ಸಾರಾಂಶ
ಗೋವಾ ವಿದ್ಯುತ್ ಯೋಜನೆಗೆ ಸಾವಿರಾರು ಮರ ಕಡಿಯಲಾಗುತ್ತಿದೆ. ಹೀಗಾಗಿ, ಇದನ್ನು ರಾಜ್ಯ ಸರಕಾರ ತಿರಸ್ಕರಿಸಿತ್ತು. ಆದರೀಗ ಪುನರ್ ಪರಿಶೀಲಿಸುವಂತೆ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆಗೆ ಪ್ರಸ್ತಾವನೆ ಬಂದಿದೆ.
ಹುಬ್ಬಳ್ಳಿ:
ಕಳಸಾ-ಬಂಡೂರಿ ನಾಲಾ ಯೋಜನೆ ಅನುಮೋದನೆಗೆ ಕೇಂದ್ರ ವನ್ಯಜೀವಿ ಮಂಡಳಿ ಹಾಗೂ ಹವಾಮಾನ ಇಲಾಖೆಗೆ ರಾಜ್ಯ ಸರಕಾರ ಕಳುಹಿಸಿದ್ದ ಶಿಫಾರಸು ತಡೆ ಹಿಡಿಯುವ ಮೂಲಕ ರಾಜ್ಯದ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಅರಣ್ಯ ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆ ವಿರೋಧಿಸಿ ಸುಪ್ರೀಂಕೋರ್ಟ್‌ಗೆ ಹೋಗಿದೆ. ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ, ಭೂಪೇಂದ್ರ ಯಾದವ್ ಅವರನ್ನೊಳಗೊಂಡಿರುವ ವನ್ಯಜೀವಿ ಮಂಡಳಿ ಶಿಫಾರಸು ಸಮ್ಮತಿಸದೇ, ಯೋಜನೆ ಅನುಷ್ಠಾನದಲ್ಲಿ ಯಾವುದೇ ಕೆಲಸ ಮಾಡದೇ ಬಿಜೆಪಿ ನಿರಾಸಕ್ತಿ ಭಾವ ತೋರುತ್ತಿದೆ ಎಂದರು.
ಸದ್ಯ ಗೋವಾ ವಿದ್ಯುತ್ ಯೋಜನೆಗೆ ಸಾವಿರಾರು ಮರ ಕಡಿಯಲಾಗುತ್ತಿದೆ. ಹೀಗಾಗಿ, ಇದನ್ನು ರಾಜ್ಯ ಸರಕಾರ ತಿರಸ್ಕರಿಸಿತ್ತು. ಆದರೀಗ ಪುನರ್ ಪರಿಶೀಲಿಸುವಂತೆ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆಗೆ ಪ್ರಸ್ತಾವನೆ ಬಂದಿದೆ. ಈ ವಿಚಾರವನ್ನು ಸಿಎಂ ಹಾಗೂ ಡಿಸಿಎಂ ಗಮನಕ್ಕೆ ತಂದಿದ್ದು, ಕಳಸಾ ಬಂಡೂರಿ ನಾಲಾ ಯೋಜನೆಗೆ ಅನುಮೋದನೆ ನೀಡುವಂತೆ ಸೇರಿ ಹಲವು ಷರತ್ತು ವಿಧಿಸಿದ ಪ್ರಸ್ತಾವ ಕಳಿಸುವಂತೆ ಸೂಚಿಸಿದ್ದಾರೆ. ಆ ಮೂಲಕ ರಾಜ್ಯ ಸರಕಾರ ಕಳಸಾ-ಬಂಡೂರಿ ಯೋಜನೆ ಅನುಷ್ಠಾನದಲ್ಲಿ ಬದ್ಧತೆ ತೋರಿದೆ ಎಂದರು.ಬಿಜೆಪಿಯವರು ಹತಾಶೆಯಿಂದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಅನೇಕ ನಾಯಕರ ಮೇಲೆ ಇಲ್ಲ-ಸಲ್ಲದ ಆರೋಪ, ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧಿ ಹಾಗೂ ನೆಹರೂ ಕುಟುಂಬ ತ್ಯಾಗ-ಬಲಿದಾನ ದೊಡ್ಡದಿದೆ. ಆದರೆ, ಕೇಂದ್ರ ಸಚಿವರು ಹಾಗೂ ಬಿಜೆಪಿ ನಾಯಕರು ಕೀಳುಮಟ್ಟದ ಹೇಳಿಕೆ ನೀಡಿ ಅವರನ್ನು ಭಯೋತ್ಪಾದಕರೆಂಬಂತೆ ಬಿಂಬಿಸುತ್ತಿರುವುದು ಖಂಡನೀಯ ಎಂದರು.