ಕಾವೇರಿ ನದಿ ತಟದಲ್ಲಿ ಮಹಾ ಆರತಿ ಸಂಪನ್ನ

| Published : Jun 24 2024, 01:35 AM IST

ಕಾವೇರಿ ನದಿ ತಟದಲ್ಲಿ ಮಹಾ ಆರತಿ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾ ಆರತಿ ಕಾರ್ಯಕ್ರಮ ಕೊಡಗು ಜಿಲ್ಲೆಯ ಕಾವೇರಿ ನದಿ ತಟದಲ್ಲಿ ಇತ್ತೀಚೆಗೆ ಆರು ಕಡೆ ಏಕಕಾಲದಲ್ಲಿ ನಡೆಯಿತು. ಸ್ವಚ್ಛ ಕಾವೇರಿಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜೀವನದಿ ಕಾವೇರಿ ಜಾಗೃತಿಗಾಗಿ ಹುಣ್ಣಿಮೆಯಂದು ಹಮ್ಮಿಕೊಂಡು ಬರುತ್ತಿರುವ ಮಹಾ ಆರತಿ ಕಾರ್ಯಕ್ರಮ ಕೊಡಗು ಜಿಲ್ಲೆಯ ಕಾವೇರಿ ನದಿ ತಟದಲ್ಲಿ ಜೂ. 22ರಂದು ಆರು ಕಡೆ ಏಕಕಾಲದಲ್ಲಿ ನಡೆಯಿತು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ನಮಾಮಿ ಕಾವೇರಿ ತಂಡಗಳ ಮೂಲಕ ಭಾಗಮಂಡಲ ತ್ರಿವೇಣಿ ಸಂಗಮ, ಚೆಟ್ಟಿಮಾನಿ, ನಾಪೋಕ್ಲು ಕಲ್ಲುಮೊಟ್ಟೆ, ಚೆರಿಯ ಪರಂಬು, ಕುಶಾಲನಗರದ ಕಾವೇರಿ ಆರತಿ ಕ್ಷೇತ್ರ, ಗಡಿ ಭಾಗದ ಕಾವೇರಿ ಪ್ರತಿಮೆ ಬಳಿ ಸೇರಿದಂತೆ ಒಟ್ಟು ಆರು ಕಡೆ ಕಾವೇರಿ ನದಿ ತಟಗಳಲ್ಲಿ ಮಹಾ ಆರತಿ ಬೆಳಗುವ ಮೂಲಕ ಕಾವೇರಿಯ ಆರಾಧನೆ ಕಾರ್ಯಕ್ರಮಗಳು ಏಕಕಾಲದಲ್ಲಿ ಜರಗಿದವು.

ಈ ಮೂಲಕ ಸ್ವಚ್ಛ ಕಾವೇರಿಗಾಗಿ ಜನರಲ್ಲಿ ಅರಿವು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆದವು.

ಕಾವೇರಿ ನದಿ ಸಂರಕ್ಷಣೆಯ ಅಂಗವಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ, ಶೌರ್ಯ ತಂಡದ ಸದಸ್ಯರ ಸಹಯೋಗದೊಂದಿಗೆ ಪ್ರತಿ ಗ್ರಾಮಗಳಲ್ಲಿ ನಮಾಮಿ ಕಾವೇರಿ ತಂಡ ರಚಿಸುವ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಈ ಸಂಬಂಧ ಈಗಾಗಲೇ ಜಿಲ್ಲೆಯ ಭಾಗಮಂಡಲ, ನಾಪೋಕ್ಲು, ಕುಶಾಲನಗರ ವ್ಯಾಪ್ತಿಗಳಲ್ಲಿ ತಂಡಗಳ ರಚನೆ ಕಾರ್ಯ ನಡೆದಿದೆ. ಮುಂದಿನ ದಿನಗಳಲ್ಲಿ ಬಲಮುರಿ, ನೆಲ್ಲಿಹುದಿಕೇರಿ, ಮುರ್ನಾಡು, ದುಬಾರೆ, ಗುಡ್ಡೆ ಹೊಸೂರು, ಕೂಡಿಗೆ, ಕಣಿವೆ ಸೇರಿದಂತೆ ಪಿರಿಯಾಪಟ್ಟಣ ಅರಕಲಗೂಡು ತಾಲೂಕುಗಳ ತನಕ ನದಿ ತಟದ ವ್ಯಾಪ್ತಿಯ ಗ್ರಾಮಮಟ್ಟಗಳಲ್ಲಿ 30 ಕ್ಕೂ ಅಧಿಕ ಕಡೆ ನಮಾಮಿ ಕಾವೇರಿ ಹೆಸರಿನ ತಂಡಗಳನ್ನು ರಚಿಸಲು ಚಿಂತನೆ ಹರಿಸಲಾಗಿದೆ ಎಂದು ನಮಾಮಿ ಕಾವೇರಿ ತಂಡದ ಪ್ರಮುಖರಾದ ವನಿತಾ ಚಂದ್ರಮೋಹನ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲೆ ನಿರ್ದೇಶಕರಾದ ಲೀಲಾವತಿ ತಿಳಿಸಿದ್ದಾರೆ.