ಸಾರಾಂಶ
ಕಡೆ ಕಾರ್ತಿಕ ಮಾಸದ ಪ್ರಯುಕ್ತ ಹನೂರಿನ ಮಲೆ ಮಾದೇಶ್ವರ ಬೆಟ್ಟದಲ್ಲಿ ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಪೂಜಾ ಕಾರ್ಯಕ್ರಮಗಳು, ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಜರುಗಿದವು.
ಕಡೆ ಕಾರ್ತಿಕ ಸೋಮವಾರ ಪ್ರಯುಕ್ತ ಮಾದಪ್ಪನಿಗೆ ವಿಶೇಷ ಪೂಜೆ । ವಿವಿಧ ಹೂಗಳ ಸಿಂಗಾರ । ದಾಸೋಹ ವ್ಯವಸ್ಥೆ । ದೀಪದ ಒಡ್ಡುವಿಲ್ಲಿ ಮಹಾಜ್ಯೋತಿ
ಕನ್ನಡಪ್ರಭ ವಾರ್ತೆ ಹನೂರುಕಡೆ ಕಾರ್ತಿಕ ಮಾಸದ ಪ್ರಯುಕ್ತ ಮಲೆ ಮಾದೇಶ್ವರ ಬೆಟ್ಟದಲ್ಲಿ ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಪೂಜಾ ಕಾರ್ಯಕ್ರಮಗಳು, ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಜರುಗಿದವು.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಡೆಯುತ್ತಿರುವ ಕಡೆ ಕಾರ್ತಿಕ ಸೋಮವಾರ ಮಹಾ ಜ್ಯೋತಿ ಅಂಗವಾಗಿ ಮಲೆ ಮಾದಪ್ಪನಿಗೆ ಸೋಮವಾರ ಬೆಳಿಗ್ಗೆ ಬಿಲ್ವಾರ್ಚನೆ, ಧೂಪದ ಸೇವೆ, ಎಣ್ಣೆ ಮಜ್ಜನ ಸೇವೆ, ಮಹಾಮಂಗಳಾರತಿಯೊಂದಿಗೆ ಧಾರ್ಮಿಕವಾಗಿ ಸರದಿ ಬೇಡಗಂಪಣ ಅರ್ಚಕರಿಂದ ಪೂಜಾ ಕಾರ್ಯಕ್ರಮಗಳು ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ನಡೆದವು.ವಿಶೇಷ ಹೂವಿನ ಅಲಂಕಾರ:
ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವಾಲಯದ ಪ್ರಾಂಗಣ ಸೇರಿದಂತೆ ವಿವಿಧ ಕಡೆ ವಿಶೇಷ ಬಗೆಬಗೆಯ ಹೂಗಳಿಂದ ಅಲಂಕಾರವನ್ನು ಸಹ ಮಾಡಲಾಗಿತ್ತು.ವಿಶೇಷ ದಾಸೋಹ ವ್ಯವಸ್ಥೆ:
ಮಲೆ ಮಹದೇಶ್ವರ ಬೆಟ್ಟದಲ್ಲಿ ರಾಜ್ಯದ ನಾನಾ ಭಾಗಗಳಿಂದ ಹಾಗೂ ವಿವಿಧ ತಾಲೂಕುಗಳಿಂದ ಹನೂರು ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುವ ಭಕ್ತಾದಿಗಳಿಗೆ ವಿಶೇಷ ದಾಸೋಹ ಸೇವಾರ್ಥ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೈಸೂರು ತಾಲೂಕು ಇವರ ವತಿಯಿಂದ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು, ಇದೇ ವೇಳೆ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಇ. ರಘು ಹಾಗೂ ದಾಸೋಹ ಉಸ್ತುವಾರಿ ಸ್ವಾಮಿ ಮೈಸೂರು ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯರು ಹಾಜರಿದ್ದರು.ಹರಕೆ ಹೊತ್ತು ಭಕ್ತರಿಂದ ಉತ್ಸವಗಳು:
ಮಲೆ ಮಹದೇಶ್ವರ ಬೆಟ್ಟದಲ್ಲಿ ಕಡೆ ಕಾರ್ತಿಕ ಸೋಮವಾರ ಹರಕೆ ಹೊತ್ತ ಭಕ್ತಾದಿಗಳಿಂದ ಹಲವು ಉತ್ಸವಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆಯಲ್ಲಿ ಮಲೆ ಮಾದೇಶ್ವರ ಉತ್ಸವ ಬೆಳ್ಳಿ ರಥೋತ್ಸವ, ರುದ್ರಾಕ್ಷಿ ಮಂಟಪೋತ್ಸವ, ದೂಪದ ಸೇವೆ ಉರುಳು ಸೇವೆ ಮತ್ತು ಪಂಜಿನ ಸೇವೆ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆಯಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ಸೌಕರ್ಯಗಳು ನೀಡುವ ನಿಟ್ಟಿನಲ್ಲಿ ಪ್ರಾಧಿಕಾರ ವ್ಯವಸ್ಥೆ ಕಲ್ಪಿಸಿತ್ತು.ಕಾರ್ತಿಕ ಮಾಸದ ಮಹಾ ಜ್ಯೋತಿ:
ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಂಪ್ರದಾಯದಂತೆ ಕಡೆ ಕಾರ್ತಿಕ ಮಾಸದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳ ಜೊತೆ ಮಹಾಜ್ಯೋತಿ ಬೆಳಗುವ ಸ್ಥಳದಲ್ಲಿ ಬೇಡಗಂಪಣ ಅರ್ಚಕರಿಂದ ಪೂಜೆ ಹೋಮ ಹವನ ಅಷ್ಟೋತ್ತರ ಪಠಿಸಿ ಮಹಾ ಮಂಗಳಾರತಿಯೊಂದಿಗೆ ಪೂಜಾ ಕಾರ್ಯಕ್ರಮಗಳು ಸಹ ನಡೆಯುತ್ತಿದೆ. ರಾತ್ರಿ ಮಹಾಜ್ಯೋತಿಯನ್ನು ದೀಪದ ಒಡ್ಡುವಿನ ಬಳಿ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ದಿವ್ಯಸಾನಿಧ್ಯದಲ್ಲಿ ಮಹಾಜ್ಯೋತಿಯನ್ನು ಬೆಳಗಿಸಲಾಯಿತು.ಸೂಕ್ತ ಬಂದೋಬಸ್ತ್:
ಮಹದೇಶ್ವರ ಬೆಟ್ಟದಲ್ಲಿ ಕಡೆ ಕಾರ್ತಿಕ ಸೋಮವಾರ ನಡೆಯುವ ಮಹಾಜ್ಯೋತಿ ಪೂಜಾ ಕಾರ್ಯಕ್ರಮಕ್ಕೆ ರಾಜ್ಯದ ಹಾಗೂ ನಾನಾ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ಬೆಟ್ಟದ ದೇವಾಲಯ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.