ಸಾರಾಂಶ
ತಾಲೂಕು ಕಚೇರಿಯಲ್ಲಿ ಮಡಿವಾಳ ಮಾಚಿ ದೇವ ಜಯಂತಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಬಸವಣ್ಣನವರು ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸುವಲ್ಲಿ ಮಡಿವಾಳ ಮಾಚಿದೇವರ ಪಾತ್ರ ಪ್ರಮುಖವಾಗಿದೆ ಎಂದು ತಾಲೂಕು ಮಡಿವಾಳ ಮಾಚಿದೇವ ಸಂಘದ ಕಾರ್ಯದರ್ಶಿ ನಿರಂಜನ್ ಹೇಳಿದರು.
ಶನಿವಾರ ತಾಲೂಕು ಆಡಳಿತ ಸೌಧದ ನ್ಯಾಯಾಲಯ ಸಭಾಂಗಣದಲ್ಲಿ ಶನಿವಾರನಡೆದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಉಪನ್ಯಾಸ ನೀಡಿದರು. ಶೂದ್ರರಿಗೆ ಶಿಕ್ಷಣ ನಿಷೇಧದ ಕಾಲದಲ್ಲೂ ಮಾಚಿದೇವರು ಮಲ್ಲಿಕಾರ್ಜುನ ಸ್ವಾಮಿಯಿಂದ ಶಿಕ್ಷಣ ಕಲಿತವರು. ಹುಟ್ಟಿನಿಂದಲೂ ಅಚಲ ಕಾಯಕ ನಿಷ್ಠೆ ಹೊಂದಿದ್ದರು. ಕಾಯಕವೇ ಭಕ್ತಿ, ಜೀವನದ ಉಸಿರು ಎಂದು ಭಾವಿಸಿದ್ದರು. ಅರಸುತನ ಮೇಲಲ್ಲ, ಅಗಸತನ ಕೀಳಲಲ್ಲ ಎಂಬುದನ್ನು ಜಗತ್ತಿಗೆ ಸಾರಿದರು. 12ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಅಸ್ಪೃಶ್ಯತೆ, ಜಾತಿಯತೆ, ಸಾಮಾಜಿಕ ಅಸಮಾನತೆ, ಮಹಿಳೆಯರಿಗೆ ಸಮಾನಹಕ್ಕು ಒದಗಿಸುವಲ್ಲಿ ಬಸವಣ್ಣನವರ ಜತೆ ಸೇರಿ ಸಾಮಾಜಿಕ ಕ್ರಾಂತಿ ಆರಂಭಿಸಿದರು. ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದಡಿ ಸಾಮಾಜಿಕ ಸಮಾನತೆ ಸ್ಥಾಪಿಸಲು ಶ್ರಮಿಸಿದರು.ಸ್ವಂತಹ 354 ವಚನಗಳನ್ನು ರಚಿಸಿರುವ ಮಡಿವಾಳ ಮಾಚಿದೇವ ವಚನ ಸಾಹಿತ್ಯದ ರಕ್ಷಣೆ ಹಾಗೂ ಶರಣರ ರಕ್ಷಣೆಗೆ ಮುಂದಾಗಿದ್ದರು ಎಂದರು.ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ ಮಾತನಾಡಿ, ಶರಣರಲ್ಲಿ ಪ್ರಮುಖಸ್ಥಾನ ಹೊಂದಿರುವ ಮಡಿವಾಳ ಮಾಚಿದೇವ ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಸಾಮಾಜಿಕ ಕ್ರಾಂತಿ ಆರಂಭಿಸಿದರು. ಕಾಯಕದಲ್ಲಿ ನಿಷ್ಠೆ ಹೊಂದಿ ಸ್ವಾಭಿಮಾನ, ಆತ್ಮಸ್ಥೈರ್ಯ, ಪ್ರೀತಿ, ಸೌಹಾರ್ದತೆ ಬಗ್ಗೆ ಕಳಕಳಿ ಹೊಂದಿದ್ದರು ಎಂದರು.ತಾಲೂಕು ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಬಸವರಾಜ್ ಮಾತನಾಡಿ, ಸರ್ಕಾರ ಮಡಿವಾಳ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದರು. ಇದಕ್ಕೆ ಹೆಚ್ಚಿನ ಅನುದಾನ ನೀಡಬೇಕು. ತಾಲೂಕಿನ ವ್ಯಾಪ್ತಿಯಲ್ಲಿ ಮಡಿವಾಳ ಸಮುದಾಯದ 100ಕ್ಕೂ ಹೆಚ್ಚು ಕುಟುಂಬಗಳಿದ್ದು ಸಮುದಾಯದ ಅನುಕೂಲಕ್ಕೆ ಸಮುದಾಯ ಭವನ ನಿರ್ಮಾಣ ಮಾಡಲು 1ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡಿಕೊಡುವಂತೆ ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಪಟ್ಟಣಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿ. ಬಸವಣ್ಣ, ಮಡಿವಾಳ ಮಾಚಿದೇವ ಅವರು ಅನುಭವಮಂಟಪ ಸ್ಥಾಪಿಸಿ ಅಂದಿನ ಸಮಾಜದಲ್ಲಿದ್ದ ಜಾತಿಯತೆ, ಮೇಲು,ಕೀಳು ಎಂಬ ಸಾಮಾಜಿಕ ಅನಿಷ್ಠಗಳನ್ನು ತೊಡೆದುಹಾಕಲು ಶ್ರಮಿಸಿದರು. ಮಹಾನ್ ಶರಣರ ಜಯಂತಿಯನ್ನು ಶಾಲಾ, ಕಾಲೇಜುಗಳಲ್ಲಿ ಆಚರಿಸುವ ಮೂಲಕ ಅವರ ಚಿಂತನೆಗಳನ್ನು ಯುವಜನಾಂಗಕ್ಕೆ ತಿಳಿಸುವ ಕಾರ್ಯ ಮಾಡಬೇಕು. ಮಡಿವಾಳ ಸಮಾಜದವರಿಗೆ ಸಮುದಾಯ ಭವನಕ್ಕೆ ನಿವೇಶನ ಮಂಜೂರು ಮಾಡುವಂತೆ ಶಾಸಕರಿಗೆ ಮನವಿ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮಡಿವಾಳ ಸಂಘದ ಕಾರ್ಯದರ್ಶಿ ನಿರಂಜನ್ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಮಡಿವಾಳ ಮಾಚಿದೇವ ಸಂಘದ ಉಪಾಧ್ಯಕ್ಷ ಉಮೇಶ್, ಪರಿಶಿಷ್ಟ ಪಂಗಡದ ಮುಖಂಡರಾದ ಮಂಜುನಾಥ್, ಶ್ರೀನಿವಾಸ್, ಪರಿಶಿಷ್ಟಜಾತಿ ಮುಖಂಡ ಡಿ.ರಾಮು, ತಾಲೂಕು ಕಚೇರಿ ಸಿಬ್ಬಂದಿ ಐಶ್ವರ್ಯ ಪಾಲ್ಗೊಂಡಿದ್ದರು. .