ಸಾರಾಂಶ
‘ಹರಿದಾಸ ದೇವಕಿತನಯ’ ಎಂದೇ ಗುರುತಿಸಿಕೊಂಡ ಮಹಾಬಲ ಶೆಟ್ಟಿ ಕೂಡ್ಲು ಅವರ ಅಭಿನಂದನಾ ಸಂಪುಟ ‘ಮಹಾಪರ್ವ’ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಲೋಕಾರ್ಪಣೆಗೊಂಡಿತು. ಹರಿಕಥಾ ಪರಿಷತ್ ಮಂಗಳೂರು ಮತ್ತು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
‘ಹರಿದಾಸ ದೇವಕಿತನಯ’ ಎಂದೇ ಗುರುತಿಸಿಕೊಂಡ ಮಹಾಬಲ ಶೆಟ್ಟಿ ಕೂಡ್ಲು ಅವರ ಅಭಿನಂದನಾ ಸಂಪುಟ ‘ಮಹಾಪರ್ವ’ ಶುಕ್ರವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಲೋಕಾರ್ಪಣೆಗೊಂಡಿತು.ಹರಿಕಥಾ ಪರಿಷತ್ ಮಂಗಳೂರು ಮತ್ತು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮಹಾಬಲ ಶೆಟ್ಟಿಯವರು ಹರಿಕಥಾ ಕ್ಷೇತ್ರದ ಓರ್ವ ಸಾಧಕ. ಸರಳ ಸಜ್ಜನಿಕೆಯಿಂದಲೇ ತನ್ನನ್ನು ಗುರುತಿಸಿಕೊಂಡ ಅವರ ಕುರಿತಂತೆ ಅಭಿನಂದನಾ ಸಂಪುಟ ಹೊರತಂದಿರುವುದು ಶ್ಲಾಘನೀಯ. ವ್ಯಕ್ತಿಯ ಜೀವನ ಸಾಧನೆ ಪುಸ್ತಕ ರೂಪದಲ್ಲಿ ಪ್ರಕಟವಾದಾಗ ಅದು ಮುಂದಿನ ಪೀಳಿಗೆಗೆ ದಾರಿದೀಪವಾಗುತ್ತದೆ ಎಂದರು.‘ಮಹಾಪರ್ವ’ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ಹರಿಕಥೆ ಉಳಿಸಿ ಬೆಳೆಸಬೇಕೆಂಬ ನಿಟ್ಟಿನಲ್ಲಿ ಮಹಾಬಲ ಶೆಟ್ಟಿ ಸತತವಾಗಿ ಶ್ರಮಿಸುತ್ತಾ ಬಂದವರು. ಅನೇಕ ಏಳುಬೀಳುಗಳನ್ನು ಕಂಡು ಸಾಧನೆಯ ಶಿಖರವೇರಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಮಾತನಾಡಿ, ಹರಿಕಥೆಯ ಮೂಲಕ ನಿರಂತರವಾಗಿ ಧರ್ಮ ಜಾಗೃತಿಯ ಕಾರ್ಯವನ್ನು ಮಾಡುತ್ತಾ ಬಂದವರು ಮಹಾಬಲ ಶೆಟ್ಟಿಯವರು. ಮಕ್ಕಳಲ್ಲೂ ಹರಿಕಥೆಯ ಆಸಕ್ತಿ ಹುಟ್ಟಿಸುವುದರೊಂದಿಗೆ ಧರ್ಮ ಜಾಗೃತಿಯ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.ಮಹಾಬಲ ಶೆಟ್ಟಿಕೂಡ್ಲು ಮಾತನಾಡಿ, ಶೇಣಿ ಗೋಪಾಲಕೃಷ್ಣ ಭಟ್ ಅವರಿಂದಾಗಿ ಹರಿದಾಸನಾದೆ. ನನ್ನ ಸಾಧನೆಯ ಪಥದಲ್ಲಿ ಹಲವರ ಪ್ರೋತ್ಸಾಹ ಮಾರ್ಗದರ್ಶನವಿದೆ ಎಂದರು. ಹರಿಕಥೆ ಮಹತ್ವದ ಕಲೆ. ಇದು ನಶಿಸುವ ಕಲೆಯಲ್ಲ. ಹರಿಕಥೆಯ ಕುರಿತಂತೆ ಸಮಗ್ರ ಅಧ್ಯಯನವಾಗಬೇಕು ಎಂದು ಆಶಿಸಿದರು.ದ.ಕ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ನ್ಯಾಯವಾದಿ ಗುರುಪ್ರಸಾದ್, ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಇದ್ದರು.ಎಸ್.ಪಿ. ಗುರುದಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾಕರ ರಾವ್ ಪೇಜಾವರ ಸ್ವಾಗತಿಸಿ, ಜಿ.ಕೆ.ಭಟ್ ಸೇರಾಜೆ ವಂದಿಸಿದರು. ತೋನ್ಸೆ ಪುಷ್ಕಳ ಕುಮಾರ್ ನಿರೂಪಿಸಿದರು.