ಸಾರಾಂಶ
ಕನ್ನಡಪ್ರಭ ವಾರ್ತೆ ಮಾಗಡಿ
ನಾರಸಂದ್ರ ಗ್ರಾಮ ಪಂಚಾಯಿತಿ ಸಭೆಗೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಸಿದರು.ತಾಲೂಕಿನ ನಾರಸಂದ್ರ ಗ್ರಾಪಂ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಗೈರು ಹಾಜರಾದರೆ
ಗ್ರಾಮಸ್ಥರು ತಮಗೆ ಬೇಕಾದ ಸೌಲಭ್ಯಗಳನ್ನು ಪಡೆಯುವುದಾದರೂ ಹೇಗೆ? ಇಲಾಖೆಯಲ್ಲಿ ಸಿಗುವ ಮಾಹಿತಿಗಳನ್ನು ತಿಳಿಸದಿದ್ದರೆ ಫಲಾನುಭವಿಗಳಿಗೆ ವಂಚಿಸಿದಂತೆ ಆಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಶಿವಕುಮಾರ್, ಗ್ರಾಮಸಭೆಗೆ ದಿನಾಂಕವನ್ನು ಸದಸ್ಯರ ಸಾಮಾನ್ಯ ಸಭೆಯಲ್ಲಿ ನಿಗದಿ ಪಡಿಸಿದ್ದು, ರೈತರಿಗೆ ಮತ್ತು ಗ್ರಾಮಸ್ಥರಿಗೆ ಅಗತ್ಯವಿರುವ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೂ ಆಹ್ವಾನ ನೀಡಲಾಗಿತ್ತು. ಗೈರಾದ ಅಧಿಕಾರಿಗಳಿಗೆ ಮೇಲಧಿಕಾರಿಗಳು ಮತ್ತು ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರ ಸಲಹೆ ಪಡೆದು ನೋಟಿಸ್ ನೀಡಿ ಉತ್ತರ ಕೇಳಲಾಗುವುದು ಎಂದರು.
ಗ್ರಾಪಂ ವ್ಯಾಪ್ತಿಯ ಹೊಸಪಾಳ್ಯ ಗ್ರಾಮದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ತಾಲೂಕು ಆಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ಮತ್ತು ಭೂರಹಿತರು ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ನಿವೇಶನ ನೀಡಲಾಗುವುದೆಂದು ತಿಳಿಸಿದರು.ಆಶ್ರಯ ಯೋಜನೆಯಡಿ ನಿವೇಶನ ಜನಾಕ್ರೋಶ:
ನಾರಸಂದ್ರ ಗ್ರಾಪಂ ವ್ಯಾಪ್ತಿಯ ಹೊಸಪಾಳ್ಯದಲ್ಲಿ ಸುಮಾರು ಐದು ಎಕರೆ ಜಾಗದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ನೀಡುವುದಾಗಿ ಕರ ಪತ್ರ ಹೊರಡಿಸಿದ್ದು, ಅದೇ ಜಾಗದಲ್ಲಿ ಹಿಂದೆ (1993- 94) ಎಚ್.ಎಂ. ರೇವಣ್ಣ ಅವರು ಶಾಸಕರಾಗಿದ್ದಾಗ ಗ್ರಾಪಂ ವ್ಯಾಪ್ತಿಯ 80ಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿದ್ದು, ಈಗ ಮತ್ತೆ ಅದೇ ಜಾಗಕ್ಕೆ ಹೊಸದಾಗಿ ನಿವೇಶನ ಹಂಚಲು ಮುಂದಾಗಿದ್ದು, ಫಲಾನುಭವಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ನಡೆಯಿತು.ಗ್ರಾಪಂ ಸದಸ್ಯ ಸಾಗರ್ ಗೌಡ ಮಾತನಾಡಿ, ಈ ವಿಚಾರವಾಗಿ ಪಂಚಾಯಿತಿಯಲ್ಲಿ ತುರ್ತು ಸರ್ವ ಸದಸ್ಯರ ಸಭೆ ಕರೆದು ಗ್ರಾಮದಲ್ಲಿ ಎಷ್ಟು ಹಕ್ಕು ಪತ್ರಗಳನ್ನು ನೀಡಲಾಗಿದೆ ಮತ್ತು ಉಳಿದ ನಿವೇಶನಗಳೆಷ್ಟು ಎಂಬುದನ್ನು ಚರ್ಚಿಸಿ, ಸರ್ಕಾರ ನೀಡಿರುವ ಹಕ್ಕು ಪತ್ರಗಳ ಮಾಲೀಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಗಳಿಂದ ಬಂದಿದ್ದ ಅಧಿಕಾರಿಗಳಿಗೆ ನರೇಗಾ ಯೋಜನೆಯಡಿ ಬರುವ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಅಧ್ಯಕ್ಷೆ ರೇಖಾ ನಂದೀಶ್, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಶಿವಪ್ರಸಾದ್, ಗಾಯಿತ್ರಿ, ರಾಜಮ್ಮ, ರಾಮಕೃಷ್ಣಯ್ಯ, ಹನುಮಂತಯ್ಯ, ಶೋಭ, ಗಂಗರಂಗಯ್ಯ, ವೆಂಕಟೇಶ್, ಗೀತಾ, ಸಿದ್ದಗಂಗಮ್ಮ, ಸ್ವಾಮಿ, ಚೆನ್ನಮ್ಮ, ಪಿಡಿಒ ಶಿವಕುಮಾರ್, ಕಾರ್ಯದರ್ಶಿ ರಂಗಸ್ವಾಮಯ್ಯ, ನಂದೀಶ, ಸೇರಿದಂತೆ ಇತರರು ಭಾಗವಹಿಸಿದ್ದರು.