ಸಾರಾಂಶ
ಅತ್ಯಂತ ಹಿಂಸಾತ್ಮಕ ಕಾಲಘಟ್ಟದಲ್ಲಿರುವ ಪ್ರಪಂಚದಲ್ಲಿ ನಾವೆಲ್ಲರೂ ಇದ್ದೇವೆ, ಹಿಂಸೆ, ಹೊಡೆದಾಟಕ್ಕೆ ಪ್ರೋತ್ಸಾಹಿಸುವ ಕಾಲವಿದು. ಮಹಾಭಾರತ ದಾಯಾದಿಗಳ ಕಲಹ, ಹಿಂಸೆಯ ಕತೆ, ರಕ್ತಪಾತ, ಯುದ್ಧದ ಕತೆ ಎಂದು ತಿಳಿಯದೇ ಹಿಂಸೆಯ ಕತೆಯ ಮೂಲಕ ಅಹಿಂಸೆಯನ್ನು ಹೇಳುತ್ತದೆ ಅದಕ್ಕೆ ಮೂಲ ಮಹಾಭಾರತವನ್ನು ಓದಬೇಕು, ತಿಳಿಯಬೇಕು ಅಥವಾ ಕೇಳಬೇಕು ಎಂದು ವಾಗ್ಮಿ ವೀಣಾ ಬನ್ನಂಜೆ ಹೇಳಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಅತ್ಯಂತ ಹಿಂಸಾತ್ಮಕ ಕಾಲಘಟ್ಟದಲ್ಲಿರುವ ಪ್ರಪಂಚದಲ್ಲಿ ನಾವೆಲ್ಲರೂ ಇದ್ದೇವೆ, ಹಿಂಸೆ, ಹೊಡೆದಾಟಕ್ಕೆ ಪ್ರೋತ್ಸಾಹಿಸುವ ಕಾಲವಿದು. ಮಹಾಭಾರತ ದಾಯಾದಿಗಳ ಕಲಹ, ಹಿಂಸೆಯ ಕತೆ, ರಕ್ತಪಾತ, ಯುದ್ಧದ ಕತೆ ಎಂದು ತಿಳಿಯದೇ ಹಿಂಸೆಯ ಕತೆಯ ಮೂಲಕ ಅಹಿಂಸೆಯನ್ನು ಹೇಳುತ್ತದೆ ಅದಕ್ಕೆ ಮೂಲ ಮಹಾಭಾರತವನ್ನು ಓದಬೇಕು, ತಿಳಿಯಬೇಕು ಅಥವಾ ಕೇಳಬೇಕು ಎಂದು ವಾಗ್ಮಿ ವೀಣಾ ಬನ್ನಂಜೆ ಹೇಳಿದರು.ಪ್ರಭಾತ ನಗರದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸತ್ಯ, ಪ್ರಾಮಾಣಿಕತೆ, ದಯೆ ಇಲ್ಲದ ಜೀವನ ಶೈಲಿ ನಮ್ಮದಾಗಿದೆ. ಮಕ್ಕಳಿಗೆ ಹೆಚ್ಚು ಅಂಕ ತೆಗೆದುಕೊಳ್ಳಲು ಹೇಳುವ ನಾವು ಸತ್ಯವಂತರಾಗಲು, ಪ್ರಾಮಾಣಿಕರಾಗಲು, ಹೇಳುವುದಿಲ್ಲ ಹಿಂಸೆ, ಆಕ್ರೋಶವನ್ನು ಪ್ರೋತ್ಸಾಹಿಸಿ ದಂತಾಗುತ್ತದೆ ಅಲ್ಲವೇ ಎಂದು ಪ್ರಶ್ನಿಸಿದ ಅವರು, ಇನ್ನೊಬ್ಬರನ್ನು ಸೋಲಿಸಿ ಹೆಚ್ಚು ಅಂಕ ಪಡೆಯುವುದು ಅದಕ್ಕಾಗಿ ಪ್ರೋತ್ಸಾಹಿಸುವುದು ಮಾನಸಿಕ ಹಿಂಸೆಯಾಗುತ್ತದೆ. ಮಾನಸಿಕ ಹಿಂಸೆ ಯಿಂದ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ಜೀವನ ಕಳೆದು ಕೊಳ್ಳುತ್ತಿದ್ದಾರೆ. ಇದರಿಂದ ಮಕ್ಕಳ ಆರೋಗ್ಯ ಕೆಟ್ಟುಹೋಗುತ್ತದೆ. ಮಾನಸಿಕ ನೆಮ್ಮದಿ ಕಳೆದು ಕೊಂಡು ರೋಗಿಗಳಾಗುತ್ತಿದ್ದಾರೆ. ದೈಹಿಕವಾಗಿ ದುರ್ಬಲರಾಗುತ್ತಿದ್ದಾರೆ ಎಂಬುದನ್ನು ಪಾಲಕರು ಅರ್ಥಮಾಡಿಕೊಂಡು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.ಶ್ರೀಕೃಷ್ಣ ಹಿಂಸೆ ಪ್ರೋತ್ಸಾಹಿಸಲಿಲ್ಲ ಅಧರ್ಮದ ವಿರುದ್ಧ ಧರ್ಮಕ್ಕಾಗಿ ಯುದ್ಧಮಾಡಲು ಹೇಳುತ್ತಾನೆ. ಹಿಂಸೆಯಿಂದ ಶಾಂತಿಯ ಕಡೆಗೆ ಹೋಗುವ ಮಾರ್ಗ ತೋರಿಸಿಕೊಟ್ಟ. ಪ್ರಾಮಾಣಿಕತೆ, ಸತ್ಯ, ಧರ್ಮದ ಬಗ್ಗೆ ಮಕ್ಕಳಿಗೆ ತಿಳಿಸಿರಿ, ಸುಮಾರು ಮೂರು ತಲೆಮಾರಿನಿಂದ ಇದು ನಿಂತು ಹೋಗಿದೆ ಎಂದು ಹೇಳಿದರು.
32 ಸಂಪುಟಗಳ ಮಹಾಭಾರತ, 1 ಲಕ್ಷ ಶ್ಲೋಕಗಳು, 32 ಲಕ್ಷ ಅಕ್ಷರಗಳಿಂದ ಕೂಡಿದ್ದಾಗಿದೆ. ಜ್ಞಾನವನ್ನು ಸಂಗ್ರಹಿಸಿಟ್ಟುಕೊಳ್ಳಬಾರದು, ಓದಿದ್ದನ್ನು ಇನ್ನೊಬ್ಬರಿಗೆ ಹೇಳಬೇಕು. ಓದಿದ್ದಕ್ಕೆ ಅಹಂಕಾರ ಬರಬಾರದು, ಶ್ರದ್ಧೆ ಇರದವರಿಗೆ, ಅಸೂಯೆ ಪಡುವರಿಗೆ, ಭಕ್ತರಲ್ಲದವರಿಗೆ, ದೇವರನ್ನು ದೂಷಿಸಿಸುವರಿಗೆ ಜ್ಞಾನ ಹೇಳಬಾರದು ಎಂದು ಶ್ರೀಕೃಷ್ಣ ಆಜ್ಞೆ ಮಾಡಿದ್ದಾನೆ. ಶ್ರದ್ಧೆಯಿಂದ ಓದಿದಷ್ಟು ತಿಳಿದಷ್ಟು ಹೇಳುತ್ತಿದ್ದೇನೆ ಎಂದರು.ಇಂದಿನ ದಿನದಲ್ಲಿ ಮಹಾಭಾರತದ ಅತ್ಯಂತ ಪ್ರಸ್ತುತವಾಗಿದೆ ಅದರ ಸಾರತಿಳಿದು ಜೀವನದಲ್ಲಿ ಬದಲಾವಣೆ ತಂದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ತಿಳಿದರು.
ರಾಘವೇಂದ್ರಾಚಾರ್ಯ ಜೋಷಿ, ಅರುಣ ತಿಕೊಟಿಕರ, ಪ್ರಹಲ್ಲಾದ ಜೋಷಿ, ಪ್ರದ್ಯುಮ್ನ ಜೋಷಿ ವೇದಿಕೆಯಲ್ಲಿದ್ದರು. ಮಾಜಿಶಾಸಕ ಶ್ರೀಕಾಂತ ಕುಲಕರ್ಣಿ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.