ಹೇಮಗಿರಿಯ ಕಲ್ಯಾಣ ವೆಂಕಟರಮಣಸ್ವಾಮಿಗೆ ಮಹಾಭಿಷೇಕ

| Published : Jan 11 2025, 12:47 AM IST

ಸಾರಾಂಶ

ತಾಲೂಕಿನ ವಿವಿಧ ವೈಷ್ಣವ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ- ಪುನಸ್ಕಾರಗಳು ಶ್ರದ್ಧಾ- ಭಕ್ತಿಯಿಂದ ನಡೆದವು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ವಿವಿಧ ವೈಷ್ಣವ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಅಂಗವಾಗಿ ವಿಶೇಷ ಪೂಜೆ- ಪುನಸ್ಕಾರಗಳು ಶ್ರದ್ಧಾ- ಭಕ್ತಿಯಿಂದ ನಡೆದವು.

ಹೇಮಗಿರಿಯ ಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯ, ಪಟ್ಟಣದ ಹೊಸಹೊಳಲು ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯ, ಮುತ್ತುರಾಯಸ್ವಾಮಿ ದೇವಾಲಯ, ಅಕ್ಕಿಹೆಬ್ಬಾಳು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಕಲ್ಲಹಳ್ಳಿಯ ಭೂ ವರಾಹನಾಥ ದೇವಾಲಯ, ಹರಿಹರಪುರದ ಚನ್ನಕೇಶವ ದೇವಾಲಯ, ಬೂಕನಕೆರೆಯ ಬೋಳಾರೆ ರಂಗನಾಥ ಸ್ವಾಮಿ ದೇವಾಲಯ, ಸಂತೇಬಾಚಹಳ್ಳಿಯ ವೀರನಾರಾಯಣಸ್ವಾಮಿ ದೇವಾಲಯ ಸೇರಿ ಅನೇಕ ಕಡೆ ವೈಕುಂಠ ಏಕಾದಶಿಯ ಅಂಗವಾಗಿ ವಿಶೇಷ ಅಭಿಷೇಕ ಹಾಗೂ ವೈಕುಂಠ ದ್ವಾರ ಪ್ರವೇಶ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ವಿವಿಧ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಆರಂಭಗೊಂಡ ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತ ಸಮುದಾಯ ಸ್ವ- ಕುಟುಂಬ ಪರಿವಾರ ಸಮೇತ ಆಗಮಿಸಿ ಭಗವಂತನಿಗೆ ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾದರು.

ಹೇಮಾವತಿ ನದಿ ತಟದ ಕಲ್ಯಾಣ ವೆಂಕಟರಮಣ ಸ್ವಾಮಿ ಸನ್ನಿಧಿ ಬೆಟ್ಟವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬೃಗು ಮಹರ್ಷಿಗಳ ತಪೋಭೂಮಿ ಎಂದೇ ಪುರಾಣ ಪ್ರಸಿದ್ಧ ಹೇಮಗಿರಿ ಬೆಟ್ಟದಲ್ಲಿ ಸ್ವಾಮಿಗೆ ವೈಕುಂಠ ದ್ವಾರ ಪ್ರವೇಶ ಕಾರ್ಯಗಳು ನಡೆದವು.

ಮುಂಜಾನೆಯಿಂದಲೇ ದೇವಾಲಯದ ಪ್ರಧಾನ ಅರ್ಚಕರಾದ ರಾಮಭಟ್ಟರ ನೇತೃತ್ವದಲ್ಲಿ ನಡೆದ ಪೂಜಾ ವಿಧಿ, ವಿಧಾನಗಳಲ್ಲಿ ಆದಿಚುಂಚನಗಿರಿಯ ಹೇಮಗಿರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್. ರಾಮಕೃಷ್ಣೇಗೌಡರು ಭಾಗವಹಿಸಿದ್ದರು.

ಮುಂಜಾನೆ 6.30ಕ್ಕೆ ಸರಿಯಾಗಿ ದಕ್ಷಿಣಾಭಿಮುಖವಾಗಿ ವಿಶೇಷವಾಗಿ ಸಜ್ಜುಗೊಳಿಸಿದ್ದ ವೈಕುಂಠ ದ್ವಾರದ ಮೂಲಕ ಕಲ್ಯಾಣ ವೆಂಕಟರಮಣಸ್ವಾಮಿ ದರ್ಶನ ಪಡೆದ ಭಕ್ತರು, ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ಶ್ರೀ ರಂಗನಾಥ ಸ್ವಾಮಿ, ಶ್ರೀ ಪದ್ಮವತಿ ಅಮ್ಮನವರು ಹಾಗೂ ಮುಖ್ಯಪ್ರಾಣ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಮಾಡಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಹೇಮಗಿರಿ ಬಿಜಿಎಸ್ ಪಬ್ಲಿಕ್ ಶಾಲೆ ಶಿಕ್ಷಕರು, ಬಂಡಿಹೊಳೆ, ಕುಪ್ಪಳ್ಳಿ, ಬಿ.ಬಿ.ಕಾವಲು, ಲಕ್ಷ್ಮೀಪುರ, ಮಾಕವಳ್ಳಿ, ನಾಟನಹಳ್ಳಿ ಸೇರಿ ಸುತ್ತ ಮುತ್ತಲಿನ ಗ್ರಾಮಸ್ಥರು ಪೂಜೆಯಲ್ಲಿ ಭಾಗವಹಿಸಿದ್ದರು.