಗಿ ನಾವೇ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಲ್ಪಿಸಲು ಮುಂದಾಗುವ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದ್ದೇವೆ ಎಂದು ಯುವಕರು ಹೇಳಿದರು.
ಇನ್ನಾದರೂ ರಸ್ತೆ ದುರಸ್ತಿ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಲಿ ಎಂದರು.ಯುವಕರ ಶ್ರಮದಾನ ಸ್ಥಳೀಯ ಊರಿನವರ ಮೆಚ್ಚುಗೆಗೆ ಪಾತ್ರವಾಗಿದೆ.