ಸುಕ್ಷೇತ್ರ ಗಾಣಗಾಪೂರದಲ್ಲಿ ಇಂದಿನಿಂದ ಮಾಘ ಉತ್ಸವ

| Published : Feb 24 2024, 02:31 AM IST

ಸಾರಾಂಶ

ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ನಿರ್ಗುಣ ಮಠದಲ್ಲಿ ಫೆ.24ರಿಂದ 28ರವರೆಗೆ ಮಾಘ ಉತ್ಸವ ಆರಂಭಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ ಚವಡಾಪುರ

ಅಫಜಲ್ಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ನಿರ್ಗುಣ ಮಠದಲ್ಲಿ ಫೆ.24ರಿಂದ 28ರವರೆಗೆ ಮಾಘ ಉತ್ಸವ ಆರಂಭಗೊಳ್ಳಲಿದೆ.

ಫೆ.24 ಶನಿವಾರ ಬೆಳಗಿನ ಜಾವ 2 ಗಂಟೆಗೆ ಕಾಕಡಾರತಿಯೊಂದಿಗೆ ಮಾಘ ಉತ್ಸವ ಪ್ರಾರಂಭವಾಗಲಿದೆ. ನಂತರ ಮಠದ ಅರ್ಚಕರಿಂದ ನಿರ್ಗುಣ ಪಾದುಕೆಗಳಿಗೆ ಕೆಸರ, ಚಂದನ ಲೇಪನ ಮಾಡಿ ಪಾದುಕೆಗಳನ್ನುಸಂಪುಟದಲ್ಲಿಡಲಾಗುತ್ತದೆ. ವರ್ಷದಲ್ಲಿ ಇದೊಂದು ದಿನ ಮಾತ್ರ ಸಾರ್ವಜನಿಕರಿಗೆ ಪಾದುಕೆಗಳ ದರ್ಶನ ಇರುವುದಿಲ್ಲ. ಫೆ25 ರವಿವಾರದಂದು ದತ್ತಾವತಾರಿ ನೃಸಿಂಹ ಸರಸ್ವತಿ ಸ್ವಾಮಿಗಳು ನಿರ್ಗುಣ ಪಾದುಕೆ ಪ್ರಕಟಿಸಿ ಗುಪ್ತರಾಗುವ ದಿನವಾಗಿದ್ದು ಸಂಜೆ 4 ಗಂಟೆಗೆ ಯತಿ ಪೂಜೆ ಜರುಗಲಿದೆ.

ಫೆ.26,27ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಫೆ.28 ಬುಧವಾರದಂದು ಸಂಭ್ರಮದ ಗೋಪಾಲ ಕಾಲ ಜರುಗಲಿದ್ದು, ಮದ್ಯಾಹ್ನ 12 ಗಂಟೆಗೆ ಮಠದ ಆವರಣದಲ್ಲಿ ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಜರುಗಲಿದೆ. ನಂತರ ಶ್ರೀಗಳ ಪಲ್ಲಕ್ಕಿಯು ಮಠದಿಂದ ಅವಭೃತ ಸ್ನಾನಕ್ಕಾಗಿ ರುದ್ರಪಾದ ತೀರ್ಥಕ್ಕೆ ತೆರಳುವುದು ಅಲ್ಲಿಂದ ಸಾಯಂಕಾಲ 4 ಗಂಟೆಗೆ ಮಠಕ್ಕೆ ಮರಳುವುದರೊಂದಿಗೆ ಮಾಘ ಉತ್ಸವ ಸಮಾಪ್ತಿಯಾಗಲಿದೆ.

ಫೆ.24 ರಿಂದ 28ರವರೆಗೆ ನಡೆಯುವ ಮಾಘ ಉತ್ಸವದಲ್ಲಿ ಮಹಾರಾಷ್ಟ್ರ, ತಮಿಳುನಾಡು, ಗೋವಾ, ಸೀಮಾಂದ್ರ, ತೆಲಂಗಾಣ ರಾಜ್ಯಗಳ ಭಕ್ತರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಸಹಸ್ರಾರು ಭಕ್ತರು ಆಗಮಿಸಿ ಭೀಮಾ, ಅಮರ್ಜಾನ ನದಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವುರಲ್ಲದೆ ದತ್ತ ಮಹಾರಾಜರ ದರ್ಶನ ಪಡೆದುಕೊಂಡು ಪುನೀತರಾಗಲಿದ್ದಾರೆ. ಸಹಸ್ರಾರು ಭಕ್ತರು ಆಗಮಿಸುವ ಹಿನ್ನೆಲೆ ಸಕಲ ಸಿದ್ದತೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಮಾಡಿಕೊಂಡಿದೆ, ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮತ್ತು ಭದ್ರತೆ ಒದಗಿಸುವ ಕೆಲಸವನ್ನು ದೇವಲ ಗಾಣಗಾಪೂರ ಠಾಣೆ ಪೊಲೀಸ್‌ರು ಮಾಡಿಕೊಂಡಿದ್ದಾರೆ.