ಕೇಂದ್ರ ಪರವಾನಗಿ ಕೊಟ್ಟರೆ ನಾಳೆಯೇ ಮಹದಾಯಿ ಆರಂಭ

| Published : Apr 26 2024, 12:46 AM IST

ಸಾರಾಂಶ

ಮಹದಾಯಿ ಯೋಜನೆ ಜಾರಿ ಮಾಡುತ್ತೇವೆ ಎಂದು ಈ ಹಿಂದೆ ಬಿಜೆಪಿಗರು ರಕ್ತದಲ್ಲಿ ಬರೆದುಕೊಟ್ಟಿದ್ದರು.

ಗಜೇಂದ್ರಗಡ: ಮಹದಾಯಿ ಕುಡಿಯುವ ನೀರಿನ ಯೋಜನೆಗೆ ನಾವು ಟೆಂಡರ್ ಕರೆದಿದ್ದೇವೆ, ಕೇಂದ್ರ ಸರ್ಕಾರ ಪರವಾನಗಿ ಕೊಟ್ಟರೆ ನಾಳೆಯೇ ಮಹದಾಯಿ ಕುಡಿವ ನೀರಿನ ಯೋಜನೆ ಆರಂಭಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಗುರುವಾರ ಪಟ್ಟಣದ ರೋಣ ರಸ್ತೆಯ ಪುರಸಭೆ ಬಯಲು ಜಾಗೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದರು.

ಮಹದಾಯಿ ಯೋಜನೆ ಜಾರಿ ಮಾಡುತ್ತೇವೆ ಎಂದು ಈ ಹಿಂದೆ ಬಿಜೆಪಿಗರು ರಕ್ತದಲ್ಲಿ ಬರೆದುಕೊಟ್ಟಿದ್ದರು. ಆದರೆ ಪರಿಸರ ಮಂಜೂರಾತಿ ಕೊಡಿಸಲು ಬೊಮ್ಮಾಯಿ ಹಾಗೂ ಬಿಜೆಪಿಗರಿಗೆ ಆಗಲಿಲ್ಲ. ಪ್ರಧಾನಿ ಮೋದಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವರಲ್ಲ. ಬೊಮ್ಮಾಯಿ ಅವರು ೨ ವರ್ಷಗಳ ಕಾಲ ಸಿಎಂ ಆಗಿದ್ದಾಗ ಈ ಭಾಗಕ್ಕೆ ನೀಡಿದ ಕೊಡುಗೆ ಶೂನ್ಯವಾಗಿದೆ. ಬಿಎಸ್‌ವೈ ಹಾಗೂ ಬೊಮ್ಮಾಯಿ ಸಿಎಂ ಆಗಿದ್ದಾಗ ಅನ್ನಭಾಗ್ಯ ಅಕ್ಕಿಯನ್ನು ೫ ಕೆಜಿಗೆ ಇಳಿಸುವ ಮೂಲಕ ಬಡಜನರ ಬದುಕನ್ನು ದುಸ್ತರಗೊಳಿಸಲು ಮುಂದಾಗಿದ್ದರು. ನಾವು ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಅನ್ನಭಾಗ್ಯ ಅಡಿ ೧೦ ಕೆಜಿ ಅಕ್ಕಿ ನೀಡುತ್ತಿದ್ದೇವೆ. ರಾಜ್ಯದಲ್ಲಿ ಬಿಎಸ್‌ವೈ ಸಿಎಂ ಆಗಿದ್ದಾಗ ದೊಡ್ಡ ಪ್ರವಾಹದಿಂದ ಹಾಗೂ ಈಗ ರಾಜ್ಯದ ೨೨೩ ತಾಲೂಕುಗಳಲ್ಲಿ ಭೀಕರ ಬರಗಾಲ ಎದುರಾಗಿದ್ದರು ಸಹ ಪ್ರಧಾನಿ ಮೋದಿ ಕನ್ನಡಿಗರ ಕಷ್ಟ, ಸುಖ ಆಲಿಸಲು ಬರಲಿಲ್ಲ. ಈಗ ಚುನಾವಣೆ ಪ್ರಚಾರಕ್ಕಾಗಿ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿನ ಬರಗಾಲ ಪರಿಹಾರ ಬಿಡುಗಡೆ ಮಾಡುವಂತೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಭೇಟಿಯಾಗಿ ಮನವಿ ಮಾಡಿದರೂ ಸಹ ಕೇಂದ್ರ ಸರ್ಕಾರ ನಯಾ ಪೈಸೆ ಬಿಡುಗಡೆ ಮಾಡಲಿಲ್ಲ. ಇಂತಹ ಜನವಿರೋಧಿ, ಕರ್ನಾಟಕ ವಿರೋಧಿ ಕೇಂದ್ರ ಸರ್ಕಾರಕ್ಕೆ ರಾಜ್ಯದ ಜನತೆಯ ಕಷ್ಟ ತಿಳಿಸುವ ಕೆಲಸವನ್ನು ರಾಜ್ಯದ ಸಂಸದರು ಮಾಡಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಸುಪ್ರೀಂ ಕೋರ್ಟ ಮೆಟ್ಟಿಲು ಹತ್ತಿದ ಪರಿಣಾಮ ಏ. ೨೮ ರೊಳಗೆ ಪರಿಹಾರ ನೀಡುವುದಾಗಿ ಸುಪ್ರೀಂ ಕೋರ್ಟನಲ್ಲಿ ಹೇಳಿದ್ದಾರೆ. ರಾಜ್ಯದ ಜನತೆಯ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರದ ವಿರುದ್ಧ ರಾಜ್ಯದ ಪಾಲಿನ ತೆರಿಗೆ ಪಡೆಯಲು ನಾವು ಸುಪ್ರಿಂ ಕೋರ್ಟ್ ಗೆ ಹೋಗದಿದ್ದರೆ ನಮ್ಮ ಪಾಲಿನ ತೆರಿಗೆ ಹಣ ಸಿಗುವ ಸಾಧ್ಯತೆ ಇರಲಿಲ್ಲ. ಹೀಗಾಗಿ ಇಂತಹ ರೈತವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಮತ ಚಲಾಯಿಸುವ ಮೂಲಕ ಜನತೆ ಪ್ರತಿಭಟಿಸಬೇಕಿದೆ ಎಂದರು.

ಕಾಂಗ್ರೆಸ್ ಘೋಷಿಸಿದ ಪ್ರಣಾಳಿಕೆಯಲ್ಲಿನ ಭರವಸೆಗಳ ಜತೆಗೆ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದು ನುಡಿದಂತೆ ನಡೆದಿದೆ. ಆದರೆ ಬಿಜೆಪಿ ಕೇವಲ ಸುಳ್ಳುಗಳನ್ನು ಹೇಳುತ್ತಿದೆ. ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ೧ ಲಕ್ಷ ಅಂತರ ಮತದಿಂದ ಗೆಲ್ಲಿಸಿ ಎಂದರು.

ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ಪಂಚ ಗ್ಯಾರಂಟಿಗಳ ಜನಪ್ರಿಯತೆ ಕಂಡು ಮೋದಿ ಅವರ ನಿಂತ ನೆಲ ನಡುಗುತ್ತಿದೆ. ರಾಜ್ಯದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಹಾಸ್ಯ ಮಾಡಿದ ಮೋದಿ ಅವರೇ ಈಗ ನೀವು ಮೋದಿ ಗ್ಯಾರಂಟಿ ಎಂದು ಹೇಳಲು ನಾಚಿಕೆಯಾಗಲ್ಲವೇ ಎಂದು ಪ್ರಶ್ನಿಸಿದ ಅವರು, ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದರು.

ಶಾಸಕ ಜಿ.ಎಸ್. ಪಾಟೀಲ್ ಮತನಾಡಿ, ಕಳೆದ ೬೫ ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಅಖಂಡ ಭಾರತವನ್ನು ಕಾಯ್ದುಕೊಂಡ ಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ. ಆದರೆ ಪ್ರಧಾನಿ ಮೋದಿ ಅವರು ಭಾರತೀಯರನ್ನು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಇತ್ತ ಮಾಜಿ ಸಿಎಂ ಅವರು ಉತ್ತರ ಕರ್ನಾಟಕಕ್ಕೆ ಏನು ಮಾಡಿದ್ದಾರೆ. ಮಹದಾಯಿಗಾಗಿ ರಕ್ತದಲ್ಲಿ ಪತ್ರ ಬರೆದಿದ್ದರು. ಆದರೆ ಅಧಿಕಾರಕ್ಕೆ ಬಂದ ಬಳಿಕ ದಮ್ಮು ತಾಕತ್ತು ಎಂದು ಮಾತನಾಡಿದರು ಹೊರತು ನೀರು ತರಲಿಲ್ಲ ಎಂದರು.

ಶಾಸಕ ರುದ್ರಪ್ಪ ಲಮಾಣಿ, ಮುಖ್ಯ ಸಚೇತಕ ಸಲೀಂ ಅಹ್ಮದ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮಾಜಿ ಸಂಸದ ಆರ್.ಎಸ್. ಪಾಟೀಲ, ಮಾಜಿ ಸಚಿವ ಆರ್. ಶಂಕರ, ಮಾಜಿ ಶಾಸಕರಾದ ಬಿ.ಆರ್.ಯಾವಗಲ್, ರಾಮಕೃಷ್ಣ ದೊಡ್ಡಮನಿ, ಜಿ.ಎಸ್.ಗಡ್ಡದೇವರಮಠ, ರಾಮಣ್ಣ ಲಮಾಣಿ, ಡಿ.ಆರ್. ಪಾಟೀಲ ಸೇರಿದಂತೆ ಸಿದ್ದಪ್ಪ ಬಂಡಿ, ಎಚ್‌.ಎಸ್‌. ಸೋಮಪುರ, ರೂಪಾ ಅಂಗಡಿ ಶಿವರಾಜ ಘೋರ್ಪಡೆ, ಶಶಿಧರ ಹೂಗಾರ, ಅಜೀತ ಬಾಗಮಾರ, ಶ್ರೀಕಾಂತ್ ಅವಧೂತ, ರಾಜು ಸಾಂಗ್ಲೀಕರ, ಎ.ಡಿ. ಕೋಲಕಾರ, ಎಫ್.ಎಸ್. ಕರಿದುರಗನವರ ಸೇರಿದಂತೆ ಪಕ್ಷದ ಪ್ರಮುಖರು ಇದ್ದರು.