ಮೂಲ ಮೂರ್ತಿ ಚೆಲ್ವ ತಿರುನಾರಾಯಣಸ್ವಾಮಿಗೆ ಮಹಾಭಿಷೇಕ

| Published : Jul 13 2025, 01:19 AM IST

ಮೂಲ ಮೂರ್ತಿ ಚೆಲ್ವ ತಿರುನಾರಾಯಣಸ್ವಾಮಿಗೆ ಮಹಾಭಿಷೇಕ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್‌ರ ಜನ್ಮ ನಕ್ಷತ್ರದ ಶುಭದಿನವಾದ ಶನಿವಾರ ಮೂಲ ಮೂರ್ತಿ ಚೆಲ್ವ ತಿರುನಾರಾಯಣ ಸ್ವಾಮಿಗೆ ವೇದ ಮಂತ್ರಗಳೊಂದಿಗೆ ಮಹಾಭಿಷೇಕ ನೆರವೇರಿತು. ಉತ್ತರಾಷಾಢ ನಕ್ಷತ್ರಕೂಡಿದ ದಿವ್ಯ ಶುಭಗಳಿಗೆಯಲ್ಲಿ ಸ್ವಾಮಿಗೆ ಮಹಾಭಿಷೇಕ ನೆರವೇರಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್‌ರ ಜನ್ಮ ನಕ್ಷತ್ರದ ಶುಭದಿನವಾದ ಶನಿವಾರ ಮೂಲ ಮೂರ್ತಿ ಚೆಲ್ವ ತಿರುನಾರಾಯಣ ಸ್ವಾಮಿಗೆ ವೇದ ಮಂತ್ರಗಳೊಂದಿಗೆ ಮಹಾಭಿಷೇಕ ನೆರವೇರಿತು.

ಉತ್ತರಾಷಾಢ ನಕ್ಷತ್ರಕೂಡಿದ ದಿವ್ಯ ಶುಭಗಳಿಗೆಯಲ್ಲಿ ಸ್ವಾಮಿಗೆ ಮಹಾಭಿಷೇಕ ನೆರವೇರಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು. ವೇದ ಮಂತ್ರಗಳೊಂದಿಗೆ ಹಾಲು ಮೊಸರು ಜೇನು ಗಂದ ಎಳೆನೀರು ಕುಂಭಾಭಿಷೇಕದೊಂದಿಗೆ ನಡೆಯಿತು.

ಮಹಾಭಿಷೇಕದ ವೈಭವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಧರ್ಮಪತ್ನಿ ಧನಲಕ್ಷ್ಮಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕಾಡೇನಹಳ್ಳಿ ನಾಗಣ್ಣಗೌಡ, ಹುಬ್ಬಳ್ಳಿ ಶಾಸಕ ಮಹೇಶ್ ಟೆಂಗಿನಕಾಯಿ, ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

ಮಹಾಭಿಷೇಕ ನಡೆಯುತ್ತಿದ್ದ ವೇಳೆ ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಸಹಸ್ರಾರು ಭಕ್ತರಿಗೆ ನಿರಾಶೆಯಾಗದಂತೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಹಾಭಿಷೇಕದ ನಂತರ ಸಂಜೆ ಪಾಂತಾಳಾಂಕಣದಲ್ಲಿರುವ ಕೃಷ್ಣರಾಜ ಒಡೆಯರ್ ಮತ್ತು ರಾಣಿಯರ ಭಕ್ತವಿಗ್ರಹಕ್ಕೆ ಚೆಲುವನಾರಾಯಣಸ್ವಾಮಿಯ ಪಾದುಕೆ ಮತ್ತು ಮಾಲೆಮರ್ಯಾಧೆಯನ್ನು ಭಕ್ತಿ ಪೂರ್ವಕವಾಗಿ ಅರ್ಪಿಸಲಾಯಿತು.

ನಂತರ ವಿಶ್ವಕ್ಸೇನರ ಉತ್ಸವ ನಡೆದು ಚೆಲುವನಾರಾಯಣ ಸ್ವಾಮಿಗೆ ಅಮ್ಮನವರ ಸನ್ನಿಧಿಯ ಬಳಿ ಕಲ್ಯಾಣೋತ್ಸವ ನೆರವೇರಿತು. ಸಮನ್ಮಾಲೆ, ಲಾಜಹೋಮದೊಂದಿಗೆ ವೈಭವಯುತವಾಗಿ ಚೆಲುವನಾರಾಯಣ ಸ್ವಾಮಿ- ಕಲ್ಯಾಣ ನಾಯಕಿಗೆ ಕಲ್ಯಾಣೋತ್ಸವ ನೆರವೇರಿತು.

ಚೆಲುವನಾರಾಯಣಸ್ವಾಮಿಗೆ ಮೈಸೂರು ಅರಸರ ಪೈಕಿ ಮಹಾರಾಜ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ನೀಡಿದ ಕೊಡುಗೆ ಸ್ಮರಿಸಿದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ವಿದ್ವಾನ್ ಆನಂದಾಳ್ವಾರ್ ಸ್ಮರಿಸಿದರು.

ಆಷಾಢ ಜಾತ್ರೆಗೆ ರಥಸಹ ಕೊಡುಗೆ ನೀಡಿ ನೆಲೆಗಾಗಿ ಮಂಟಪ ನಿರ್ಮಿಸಿದ್ದರು. ಇದರ ಜೊತೆಗೆ ಚೆಲುವನಾರಾಯಣನಿಗೆ ಹಲವಾರು ಮುತ್ತಿನ ಆಭರಣ ನೀಡಿದ್ದಾರೆ. ಯೋಗ ನರಸಿಂಹಸ್ವಾಮಿಗೆ ಬಂಗಾರದ ಕಿರೀಟ ಅರ್ಪಿಸಿದ್ದಾರೆ. ಒಡೆಯರ್ ಮೇಲುಕೋಟೆಯಲ್ಲಿ ಹಲವು ಕೊಳಗಳು ಮಂಟಪಗಳು ಹಾಗೂ ತೋಟ ನಿರ್ಮಾಣ ಮಾಡಿ ದೇವಾಲಯ ನಿರ್ವಹಣೆಗೆ ನೂರಾರು ಎಕರೆ ಜಮೀನನ್ನು ದತ್ತಿ ಬಿಟ್ಟಿದ್ದರು. ಇಂತಹ ಸೇವೆಗಾಗಿಯೇ ದೇವಾಲಯದ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಭಕ್ತವಿಗ್ರಹಕ್ಕೆ ಪ್ರತಿದಿನ ಎರಡೂ ವೇಳೆ ವಿಶೇಷ ಪೂಜೆ ಗೌರ ಅರ್ಪಿಸುವ ಮೂಲಕ ದಿನ ನಿತ್ಯ ನೆನಪಿಸಿಕೊಳ್ಳುತ್ತೇವೆ ಎಂದು ಹೇಳಿದರು.