ಮಹಾ ದಾಸೋಹಿ ಡಾ. ಶರಣಬಸವಪ್ಪ ಅಪ್ಪ ಪಂಚ ಭೂತಗಳಲ್ಲಿ ಲೀನ

| Published : Aug 16 2025, 12:00 AM IST

ಮಹಾ ದಾಸೋಹಿ ಡಾ. ಶರಣಬಸವಪ್ಪ ಅಪ್ಪ ಪಂಚ ಭೂತಗಳಲ್ಲಿ ಲೀನ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾ ದಾಸೋಹ ಪೀಠದ 8ನೇ ಪೀಠಾಧಿಪತಿ, ವಿದ್ಯಾಭಂಡಾರಿ, ಶಿಕ್ಷಣ ದಾಸೋಹಿ ಡಾ. ಶರಣಬಸವಪ್ಪ ಅಪ್ಪ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಶುಕ್ರವಾರ ಸಂಜೆ ಗೋಧೂಳಿ ಮುಹೂರ್ತದಲ್ಲಿ ಗುರುವಿನ ಪಾದೋದಕ ಅರ್ಪಣೆಯೊಂದಿಗೆ ವೀರಶೈವ ವಿಧಿ ವಿಧಾನದಂತೆ ನಡೆಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಮಹಾ ದಾಸೋಹ ಪೀಠದ 8ನೇ ಪೀಠಾಧಿಪತಿ, ವಿದ್ಯಾಭಂಡಾರಿ, ಶಿಕ್ಷಣ ದಾಸೋಹಿ ಡಾ. ಶರಣಬಸವಪ್ಪ ಅಪ್ಪ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಶುಕ್ರವಾರ ಸಂಜೆ ಗೋಧೂಳಿ ಮುಹೂರ್ತದಲ್ಲಿ ಗುರುವಿನ ಪಾದೋದಕ ಅರ್ಪಣೆಯೊಂದಿಗೆ ವೀರಶೈವ ವಿಧಿ ವಿಧಾನದಂತೆ ನಡೆಯಿತು.

ಅನುಭವ ಮಂಟಪದಲ್ಲಿ ಸಾರ್ವಜನಿಕ ದರುಶನಕ್ಕೆ ಇಡಲಾಗಿದ್ದ ಪಾರ್ಥೀವ ಶರೀರವನ್ನು ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿರಿಸಿ ಶರಣಬಸವೇಶ್ವರ ಮಹಾ ಸಮಾಧಿ ಮಂದಿರದ ಸುತ್ತ ಪಲ್ಲಕ್ಕಿ ಹೊತ್ತು ಐದು ಸುತ್ತು ಪ್ರದಕ್ಷಿಣೆ ನಡೆಸಿದರು.

ನಂತರ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿಯೇ ಅಪ್ಪಾಜಿಯವರ ತಂದೆ ಲಿಂ.ದೊಡ್ಡಪ್ಪ ಅಪ್ಪಾ ಅವರ ಸಮಾಧಿ ಬಳಿ ಪಕ್ಕದಲ್ಲೇ ಸಜ್ಜುಗೊಳಿಸಲಾಗಿದ್ದ ಅಂತ್ಯಕ್ರಿಯೆಯ ಸಮಾಧಿಯನ್ನು ಉದ್ದ 16 ಪಾದ, ಅಂಗುಲ 9 ಪಾದ, ಮೂಲ 3 ಪಾದ ಹೊಂದಿದ ಸಮಾಧಿ ಸ್ಥಳಕ್ಕೆ ಪಾರ್ಥೀವ ಶರೀರ ತರಲಾಯಿತು.

ಬೆಳಗುಂಪಾಶ್ರೀ, ಚೌದಾಪುರಿ ಹಿರೇಮಠ ರಾಜಶೇಖರ ದೇವರ ನೇತೃತ್ವದಲ್ಲಿ ನಡೆದ ಅಪ್ಪಾಜಿ ಅಂತ್ಯಕ್ರಿಯೆಗೆ 1ಲಕ್ಷಕ್ಕೂ ಅಧಿಕ ಬಿಲ್ವಪತ್ರೆ, 5050 ವಿಭೂತಿ ಬಳಸಲಾಗಿತ್ತು. ಈ ಅಂತಿಮ ಕ್ರಿಯೆಯಲ್ಲಿ ಕಕ ಭಾಗದ ವಿವಿಧ ಮಠಾಧೀಶರು ಭಾಗಿಯಾಗಿದ್ದರು.

ವೀರಶೈವ ಲಿಂಗಾಯತ ವಿಧಿವಿಧಾನದಂತೆ ಶರಣಬಸಪ್ಪ ಅಪ್ಪಾ ಅವರ ಅಂತ್ಯಕ್ರಿಯೆ ನಡೆಸಲಾಯ್ತು. ಲಿಂ. ದೊಡ್ಡಪ್ಪ ಅವರು ತ್ರಿಕಾಲ ಪೂಜಾ ನಿಷ್ಠರಿದ್ದರು, ಅವರ ಪುತ್ರರಾಗಿದ್ದ ಡಾ. ಶರಣಬಸಪ್ಪ ಅಪ್ಪಾಜಿ ತ್ರಿಕಾಲವಾಗಿ ಪಾದೋದಕ ಸ್ವೀಕರಿಸಿ ಪ್ರಸಾದ ತೆಗೆದುಕೊಳ್ಳುತ್ತಿದ್ದರು.

ಡಾ. ಶರಣಬಸವಪ್ಪ ಅಪ್ಪಾಜಿ ಅವರ ಅಂತ್ಯಕ್ರಿಯೆ ಅಷ್ಟಾವರಣ, ಪಂಚಾಚಾರ್ಯ, ಶಟಸ್ಥಳ ಅದರ ಪ್ರಕಾರ, ಗುರುವಿನ ಪಾದೋದಕ ಅವರ ಪಾರ್ಥೀವ ಶರೀರಕ್ಕೆ ಅರ್ಪಿಸುವ ಮೂಲಕ ಅಂತ್ಯ ಸಂಸ್ಕಾರ ವಿಧಿ ವಿಧಾನಗಳು ನಡೆದವು. ಬೆಳಗುಂಪಿಯ ಶ್ರೀ ಪರ್ವತೇಶ್ವರ ಶಿವಾಚಾರ್ಯರು, ಚೌದಾಪೂರಿ ಹಿರೇಮಠದ ಶ್ರೀ ರಾಜಶೇಖರ ಶಿವಾಚಾರ್ಯರ ನೇತೃತ್ವದಲ್ಲಿದ್ದ ತಂಡದವರು ಅಪ್ಪಾಜಿಯವರ ಪಾರ್ಥೀವ ಶರೀರದ ಅಂತಿಮ ವಿಧಿ ವಿಧಾನ ನಡೆಸಿಕೊಟ್ಟರು.

ಡಾ. ಅಪ್ಪಾಜಿಯವರ ಧರ್ಮಪತ್ನಿ ಡಾ. ಮಾತೋಶ್ರೀ ದಕ್ಷಾಯಿಣಿ ಅವ್ವಾಜಿ, ಪುತ್ರಿಯರಾದ ಗೋದುತಾಯಿ, ಶಿವಾನಿ, ಭವಾನಿ, ಕೋಮಲ್‌, ಪುತ್ರ ಹಾಗೂ 9ನೇ ಪೀಠಾಧಿಪತಿ ಚಿ. ದೊಡ್ಡಪ್ಪ ಅಪ್ಪ, ಬಸವರಾಜ ದೇಶಮುಖ, ಡಾ. ಅಲ್ಲಂಪ್ರಭು ದೇಶಮುಖ ಪರಿವಾರದ ಸದಸ್ಯರು ಅಂತಿಮ ಯಾತ್ರೆಯಲ್ಲಿದ್ದು ಅಪ್ಪಾಜಿ ಪಾರ್ಥೀವ ಶರೀರಕ್ಕೆ ಪುಷ್ಪವೃಷ್ಟಿ ಮಾಡಿ ನಮಿಸಿದರು.

ಹಾರಕೂಡ ಮಠದ ಚೆನ್ನಮಲ್ಲ ಶಿವಾಚಾರ್ಯರು, ಸಾರಂಗ ಮಠದ ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಮಠಾಧೀಶರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು ಅಪ್ಪಾಜಿವ ಆತ್ಮಕ್ಕೆ ಶಾಂತಿ ಕೋರಿದರು. ಶಾಸಕರಾದ ಅಲ್ಲಂಪ್ರಭು ಪಾಟೀಲ್‌, ತಿಪ್ಪಣ್ಣ ಕಮಕನೂರ್‌, ಶರಣು ಮೋದಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌, ರಾಜಕುಮಾರ್‌ ಪಾಟೀಲ್ ತೇಲ್ಕೂರ್‌, ಶಾಸಕರಾದ ಬಸವರಾಜ ಮತ್ತಿಮಡು, ಹೈಕಸಿ ಸಂಸ್ಥೆಯ ಅದ್ಯಕ್ಷ ಶಶಿಲ್‌ ನಮೋಶಿ, ಉಪಾಧ್ಯಕ್ಷ ರಾಜಾ ಬೀಮಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು.

ಶರಣಬಸವೇಶ್ವರ ಮಹಾರಾಜ್ ಕೀ ಜೈ, ಅಪ್ಪಾಜಿ ಅಮರ್‌ ಹೈ

ಪಲ್ಲಕ್ಕಿಯಲ್ಲಿ ಡಾ. ಅಪ್ಪಾಜಿ ಪಾರ್ಥೀವ ಶರೀರ ಕುಳ್ಳಿರಿಸಿ ನಡೆದು 5 ಸುತ್ತು ಪ್ರದಕ್ಷಿಣೆ ಸಮಯದಲ್ಲಿ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಶರಣಬಸವೇಶ್ವರರ ಹೆಸರಲ್ಲಿ ಜೈಕಾರ ಹಾಕಿದರಲ್ಲದೆ ಅಪ್ಪಾಜಿ ಅಮರ್‌ ಹೈ ಎಂದು ಡಾ. ಶರಣಬಸವಪ್ಪ ಅಪ್ಪ ಅವರನ್ನು ಕೊಂಡಾಡಿದರು. ಭಕ್ತ ಗಣದ ಜಯಘೋಷಗಳು ಮುಗಿಲು ಮುಟ್ಟುವಂತೆ ಇತ್ತು.