ಹರಿಪಾದಕ್ಕೈದ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣೆಯೊಂದಿಗೆ ಹಾಗೂ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಕಲ್ಕೂರ ಪ್ರತಿಷ್ಠಾನ ಮಂಗಳೂರು ಆಯೋಜಿಸಿದ ‘ಮಧ್ವನವಮಿ’ ಕಾರ್ಯಕ್ರಮ

ಮಂಗಳೂರು: ಆಚಾರ್ಯ ಮಧ್ವರ ದ್ವೈತ ಸಿದ್ಧಾಂತ ಮತ್ತು ಚಿಂತನೆಗಳು ದೇವರು ಹಾಗೂ ಜೀವದ ತಾರತಮ್ಯವನ್ನು ಆಧರಿಸಿವೆ. ವಸ್ತು ಮತ್ತು ಅದರ ಗುಣಲಕ್ಷಣಗಳ ನಡುವಿನ ವ್ಯತ್ಯಾಸವನ್ನು ತಿಳಿಸುವುದಲ್ಲದೆ ವಾಸ್ತವಿಕ ಜಗತ್ತು ಹಾಗೂ ಆತ್ಮದ ಮುಕ್ತಿಗಾಗಿ ಭಕ್ತಿಯನ್ನು ಒತ್ತಿ ಹೇಳುತ್ತದೆ ಎಂದು ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದರು. ಹರಿಪಾದಕ್ಕೈದ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣೆಯೊಂದಿಗೆ ಹಾಗೂ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಕಲ್ಕೂರ ಪ್ರತಿಷ್ಠಾನ ಮಂಗಳೂರು ಆಯೋಜಿಸಿದ ‘ಮಧ್ವನವಮಿ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.ಮಧ್ವಾಚಾರ್ಯರ ವಿಚಾರಗಳು ವೇದ ಮತ್ತು ಪುರಾಣಗಳ ಆಧಾರದ ಮೇಲೆ ಸ್ಥಾಪಿತವಾಗಿವೆ. ಪ್ರತ್ಯಕ್ಷ, ಅನುಮಾನ ಮತ್ತು ಆಗಮ ಮಾರ್ಗಗಳ ಮೂಲಕ ಅವರು ವಸ್ತುಸ್ಥಿತಿಯನ್ನು ವಿಶ್ಲೇಷಿಸಿದ್ದಾರೆ. ಅವರು ರಚಿಸಿರುವ ಸುಮಾರು 39ರಷ್ಟು ಗ್ರಂಥಗಳನ್ನು ಸರ್ವಮೂಲ ಗ್ರಂಥಗಳೆಂದು ಕರೆಯಲ್ಪಟ್ಟಿದೆ ಎಂದರು.ನಗರದ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯ ‘ಮಂಜುಪ್ರಾಸಾದ’ದ ವಾದಿರಾಜ ಮಂಟಪದ ಶ್ರೀ ವಿಶ್ವೇಶತೀರ್ಥ ವೇದಿಕೆಯಲ್ಲಿ ಮಧ್ವನವಮಿ ಆಚರಿಸಲಾಯಿತು.ಯಕ್ಷಗಾನ ಅರ್ಥಧಾರಿ, ಲೇಖಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ಆಚಾರ್ಯ ಶಂಕರರ ಅದ್ವೈತ ಸಿದ್ಧಾಂತಕ್ಕೆ ಭಿನ್ನವಾದ ತತ್ವವನ್ನು ಎತ್ತಿ ಹಿಡಿದಿರುವ ಮಧ್ವಾಚಾರ್ಯರು ಜಗತ್ತು ನಮ್ಮ ಅನುಭವಕ್ಕೆ ಬರುವುದರಿಂದ ಅದು ಮಿಥ್ಯೆಯಲ್ಲ ಎಂದು ಪ್ರತಿಪಾದಿಸಿದವರು.

ಈ ಸಂದರ್ಭ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀಕಾಂತ ಆಚಾರ್ಯ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ವೇ.ಮೂ. ಡಾ.ಪ್ರಭಾಕರ ಅಡಿಗ ಕದ್ರಿ, ಯುಗಪುರುಷ ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಪೂರ್ಣಿಮಾ ರಾವ್ ಪೇಜಾವರ, ಶಶಿಪ್ರಭಾ ಐತಾಳ್ ಕಾವೂರು, ನಿತ್ಯಾನಂದ ಕಾರಂತ ಇದ್ದರು.ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿ, ಆಶಯ ಭಾಷಣ ಮಾಡುತ್ತಾ ಮಧ್ವಾಚಾರ್ಯರು ವಿಶ್ವ ಮಾನ್ಯರು, ಭಕ್ತಿ ಮಾರ್ಗ ಹಾಗೂ ಜ್ಞಾನ ಮಾರ್ಗದ ಚಿಂತನೆಯನ್ನು ಪ್ರಸ್ತುತ ಕಾಲಮಾನಕ್ಕೆ ಹೊಂದುವಂತೆ ನಿರೂಪಿಸಿದವರು ಎಂದರು. ಸುಧಾಕರ ರಾವ್ ಪೇಜಾವರ ನಿರೂಪಿಸಿದರು.