ಸಾರಾಂಶ
12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಮಡಿವಾಳ ಮಾಚಿದೇವರು ಸತ್ಯ, ಶುದ್ಧ ಕಾಯಕಕ್ಕೆ ಮಹತ್ವ ನೀಡಿ ಬಸವಣ್ಣವರ ಜೊತೆ ಸೇರಿಕೊಂಡು ಅಂದಿನ ದಿನಗಳಲ್ಲಿ ಸಮಾಜ ಸುಧಾರಣೆ ಮಾಡಿದರು ಎಂದು ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಶಶಿಧರ ಶಾಸ್ತ್ರಿ ಹಿರೇಮಠ ಹೇಳಿದರು.
ನರಗುಂದ: 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಮಡಿವಾಳ ಮಾಚಿದೇವರು ಸತ್ಯ, ಶುದ್ಧ ಕಾಯಕಕ್ಕೆ ಮಹತ್ವ ನೀಡಿ ಬಸವಣ್ಣವರ ಜೊತೆ ಸೇರಿಕೊಂಡು ಅಂದಿನ ದಿನಗಳಲ್ಲಿ ಸಮಾಜ ಸುಧಾರಣೆ ಮಾಡಿದರು ಎಂದು ಪುಟ್ಟರಾಜ ಗವಾಯಿಗಳವರ ಶಿಷ್ಯರಾದ ಶಶಿಧರ ಶಾಸ್ತ್ರಿ ಹಿರೇಮಠ ಹೇಳಿದರು.
ಅವರು ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಶಾಖಾ ಮಠದ ಗದ್ದುಗೆ ಶಿಲಾ ಮಂಟಪ ಮತ್ತು ಗೋಪುರ ಲೋಕಾರ್ಪಣೆ ನಿಮಿತ್ತ ನಡೆದ 17ನೇ ದಿನದ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣನವರ ನ್ಯಾಯ, ನಿಷ್ಠುರತೆ, ಸ್ವಜಾತೀಯರ ಕಣ್ಣು ಕೆಂಪಾಗಿಸಿತು. ನಿತ್ಯ ಜೀವನದ ಸತ್ಯ ಘಟನೆಗಳನ್ನು ಆದರ್ಶವಾಗಿರಿಸಿಕೊಂಡ ಬಸವಣ್ಣನವರು, ಸಮಾಜದ ಓರೆ ಕೋರೆಗಳನ್ನು ತಮ್ಮ ಮೊನಚಾದ ವಚನಗಳಿಂದ ತಿಳಿಸಲು ಆರಂಭಿಸಿದರು. ಪರಿಸರದಲ್ಲಿ ಜೀವಿಸುವ ಪ್ರಾಣಿ ಪಕ್ಷಿಗಳಲ್ಲಿ ಮೇಲು-ಕೀಳು ಧೋರಣೆಯನ್ನು ಖಂಡಿಸಿದರು. ಕಾಗೆ ಚಾಂಡಾಲ ಪಕ್ಷಿ ಎಂದವರಿಗೆ ಕಾಗೆ ದಾಸೋಹದ ಪಕ್ಷಿ ಎಂಬುದನ್ನು ತೋರಿಸಿ ಪ್ರಾಣಿಗಳಲ್ಲಿಯ ಸಂಸ್ಕಾರವನ್ನು ತಿಳಿಸಿಕೊಟ್ಟವರು ಬಸವಣ್ಣನವರು. ಕಲ್ಲು-ಮಣ್ಣು, ಗಿಡ-ಮರಗಳು ದೇವರಲ್ಲ ಎಂಬುದನ್ನು ಅರಿತ ಶರಣರು, ಕಲ್ಯಾಣದಲ್ಲಿ ಕಾಯಕದ ಶರಣರ ಪೂಜೆ ನಡೆಯುತ್ತಿರುವದನ್ನು ಕೇಳಿದ ಮಡಿವಾಳ ಮಾಚಿದೇವರು ಕಲ್ಯಾಣದ ಹಾದಿ ಹಿಡಿದರು. ಸತ್ಯ ಶುದ್ಧ ಕಾಯಕ ಮಾಡುವ ಶರಣರ, ಲಿಂಗಧಾರಿಗಳ ಬಟ್ಟೆಗಳನ್ನು ಮಾತ್ರ ಮಡಿ ಮಾಡುವ ಕಾಯಕ ಸಂದೇಶದ ಘೋಷಣೆಯನ್ನು ಕೈಯಲ್ಲಿ ಘಂಟೆ ಹಿಡಿದು ಕೂಗುತ್ತ ರಾಜ ಬೀದಿಯಲ್ಲಿ ಬರುವ ವೀರಘಂಟಿ ಮಡಿವಾಳ ಮಾಚಿದೇವ ನಮಗೆ ಆದರ್ಶ ಎಂದರು. ಜೀವನದಲ್ಲಿ ಬರುವ ಕೋಟಿ ಕೋಟಿ ಸುಖ-ದುಃಖಗಳಿಗೆ ಅನ್ಯರ ಹೊಣೆ ಮಾಡದೆ, ನಾವು ಮಾಡುವ ಕಾಯಕದ ಪ್ರತಿಫಲವೆಂದು ನಂಬಿ ಸದಾಕಾಲ ಸರ್ವರಿಗೂ ಒಳಿತನ್ನು ಬಯಸುವುದೆ ನಿಜವಾದ ಮಾನವೀಯತೆ ಎಂದರು. ಕಾಯಕ-ದಾಸೋಹಗಳಲ್ಲಿ ನಿರತರಾದ ಶರಣರು ಒಂದು ಕಡೆ ಆದರೆ, ನೂಲಿಯ ಚಂದಯ್ಯ, ಒಕ್ಕಲದ ಮುದ್ದಣ್ಣ, ಸಂಬೋಳಿ ನಾಗಿದೇವ ಹೀಗೆ ದಿನೇ ದಿನೇ ಕಲ್ಯಾಣಕ್ಕೆ ಬರುವವವರ ಸಂಖ್ಯೆ ಹೆಚ್ಚಾಗ ತೊಡಗಿತು ಎಂದರು.ಕಾರ್ಯಕ್ರಮದಲ್ಲಿ ರಾಮದುರ್ಗದ ಕಟಕೊಳದ ಕುಮಾರೇಶ್ವರ ವಿರಕ್ತಮಠದ ಸಚ್ಚಿದಾನಂದ ಶ್ರೀಗಳು ಮಾತನಾಡಿ, ಶೂನ್ಯ ಸಿಂಹಾಸನಕ್ಕೆ ಅಲ್ಲಮಪ್ರಭುಗಳನ್ನು ಅಧ್ಯಕ್ಷರನ್ನಾಗಿಸಿ ಸಾಮಾಜಿಕ ವಿಚಾರಧಾರೆ, ವೈಚಾರಿಕತೆಯನ್ನು ಜಗತ್ತಿಗೆ ಮೊದಲು ತಿಳಿಸಿ ಕೊಟ್ಟವರೆ ಬಸವಾದಿ ಶರಣರು ಎಂದರು.
ಈ ಸಂದರ್ಭದಲ್ಲಿ ಶಾಂತಲಿಂಗ ಶ್ರೀಗಳು, ಪ್ರಕಾಶಗೌಡ ತಿರಕನಗೌಡ್ರ, ವೀರಯ್ಯ ದೊಡ್ಡಮನಿ, ಶೆಲ್ಲಿಕೇರಿ, ನಾಗನಗೌಡ ತಿಮ್ಮನಗೌಡ್ರ, ದ್ಯಾಮಣ್ಣ ಕಾಡಪ್ಪನವರ, ನಾಗಲೋಟಿಮಠ, ಲಾಲಸಾಬ ಅರಗಂಜಿ, ಹನಮಂತ ಕಾಡಪ್ಪವನರ, ಆರ್.ಐ. ನದಾಫ, ಪ್ರಾಚಾರ್ಯ ಬಿ.ಆರ್. ಸಾಲಿಮಠ ಸೇರಿದಂತೆ ಮುಂತಾದವರು ಇದ್ದರು.