ಸಾರಾಂಶ
ಜೋಡಗರ್ಗಿ ಮಗಿ, ಹುಬ್ಬಿ, ಉತ್ರಿ, ಹಸ್ತ, ಮಳಿ ಸಂಪನ್ನ ಮಕ್ಕಳಿರಾ... ಸೋಮವಾರ ಬಸವಣ್ಣ ಹೂಡಬ್ಯಾಡ್ರೋ ಮಕ್ಕಳಿರಾ... ಎಂದು ಕರಿಸಿದ್ದೇಶ್ವರ ನುಡಿಕಾರ ಭವಿಷ್ಯ ನುಡಿದಿದ್ದಾರೆ.
ಕನ್ನಡಪ್ರಭ ವಾರ್ತೆ ಮೂಡಲಗಿ
ಜೋಡಗರ್ಗಿ ಮಗಿ, ಹುಬ್ಬಿ, ಉತ್ರಿ, ಹಸ್ತ, ಮಳಿ ಸಂಪನ್ನ ಮಕ್ಕಳಿರಾ... ಸೋಮವಾರ ಬಸವಣ್ಣ ಹೂಡಬ್ಯಾಡ್ರೋ ಮಕ್ಕಳಿರಾ... ಎಂದು ಕರಿಸಿದ್ದೇಶ್ವರ ನುಡಿಕಾರ ಭವಿಷ್ಯ ನುಡಿದಿದ್ದಾರೆ.ರಡ್ಡೇರಟ್ಟಿ ಗ್ರಾಮದಲ್ಲಿ ದಸರಾ ಹಬ್ಬದ ನಿಮಿತ್ತ ಗುರುವಾರ ಕರಿಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ದೇವರ ನುಡಿಕಾರ ಭವಿಷ್ಯವಾಣಿ ನುಡಿಯುತ್ತಾ ನಾ ಆನಂದ ಅದನ್ರೋ... ಎಲ್ಲರೂ ತಪ್ಪದ ವಾರಹಿಡಿರೋ ಮಕ್ಕಳಿರಾ... ಭಂಡಾರ ಹಿಡದರ ಎಲ್ಲಾರೂ ಒಂದರೋ ಮಕ್ಕಳಿರಾ... ಎಂದು ಸಂದೇಶ ಸಾರಿದರು.
ರಡ್ಡೇರಟ್ಟಿ ಗ್ರಾಮದಲ್ಲಿ ಪ್ರತಿವರ್ಷ ದಸರಾ ಹಬ್ಬ ವಿಶೇಷವಾಗಿ ಆಚರಿಸಲ್ಪಡುತ್ತದೆ. ನವರಾತ್ರಿಯ ನಿಮಿತ್ತ ಒಂಬತ್ತು ದಿನಗಳ ಕಾಲ ರಡ್ಡೇರಟ್ಟಿ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗುತ್ತವೆ. ದಸರಾ ನಿಮಿತ್ತ ಪ್ರತಿವರ್ಷ ಇಲ್ಲಿ ಕರಿಸಿದ್ದೇಶ್ವರ ದೇವಸ್ಥಾನದ ನುಡಿಕಾರ ರೈತಾಪಿ ಜನಕ್ಕೆ, ಸಮಸ್ತ ಲೋಕಕ್ಕೆ ಹೇಳಿದ ನುಡಿಗಳ ಮೇಲೆ ಇಲ್ಲಿಯ ಭಕ್ತರ ಅಪಾರವಾದ ನಂಬಿಕೆ ಇದೆ.ನುಡಿಗಳ ತಾತ್ಪರ್ಯ:
ಈ ವರ್ಷ ಮಳೆಗಾಲ ಚೆನ್ನಾಗಿದೆ. ಮೇಘ, ಹುಬ್ಬಿ, ಉತ್ತರೆ, ಹಸ್ತ ಮಳೆಗಳು ರೈತರಿಗೆ ವರದಾನವಾಗಲಿವೆ. ನನ್ನ ಭಂಡಾರಕ್ಕೆ ಎಲ್ಲರೂ ಒಂದಾಗುವ ಶಕ್ತಿ ಇದೆ. ಎರಡೆರಡು ಬಣಗಳನ್ನು ಮಾಡಿಕೊಂಡು ಹೋಳಾಗಬೇಡಿ, ಇದು ಊರಿಗೂ ಮತ್ತು ನಾಡಿಗೂ ಒಳ್ಳೆಯದಲ್ಲ... ಎಂಬ ನುಡಿಕಾರನ ಮಾತು ಭಕ್ತರಲ್ಲಿ ನಿಗೂಢತೆ ಹುಟ್ಟುಹಾಕಿತು. ಪ್ರಸಕ್ತ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಕುರಿತು ನುಡಿಕಾರ ಎಚ್ಚರಿಕೆ ನೀಡಿದನೆಂಬ ಮಾತುಗಳು ಚರ್ಚಿತವಾದವು.ಕೌಜಲಗಿ, ರಡ್ಡೇರಟ್ಟಿ, ಸುತ್ತಲಿನ ಸುಮಾರು ೪೦ಕ್ಕೂ ಅಧಿಕ ಗ್ರಾಮಗಳ ಸಹಸ್ರಾರು ಕರಿಸಿದ್ದೇಶ್ವರ ಭಕ್ತರು ದಸರಾ ನುಡಿಗಳನ್ನು ಕೇಳಲು ನೆರೆದಿದ್ದರು. ಜಾತ್ರೆ ಬಂಡಾರಮಯವಾಗಿತ್ತು.