ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮದುವೆಯಾಗಿ ತಿಂಗಳಾಗಿಲ್ಲ. ಅಷ್ಟರಲ್ಲೇ ಪತ್ನಿ ಕೈ ಕೊಟ್ಟು ಹೋಗಿದ್ದಾಳೆ. ಮಾತ್ರವಲ್ಲ ವಿವಾಹ ಮಾಡಿಸಿಕೊಟ್ಟ ಬ್ರೋಕರ್ ಕೂಡ ವರನಿಂದ ಪಡೆದಿದ್ದು ₹4 ಲಕ್ಷ ಹಣವನ್ನೂ ಪಡೆದು ಪರಾರಿಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆದಿದೆ. ಮೋಸಹೋದ ಮೇಲೆಯೇ ಪತ್ನಿಗೆ ಈಗಾಗಲೇ ಎರಡು ಮದುವೆಯಾಗಿರುವ ವಿಚಾರವೂ ಬೆಳಕಿಗೆ ಬಂದಿದೆ. ಹೀಗಾಗಿ ಮೋಸ ಹೋದ ವರ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.ಮುಧೋಳದ ಸೋಮಶೇಖರ ಮೋಸಹೋದ ವ್ಯಕ್ತಿ. ಈಗ ಈತನನ್ನು ವಿವಾಹವಾಗಿದ್ದ ಶಿವಮೊಗ್ಗ ಮೂಲದ ಮಂಜುಳಾ ಸೇರಿದಂತೆ ಏಳು ಜನರ ವಿರುದ್ಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಏನಿದು ಪ್ರಕರಣ?:ಜಿಲ್ಲೆಯ ಮುಧೋಳದ ಸೋಮಶೇಖರ್‌ಗೆ ಬಹಳ ದಿನಗಳಿಂದ ಮದುವೆಯಾಗಿರಲಿಲ್ಲ. ಹೀಗಾಗಿ ಅವರು ಹೆಣ್ಣಿಗಾಗಿ ಅಲೆದಾಡುತ್ತಿದ್ದರು. ಆದ್ದರಿಂದ ಸೋಮಶೇಖರನನ್ನು ಟಾರ್ಗೆಟ್ ಮಾಡಿದ ಬ್ರೋಕರ್‌ಗಳು, ಹೆಣ್ಣು ಕೊಡಿಸ್ತೀವಿ ಅಂತ ಹೇಳಿ ₹4 ಲಕ್ಷ ಕೊಡಬೇಕೆಂದು ಬೇಡಿಕೆ ಇಟ್ಟಿದೆ. ಹೆಣ್ಣು ಸಿಗದೇ ಕೊನೆಗೆ ಮದುವೆಗೆ ಒಪ್ಪಿಕೊಂಡಿದ್ದ ಸೋಮಶೇಖರ್, ಬಾಗಲಕೋಟೆ ಜಿಲ್ಲೆಯ ಮುಧೋಳದ ಕಾಳಿಕಾದೇವಿ ದೇಗುಲದಲ್ಲಿ ವರ್ಷದ ಹಿಂದೆ ಶಿವಮೊಗ್ಗ ಜಿಲ್ಲೆಯ ಮಂಜುಳಾ ಎಂಬಾಕೆಯೊಂದಿಗೆ ಮದುವೆ ನಡೆದಿತ್ತು.
ಮದುವೆ ದಿನವೇ ಪೂರ್ಣ ₹4 ಲಕ್ಷ ಹಣ ಪಡೆದಿದ್ದ ಗ್ಯಾಂಗ್ ನಂತರದಲ್ಲಿ ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಮಂಜುಳಾ ಪರಾರಿಯಾಗಿದ್ದಾಳೆ. ಪತ್ನಿ ಬಗ್ಗೆ ವಿಚಾರಿಸಲು ಹೋದ ವೇಳೆ ಈಗಾಗಲೇ ಮಂಜುಳಾಗೆ ಎರಡು ಮದುವೆಯಾದ ಬಗ್ಗೆ ಸುಳಿವು ಸಿಕ್ಕಿದೆ. ಹಣ ಹೊಡೆಯಲು ಮದುವೆಯಾದ ಮಹಿಳೆಯನ್ನೇ ಶಿವಮೊಗ್ಗದಿಂದ ಮುಧೋಳಕ್ಕೆ ಕರೆತಂದಿದ್ದ ಬ್ರೋಕರ್‌ಗಳು ಸೋಮಶೇಖರ್ ಜೊತೆಯಲ್ಲಿ ಮದುವೆ ಮಾಡಿಸಿದೆ.ಇದರಿಂದ ಬೇಸತ್ತ ಸೋಮಶೇಖರ್ ಬ್ರೋಕರ್‌ಗಳಿಗೆ ತಾನು ನೀಡಿದ ₹4 ಲಕ್ಷ ಹಣ ಮರಳಿಸುವಂತೆ ಕೇಳಿಕೊಂಡಿದ್ದಾನೆ. ಆದರೆ, ಈತನ ಮನವಿಗೆ ಸ್ಪಂದನೆ ಸಿಗದೇ ಹೋದಾಗ, ಕೊನೆಗೆ ಹಣ ಬಾರದೇ ಇದ್ದಾಗ ಮುಧೋಳ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ಸೋಮಶೇಖರ್ ದೂರು ದಾಖಲಿಸಿದ್ದಾರೆ.
ಆರೋಪಿ ಸತ್ಯಪ್ಪ ಮತ್ತು ಮಂಜುಳಾ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಮುಧೋಳ ಠಾಣೆ ಪೊಲೀಸರು ಮುಂದಾಗಿದ್ದಾರೆ. ಮದುವೆ ಮಾಡಿಸಿ ಹಣ ಹೊಡೆಯಲು ಇದೊಂದು ದೊಡ್ಡ ಜಾಲವೇ ಇದೆ. ಈ ಗ್ಯಾಂಗ್ ಎಲ್ಲಿ ಕಾರ್ಯಪ್ರವೃತ್ತಿಯಾಗಿದೆ ಅಂತ ಹುಡುಕಿ ತನಿಖೆ ಮಾಡುತ್ತಿದ್ದೇವೆ. ಈ ಜಾಲದಲ್ಲಿ ಆರೋಪಿಗಳು ಬೆಳಗಾವಿ, ರಾಮದುರ್ಗ, ಶಿವಮೊಗ್ಗ, ಧಾರವಾಡ ಮೂಲದವರಿದ್ದಾರೆ. ಅವರನ್ನ ಬಂಧಿಸಿ ವಿಚಾರಣೆಗೆ ಒಳಪಡಿಸುವ ಕೆಲಸ ಮಾಡುತ್ತೇವೆ. ಇವರಿಂದ ಈ ಹಿಂದೆಯೂ ಪ್ರಕರಣ ನಡೆದಿದೆ. ಎಲ್ಲವನ್ನ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.ಎಸ್.ಪಿ.ಅಮರನಾಥ ರೆಡ್ಡಿ, ಬಾಗಲಕೋಟೆ