ಸಾರಾಂಶ
ಬಳ್ಳಾರಿ: "ರಕ್ತದಾನ ಮಾಡಿ ಜೀವ ಉಳಿಸಿ " ಎಂಬ ಘೋಷಣೆಗಳು ಹಾಗೂ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಪ್ರತಿವರ್ಷ ರಕ್ತದಾನಿಗಳ ದಿನಾಚರಣೆ ವೇಳೆ ಕಂಡು ಬರುವ ಸಾಮಾನ್ಯ ದೃಶ್ಯಗಳು. ಬಳಿಕ ರಕ್ತದಾನದಂತಹ ಮಹತ್ವದ ಕಾರ್ಯವನ್ನು ಮರೆಯುವವರೇ ಹೆಚ್ಚು. ಆದರೆ, ನಗರದ ನಿವೃತ್ತ ಬ್ಯಾಂಕ್ ಉದ್ಯೋಗಿ ಬಿ.ದೇವಣ್ಣ ಅವರು ವರ್ಷದುದ್ದಕ್ಕೂ ರಕ್ತದಾನ ಹಾಗೂ ರಕ್ತದಾನದ ಮಹತ್ವದ ಜಾಗೃತಿ ಕೆಲಸವನ್ನು ತಪ್ಪದೇ ಪಾಲಿಸಿಕೊಂಡು ಬರುವ ಮೂಲಕ ಸಮಾಜಮುಖಿ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಅಂದಹಾಗೆ ಇವರು ಈವರೆಗೆ ಬರೋಬ್ಬರಿ 108 ಬಾರಿ ರಕ್ತದಾನ ಮಾಡಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಬಾರಿ ರಕ್ತದಾನ ಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ.ರಕ್ತದಾನದ ಪ್ರೇರಣೆ ಬಂದದ್ದು ಹೇಗೆ?: ಐಟಿಐ ಓದುವ ವೇಳೆ ವ್ಯಕ್ತಿಯೊಬ್ಬ ರಸ್ತೆ ಅಪಘಾತಕ್ಕೀಡಾಗಿರುತ್ತಾರೆ. ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ದೇವಣ್ಣ ಹಾಗೂ ಗೆಳೆಯರು ಸೇರಿ ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಈ ವೇಳೆ ಗಾಯಾಳುಗೆ ರಕ್ತದ ಅಗತ್ಯವಿದೆ. ಯಾರಾದರೂ ರಕ್ತದಾನ ಮಾಡಿದರೆ ಗುಣಮುಖರಾಗುತ್ತಾರೆ ಎಂದು ವೈದ್ಯರು ತಿಳಿಸುತ್ತಾರೆ. ಆಗ ದೇವಣ್ಣನವರೇ ರಕ್ತದಾನ ಮಾಡಿ, ವ್ಯಕ್ತಿಯ ಜೀವ ಉಳಿಸುತ್ತಾರೆ. ಚಿಕಿತ್ಸೆಯಿಂದ ಗುಣಮುಖಗೊಂಡ ವ್ಯಕ್ತಿ ಹಾಗೂ ಆತನ ತಂದೆ-ತಾಯಿ ಐಟಿಐ ಕಾಲೇಜಿಗೆ ಬಂದು ದೇವಣ್ಣಗೆ ಕೃತಜ್ಞತೆ ಸಲ್ಲಿಸುತ್ತಾರೆ. ಅಂದು ದೇವಣ್ಣಗೆ ರಕ್ತದಾನದ ಮಹತ್ವ ಗೊತ್ತಾಗುತ್ತದೆ. ಇನ್ನು ಮುಂದೆ ನಿರಂತರ ರಕ್ತದಾನ ಮಾಡುವ ನಿರ್ಧಾರಕ್ಕೆ ಬರುತ್ತಾರೆ. ಅಂದು ಶುರುಗೊಂಡ ರಕ್ತದಾನದ ಕಾರ್ಯ ಬ್ಯಾಂಕ್ ನೌಕರಿ ನಿವೃತ್ತಿಯ ಬಳಿಕವೂ ಮುಂದುವರಿದಿದೆ. ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರ ಮುಂದುವರಿಸಿದ್ದು, ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 500ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಿ, ಕಾಳಜಿ ಮೆರೆದಿದ್ದಾರೆ.
ಬಳ್ಳಾರಿಯಲ್ಲಿ ದೇವಣ್ಣ ಎಷ್ಟರಮಟ್ಟಿಗೆ ಖ್ಯಾತಿ ಗಳಿಸಿದ್ದಾರೆ ಎಂದರೆ ಇವರನ್ನು ಬ್ಲಡ್ ಬ್ಯಾಂಕ್ ದೇವಣ್ಣ ಎಂದೇ ಕರೆಯುತ್ತಾರೆ. ನಗರದಲ್ಲಿ ಎಲ್ಲೇ ರಕ್ತದಾನ ಶಿಬಿರವಿದ್ದರೂ ದೇವಣ್ಣ ಹಾಜರಾಗಿ, ತಮ್ಮಿದಾಂದ ಸಹಾಯ ಮಾಡುತ್ತಾರೆ. ಯಾರಿಗಾದರೂ ತುರ್ತು ರಕ್ತದ ಅಗತ್ಯವಿದೆ ಎಂದಾದರೆ ದೇವಣ್ಣಗೆ ಕರೆ ಮಾಡಿ ಎಂಬಷ್ಟರ ಮಟ್ಟಿಗೆ ದೇವಣ್ಣನವರ ಸೇವಾ ಕೈಂಕರ್ಯ ಖ್ಯಾತಿಗೊಂಡಿದೆ. ಇವರ ಸೇವಾ ಕಾರ್ಯವನ್ನು ಗುರುತಿಸಿ ರೆಡ್‌ಕ್ರಾಸ್ ಸಂಸ್ಥೆ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ. ಜಿಲ್ಲಾಡಳಿತ ಜಿಲ್ಲಾ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಿ, ಗೌರವಿಸಿದೆ.ಮಗನ ಮದುವೆಯ ಆರತಕ್ಷತೆಯಲ್ಲೂ ರಕ್ತದಾನ ಶಿಬಿರ: ದೇವಣ್ಣಗೆ ರಕ್ತದಾನದ ಬಗ್ಗೆ ಎಷ್ಟು ಕಾಳಜಿಯಿದೆ ಎಂದರೆ ಕಳೆದ ವರ್ಷ ಜರುಗಿದ ಮಗನ ಮದುವೆಯ ಆರತಕ್ಷತೆಯಲ್ಲೂ ರಕ್ತದಾನ ಶಿಬಿರ ಸಂಘಟಿಸಿ 51 ಜನರಿಂದ ರಕ್ತದಾನ ಮಾಡಿಸಿದ್ದರು. ನಗರದ ಬಲಿಜ ಭವನದಲ್ಲಿ ಕಳೆದ ವರ್ಷ ನಡೆದ ಪುತ್ರ ಕೆ.ಶ್ರೀಕಾಂತ್ ಹಾಗೂ ಹೇಮಶ್ರೀ ದಂಪತಿ ಮದುವೆಯ ಆರತಕ್ಷತೆಯಲ್ಲಿ ರಕ್ತದಾನ ಶಿಬಿರ ನಡೆಸಿ, ಮಾನವೀಯ ಕಾಳಜಿ ಮೆರೆಯುತ್ತಾರೆ.
ರಕ್ತದಾನದ ಸೇವೆ ನನಗೆ ಹೆಚ್ಚು ತೃಪ್ತಿ ನೀಡಿದೆ. ಹೀಗಾಗಿ ರಕ್ತದಾನವನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವೆ. ರಕ್ತದಾನದ ಬಗ್ಗೆ ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ ನಿವೃತ್ತ ಎಸ್‌ಬಿಐ ನೌಕರ ಹಾಗೂ ರಕ್ತದಾನಿ ಬಿ.ದೇವಣ್ಣ.