ಸಾರಾಂಶ
ಈ ಶಾಲೆಯಲ್ಲಿ ಕೊರಗ ಸಮುದಾಯದ ವಿದ್ಯಾರ್ಥಿಯೊಬ್ಬ ಶೇ.86.4 ಅಂಕಗಳ ಸಾಧನೆ ತೋರಿದ್ದು ಕೂಡ ಇದೇ ಪ್ರಥಮ.
ಕನ್ನಡಪ್ರಭ ವಾರ್ತೆ ಮಂಗಳೂರು
ಆರ್ಥಿಕ, ಸಾಮಾಜಿಕವಾಗಿ ತೀರ ಹಿಂದುಳಿದ ಕೊರಗ ಸಮುದಾಯದ ವಿದ್ಯಾರ್ಥಿ ಸೋಮನಾಥ್ ಈ ಬಾರಿ ಶೇ.86.4 ಅಂಕ ಗಳಿಸುವುದರೊಂದಿಗೆ ಸುರತ್ಕಲ್ ಸಮೀಪದ ಮಧ್ಯ ವಾಲ್ಮೀಕಿ ವಸತಿ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲದೆ, ಈ ಶಾಲೆ ಶೇ.100 ಫಲಿತಾಂಶ ಪಡೆದು ದಾಖಲೆ ನಿರ್ಮಾಣ ಮಾಡಿದೆ.ಮಧ್ಯ ವಸತಿ ಶಾಲೆಯು 2004-05ನೇ ಸಾಲಿನಲ್ಲಿ ಪ್ರೌಢಶಾಲೆಯ ಮಾನ್ಯತೆ ಪಡೆದ ಬಳಿಕ ಇದೇ ಮೊದಲ ಬಾರಿಗೆ ಎಸೆಸೆಲ್ಸಿಯಲ್ಲಿ ನೂರು ಪ್ರತಿಶತ ಫಲಿತಾಂಶದ ದಾಖಲೆ ನಿರ್ಮಾಣ ಮಾಡಿರುವುದು ವಿಶೇಷ. ಈ ಶಾಲೆಯಲ್ಲಿ ಕೊರಗ ಸಮುದಾಯದ ವಿದ್ಯಾರ್ಥಿಯೊಬ್ಬ ಶೇ.86.4 ಅಂಕಗಳ ಸಾಧನೆ ತೋರಿದ್ದು ಕೂಡ ಇದೇ ಪ್ರಥಮ.
ಕಳೆದ ವರ್ಷ ಶಾಲೆಯ ವಿದ್ಯಾರ್ಥಿನಿ ಸುಶ್ಮಿತಾ 495 ಅಂಕ ಪಡೆದು ಕಳೆದ ವರ್ಷದವರೆಗಿನ ಅತ್ಯಧಿಕ ಅಂಕ ಗಳಿಕೆಯ ಸಾಧನೆ ತೋರಿದ್ದರು. ಈ ಬಾರಿ ಕೊರಗ ಸಮುದಾಯದ ಸೋಮನಾಥ್ ಆ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಸೋಮನಾಥ್ 540 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.ಎಲ್ಲರೂ ಪಾಸ್:
ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಪಂಗಡದ ಮಕ್ಕಳ ಶಿಕ್ಷಣಕ್ಕಾಗಿಯೇ 1999ರಲ್ಲಿ ಆರಂಭಗೊಂಡ ಮಧ್ಯ ವಸತಿ ಶಾಲೆಯಲ್ಲಿ 2022-23ನೇ ಸಾಲಿನಲ್ಲಿ ಒಟ್ಟು 19 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆದಿದ್ದರು. ಅವರಲ್ಲಿ ನಾಲ್ಕು ಮಂದಿ ಕೊರಗ ಸಮುದಾಯ ಮಕ್ಕಳು. 19 ಮಂದಿಯಲ್ಲಿ ಇಬ್ಬರು 500ಕ್ಕಿಂತ ಅಧಿಕ ಅಂಕ ಗಳಿಸಿದ್ದರೆ, 9 ಮಂದಿ ಪ್ರಥಮ ಶ್ರೇಣಿ, ಐವರು ದ್ವಿತೀಯ ಶ್ರೇಣಿ ಹಾಗೂ ಮೂವರು ಉತ್ತೀರ್ಣರಾಗಿದ್ದಾರೆ. ಈ ಫಲಿತಾಂಶಕ್ಕೆ ಶಾಲೆಯ ಶಿಕ್ಷಕರ ಕೊಡುಗೆಯೂ ಅಪಾರ.ಅವನತಿಯ ಅಂಚಿನಲ್ಲಿರುವ ಕೊರಗ ಸಮುದಾಯದ ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ವಸತಿಯುತ ಶಾಲೆಯನ್ನು ನಿರ್ಮಾಣ ಮಾಡಲಾಗಿತ್ತು. ಕೊರಗ ಸಮುದಾಯದ ಮಕ್ಕಳ ದಾಖಲಾತಿ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಇತರ ಪರಿಶಿಷ್ಟ ಪಂಗಡ, ಪರಿಶಿಷ್ಟ ವರ್ಗ ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೂ ಈ ವಸತಿ ಶಾಲೆಯಲ್ಲಿ ಉಚಿತ ಶಿಕ್ಷಣ ಒದಗಿಸಲಾಗುತ್ತಿದೆ. ಪ್ರಸ್ತುತ 10ನೇ ತರಗತಿವರೆಗೆ ಒಟ್ಟು 183 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಇದೇ ಮೊದಲ ಬಾರಿ ಶಾಲೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ. 100 ಫಲಿತಾಂಶ ಬಂದಿದೆ. ಶಿಕ್ಷಕರು ಸಂಜೆ ಮತ್ತು ಬೆಳಗ್ಗಿನ ಸಮಯ ಹೆಚ್ಚಿನ ಒತ್ತು ನೀಡಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿದ್ದರು. ಅಲ್ಲದೆ ಅಧಿಕಾರಿಗಳ ಮುತುವರ್ಜಿಯಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು.- ನಿಂಗರಾಜು, ವಾರ್ಡನ್ ಹಾಗೂ ಪ್ರಭಾರ ಮುಖ್ಯೋಪಾಧ್ಯಾಯರು