ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ ಸಮೀಪದ ಗಂಜಾಂನ ಪ್ರಸಿದ್ಧ ಶ್ರೀನಿಮಿಷಾಂಬ ದೇವಾಲಯದಲ್ಲಿ ಮಾಘ ಶುದ್ಧ ಹುಣ್ಣಿಮೆ ಅಂಗವಾಗಿ ನಡೆದ ರಥೋತ್ಸವಕ್ಕೆ ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಕಾವೇರಿ ನದಿಯಲ್ಲಿ ಮಾಘ ಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.ದೇವಾಲಯದಲ್ಲಿ ಮಂಗಳವಾರ ಮಧ್ಯ ರಾತ್ರಿಯಿಂದಲೇ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ದೇವಾಲಯದ ಪ್ರಧಾನ ಅರ್ಚಕ ಸೂರ್ಯನಾರಾಯಣ ಭಟ್ ನೇತೃತ್ವದಲ್ಲಿ ದೇವಿಗೆ ಪಂಚಾಮೃತ ಅಭಿಷೇಕ, ಪೂರ್ವಕ ಮಹಾಭಿಷೇಕ ಸೇವೆ, ಗಣಹೋಮ, ನಕ್ಷತ್ರ ಹೋಮ, ದುರ್ಗಾ ಹೋಮ ಹಾಗೂ ಸತ್ಯನಾರಾಯಣ ಪೂಜೆಗಳನ್ನು ನೆರವೇರಿಸಲಾಯಿತು.
ದೇವಾಲಯದ ಆವರಣದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ, ಗೋಪುರಕ್ಕೆ ಈ ಬಾರಿ ವಿಶೆಷವಾಗಿ ವಿದ್ಯುತ್ ದೀಪಗಳಿಂದ ಕಂಗೊಳಿಸುವಂತೆ ಮಾಡಲಾಯಿತು. ಭಕ್ತರು ಸ್ನಾನ ಮಾಡಲು ನದಿ ತೀರದಲ್ಲಿ ಬ್ಯಾರಿಗೇಡ್ ಅಳವಡಿಸಿ ನದಿ ಸುರಕ್ಷತೆ ಕಾಪಾಡಿಕೊಳ್ಳಲಾಯಿತು. ಇದರ ಜೊತೆ ಮಹಿಳೆಯರು ಸ್ನಾನ ಮಾಡಿ ಬಟ್ಟೆ ಬದಲಿಸಿಕೊಳ್ಳುವ ವ್ಯವಸ್ಥೆ ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿತ್ತು.ಇದೇ ಮೊದಲ ಬಾರಿಗೆ ದೇವಾಲಯದಿಂದ ಮಾಘ ಶುದ್ಧ ಹುಣ್ಣಿಮೆಯ ಅಂಗವಾಗಿ ರಥೋತ್ಸವವನ್ನು ಆರಂಭಿಸಲಾಯಿತು. ರಥದಲ್ಲಿ ಶ್ರೀನಿಮಿಷಾಂಬ ದೇವಿ ಉತ್ಸವ ಮೂರ್ತಿಯನ್ನು ಪ್ರತಿಸ್ಥಾಪಿಸಿ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಡಾ.ಕುಮಾರ್, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ, ದೇವಾಲಯದ ಎಒ ಸಿ.ಜಿ.ಕೃಷ್ಣ ನೇತೃತ್ವದಲ್ಲಿ ದೇವಾಲಯದ ಆವರಣದಲ್ಲಿ ಬೆಳಗಿನ 5.30ರ ಸಮಯದಲ್ಲಿ ರಥೋತ್ಸವವನ್ನು ಎಳೆಯುವ ಮೂಲಕ ಚಾಲನೆ ನೀಡಿದರು.ನಂತರ ಭಕ್ತರು ದೇವಾಲಯದ ಆವರಣದದಲ್ಲಿ ಒಂದು ಸುತ್ತು ಮಂಗಳವಾದ್ಯದೊಂದಿಗೆ ರಥೋತ್ಸವದ ಮೆರವಣಿಗೆ ಮಾಡಿ ನಂತರ ಮೊದಲಿದ್ದ ಸ್ಥಳಕ್ಕೆ ತಂದು ರಥವನ್ನು ನಿಲ್ಲಿಸಲಾಯಿತು. ಮಾಘ ಮಾಸದ ಹುಣ್ಣಿಮೆಯಲ್ಲಿ ಕಾವೇರಿ ನದಿಯಲ್ಲಿ ಮಿಂದು ಶಕ್ತಿ ದೇವಿಯ ದರ್ಶನ ಪಡೆದರೆ ಒಳಿತಾಗಲಿದೆ ಎಂಬ ಹಿನ್ನೆಲೆಯಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಇಲ್ಲಿನ ಕಾವೇರಿ ನದಿಯಲ್ಲಿ ಮಾಘ ಸ್ನಾನ ಮಾಡಿ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದು ತಮ್ಮ ಕಷ್ಟ ಕಾರ್ಪಣ್ಯಗಳನ್ನು ನೀಗಿಸುವಂತೆ ಪ್ರಾರ್ಥನೆ ಸಲ್ಲಿಸಿದರು.
ದೇವಾಲಯದ ಆವರಣದ ಮುಂಭಾಗದಲ್ಲಿ ಸಾಂಸ್ಕೃತಿಕ ವೇದಿಕೆ ನಿರ್ಮಿಸಿ ವಿವಿಧ ಸಾಂಸ್ಕೃತಿಕ ಕಲಾತಂಡಗಳಿಂದ ರಾತ್ರಿಯಿಡಿ ಭಕ್ತಿ ಸಂಗೀತ ಕಾರ್ಯಕ್ರಮಗಳು ಜರುಗಿದವು. ಈ ಕಾರ್ಯಕ್ರಮಗಳು ಇಡೀ ರಾತ್ರಿ ಆಗಮಿಸಿದ ಭಕ್ತರಿಗೆ ರಸದೌತಣ ನೀಡಿತು.ದೇವಾಲಯಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ಸಂಜೆವರೆಗೂ ನಿರಂತರವಾಗಿ ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯನ್ನು ಬೆಂಗಳೂರಿನ ದಾನಿಯೊಬ್ಬರು ನೆರವೇರಿಸಿದರು.
ಭಕ್ತರ ವಾಹನಗಳಿಗೆ ಅಲ್ಲಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಯಿತು. ಸರಾಗವಾಗಿ ವಾಹನ ಚಾಲನೆ ಮಾಡಲು ಪೊಲೀಸರು ಏಕಮುಖ ಸಂಚಾರ ನಿಯೋಜನೆ ಮಾಡಿ ಬಾರಿ ಬಿಗಿ ಭದ್ರತೆ ಹೊದಗಿಸಿದ್ದರು.ಶಾಸಕ ರಮೇಶ ಬಂಡಿಸಿದ್ದೇಗೌಡ ದಂಪತಿಯೊಂದಿಗೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರ ಜನಪ್ರತಿನಿಧಿಗಳು ಭಾಗವಹಿಸಿದ್ದರು.